Advertisement

Mangaluru KPT ಸ್ವಾಯತ್ತ ಸ್ಥಾನಮಾನ

11:33 PM Oct 19, 2024 | Team Udayavani |

ಮಂಗಳೂರು: ನಗರದ ಕದ್ರಿಯಲ್ಲಿರುವ 78 ವರ್ಷಗಳ ಹಿರಿಮೆಯ “ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌’ (ಕೆಪಿಟಿ) ಶಿಕ್ಷಣ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ಲಭಿಸಿದ್ದು, ಈ ಸಾಧನೆ ಮಾಡಿರುವ ರಾಜ್ಯದ ಮೊದಲ ಸರಕಾರಿ ಪಾಲಿಟೆಕ್ನಿಕ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸ್ವಾಯತ್ತೆಯ ಆಧಾರದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ.

Advertisement

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಇಲ್ಲಿಯ ವರೆಗೆ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಮಾತ್ರ ಸ್ವಾಯತ್ತ ಮಾನ್ಯತೆ ನೀಡುತ್ತಿತ್ತು. ಡಿಪ್ಲೊಮಾ ಕಾಲೇಜುಗಳಿಗೆ ಮಾನ್ಯತೆ ನೀಡುವ ಕ್ರಮ ಇರಲಿಲ್ಲ. ಈಗ ದೇಶದಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಡಿಪ್ಲೊಮಾ ಕಾಲೇಜುಗಳಿಗೂ ಸ್ವಾಯತ್ತ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ. ಅದರಂತೆ ದೇಶದಲ್ಲಿ ಹಲವು ಸರಕಾರಿ ಪಾಲಿಟೆಕ್ನಿಕ್‌ಗಳು ಸ್ವಾಯತ್ತ ಸ್ಥಾನಮಾನ ಪಡೆದಿವೆ.

ಮಾನ್ಯತೆ ಪಡೆಯಲು ಒಂದೂವರೆ ವರ್ಷ ಹಿಂದೆ ಪ್ರಕ್ರಿಯೆ ಆರಂಭಿಸ ಲಾಗಿತ್ತು. ಕಳೆದ ಜುಲೈ ತಿಂಗಳಿನಲ್ಲಿ ಎಐಸಿಟಿಇ ಪ್ರಮುಖರ ತಂಡ ಕಾಲೇಜಿಗೆ ಬಂದು ಮೌಲ್ಯಮಾಪನವನ್ನೂ ನಡೆಸಿತ್ತು. ಮಾನ್ಯತೆ ಪಡೆಯುವ ಸಂಸ್ಥೆ 50 ವರ್ಷ ಪೂರೈಸಿರಬೇಕು ಎನ್ನುವ ಅಂಶ ನಿಯಮಾವಳಿಯಲ್ಲಿತ್ತು.

ಮಾನ್ಯತೆಯ ಲಾಭವೇನು?
ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ಪಾಲಿಟೆಕ್ನಿಕ್‌ಗಳಿಗೆ ಇಡೀ ರಾಜ್ಯದಲ್ಲಿ ಒಂದೇ ರೀತಿಯ ಪಠ್ಯಕ್ರಮ ಇದೆ. ಸ್ವಾಯತ್ತ ಸ್ಥಾನಮಾನ ಪಡೆಯುವುದರಿಂದ ಕೈಗಾರಿಕೆ ಗಳಿಗೆ ಪೂರಕವಾದ ಪಠ್ಯಕ್ರಮಗಳನ್ನು ತಯಾರಿಸಲು ಅನುಕೂಲವಾಗಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹೆಚ್ಚಿನ ಲಾಭವಾಗಲಿದೆ.

