Advertisement
ಹಸೀನಾಗೆ ಭಾರತ ಆಶ್ರಯ ನೀಡಿರುವುದರಿಂದ ಉಭಯ ರಾಷ್ಟ್ರಗಳ ಸಂಬಂಧ ಹಾಳಾಗಬಹುದು ಎಂದು ಬಾಂಗ್ಲಾದ ವಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಎಚ್ಚರಿಕೆ ನೀಡಿದೆ. ಬಿಎನ್‌ಪಿ ಹಿರಿಯ ನಾಯಕ ಗಯೇಶ್ವರ್ ರಾಯ್ ಮಾತನಾಡಿ, “ಭಾರತಕ್ಕೆ ಒಂದು ರಾಷ್ಟ್ರದೊಂದಿಗಿನ ಸಂಬಂಧ ಮುಖ್ಯವೋ ಅಥವಾ ಒಂದು ಪಕ್ಷವೋ ಎಂಬುದನ್ನು ಅದೇ ನಿರ್ಧರಿಸಬೇಕು’ ಎಂದಿದ್ದಾರೆ. ಮತ್ತೂಬ್ಬ ನಾಯಕ ಖಂಡಕರ್ ಮೋಷರಫ್ ಹುಸೇನ್, ನಮ್ಮ ಶತ್ರುವಿಗೆ ಯಾರು ಆಶ್ರಯ ನೀಡುತ್ತಾರೋ ಅಂಥವರ ವಿರುದ್ಧವೂ ಅಸಹನೆ ಮೂಡುವುದು ಸಹಜ ಎಂದಿದ್ದಾರೆ. ಇತ್ತ ಭಾರತಕ್ಕೆ ತಾತ್ಕಾಲಿಕವಾಗಿ ಬಂದ ಹಸೀನಾ ಬ್ರಿಟನ್‌ಗೆ ತೆರಳಬೇಕು ಎಂದುಕೊಂಡಿದ್ದರು. ಆದರೆ ಅಲ್ಲಿನ ಸರಕಾರ ಇದಕ್ಕೆ ಅನುಮತಿ ನೀಡಿಲ್ಲ. ಇತ್ತ ಅಮೆರಿಕ ಕೂಡ ಹಸೀನಾರ ವೀಸಾ ನಿರ್ಬಂಧಿಸಿದ್ದು , ಯುಎಇ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಆಶ್ರಯ ಕೋರಲು ಹಸೀನಾ ಯೋಜಿಸಿ ದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಅವರಿಗೆ ಆಶ್ರಯ ನೀಡಲೇಬೇಕಾದ ಬಿಕ್ಕಟ್ಟಿಗೆ ಭಾರತ ಸಿಲುಕಿದೆ.
ಬಾಂಗ್ಲಾ ಹಿಂಸಾಚಾರದ ಹಿನ್ನೆಲೆಯಲ್ಲಿ ಆ.1ರ ವರೆಗೆ 2 ವಾರಗಳಲ್ಲಿ 7,200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ತಿಳಿಸಿದೆ. ಬಾಂಗ್ಲಾದಲ್ಲಿರುವ ಭಾರತೀಯ ಹೈಕಮಿಷನ್‌ಗಳು ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ನೆರವಾಗುತ್ತಿವೆ ಎಂದೂ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ತಿಳಿಸಿದ್ದಾರೆ. ಭಾರತ-ಬಾಂಗ್ಲಾ ಗಡಿ ನಿಗಾಕ್ಕೆ ಕೇಂದ್ರದಿಂದ 5 ಸದಸ್ಯರ ಸಮಿತಿ
ಭಾರತ-ಬಾಂಗ್ಲಾ ಗಡಿಯಲ್ಲಿನ ಪ್ರಸಕ್ತ ಪರಿಸ್ಥಿತಿ ಪರಿಶೀಲಿಸುವುದಕ್ಕಾಗಿ ಕೇಂದ್ರ ಸರಕಾರ ಬಿಎಸ್‌ಎಫ್ನ ಪೂರ್ವ ಕಮಾಂಡ್‌ನ ಹೆಚ್ಚುವರಿ ಮಹಾ ನಿರ್ದೇಶಕರ (ಎಡಿಜಿ) ನೇತೃತ್ವದಲ್ಲಿ 5 ಸದಸ್ಯರ ಸಮಿತಿಯನ್ನು ರಚಿಸಿದೆ. ಬಾಂಗ್ಲಾದಲ್ಲಿ ಮಧ್ಯಾಂತರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಮಾಜಿ ಪ್ರಧಾನಿ ಹಸೀನಾಗೆ ಭಾರತ ಆಶ್ರಯ ನೀಡುವುದರ ಬಗ್ಗೆ ಆಕ್ಷೇಪ ಕೇಳಿಬರುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದು,”ಬಾಂಗ್ಲಾದ ಪ್ರಸಕ್ತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಸಮಿತಿ ರಚಿಸಲಾಗಿದೆ. ಸಮಿತಿಯ ಅಧಿಕಾರಿಗಳು ಬಾಂಗ್ಲಾದ ಜತೆ ಸಂವಹನ ನಡೆಸಿ, ಭಾರತೀಯ ಪ್ರಜೆಗಳ, ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾಕರ ಸುರಕ್ಷೆಯನ್ನು ಖಾತರಿ ಪಡಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.