ಪಠ್ಯಕ್ರಮ, ಪರೀಕ್ಷೆಯ ಪ್ರಶ್ನೆಪತ್ರಿಕೆ ತಯಾರಿ, ಪರೀಕ್ಷೆಗಳು ಕಾಲೇಜಿನಲ್ಲೇ ನಡೆಯ
ಲಿವೆ. ದಾಖಲಾತಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೂಡ ಕಾಲೇಜಿನಲ್ಲೇ ನಡೆ ಸಲು ಅನುಕೂಲವಾಗಲಿದೆ. ಕೈಗಾರಿಕೆಗಳೊಂದಿಗೆ ನೇರವಾಗಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಎಐಸಿಟಿಇ ಅಥವಾ ಎಂಎಚ್‌ಆರ್‌ಡಿಯಿಂದ ಅನುದಾನಗಳನ್ನು ನೀಡುವಾಗ ಆದ್ಯತೆ ದೊರೆಯಲಿದೆ ಎನ್ನುತ್ತಾರೆ ಪ್ರಾಂಶುಪಾಲರಾದ ಹರೀಶ ಶೆಟ್ಟಿ.

Advertisement

5 ವರ್ಷಗಳ ವರೆಗೆ ಮಾನ್ಯತೆ
ಸ್ವಾಯತ್ತ ಮಾನ್ಯತೆ ಮುಂದಿನ 5 ವರ್ಷಗಳಿಗೆ ಅನ್ವಯವಾಗಲಿದ್ದು, ಸಂಸ್ಥೆ ಇದನ್ನು ಮುಂದುವರಿಸಲು ಇಚ್ಛಿಸಿದಲ್ಲಿ 5 ವರ್ಷ ಪೂರ್ಣಗೊಳ್ಳುವ ಮೂರು ತಿಂಗಳ ಮೊದಲು ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು.

8 ವಿಭಾಗಗಳು, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
1946ರಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಆಟೋಮೊಬೈಲ್‌ ಎಂಬ ನಾಲ್ಕು ಡಿಪ್ಲೊಮಾ ಎಂಜಿನಿಯರಿಂಗ್‌ ಶಾಖೆಗಳೊಂದಿಗೆ ಅರಂಭವಾದ ಸಂಸ್ಥೆಗೆ ಈಗ 78 ವರ್ಷ ತುಂಬಿದೆ. ಹಿಂದಿನ ಮದ್ರಾಸ್‌ ಸರಕಾರದ ಅಡಿಯಲ್ಲಿ ಪಾಂಡೇಶ್ವರದಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ 1954ರಲ್ಲಿ ಕದ್ರಿ ಹಿಲ್ಸ್‌ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. 19 ಎಕ್ರೆಗಳಷ್ಟು ವಿಸ್ತಾರವಾದ ಕ್ಯಾಂಪಸ್‌ ಹೊಂದಿದೆ. ಪ್ರಸ್ತುತ ಡಿಪ್ಲೊಮಾ ಎಂಜಿನಿಯರಿಂಗ್‌ ವಿಭಾಗಗಳಾದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌, ಕೆಮಿಕಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್ಸ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಆಟೋಮೊಬೈಲ್‌ ಎಂಜಿನಿಯರಿಂಗ್‌, ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಪಾಲಿಮರ್‌ ಟೆಕ್ನಾಲಜಿ ವಿಭಾಗಗಳನ್ನು ಹೊಂದಿದ್ದು, ಪ್ರಸ್ತುತ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ಗೆ 78 ವರ್ಷ ಪೂರ್ಣಗೊಂಡಿರುವ ಹೊತ್ತಿನಲ್ಲೇ ಎಐಸಿಟಿಇಯಿಂದ ಸ್ವಾಯತ್ತ ಮಾನ್ಯತೆ ಲಭಿಸಿದೆ. ಇದು ಸಂಸ್ಥೆಯ ಭವಿಷ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಿದ್ದು, ಎಲ್ಲರ ಶ್ರಮದಿಂದಾಗಿ ಈ ಮನ್ನಣೆ ಲಭಿಸಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
– ಹರೀಶ ಶೆಟ್ಟಿ ಪ್ರಾಂಶುಪಾಲರು, ಕೆಪಿಟಿ ಮಂಗಳೂರು

 ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next