Advertisement

ತಮಿಮ್‌ ಇಕ್ಬಾಲ್‌ ಶತಕ; ಬಾಂಗ್ಲಾಕ್ಕೆ ಏಕದಿನ ಸರಣಿ

03:12 PM Jul 30, 2018 | |

*3ನೇ ಏಕದಿನ: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ 18 ರನ್‌ ಜಯ
*ತಮಿಮ್‌ 103: ಬಾಂಗ್ಲಾದೇಶ-301/6; ವೆಸ್ಟ್‌ ಇಂಡೀಸ್‌-283/6

Advertisement

ಬಸೆಟರ್‌ (ಸೇಂಟ್‌ ಕಿಟ್ಸ್‌): ಆರಂಭಕಾರ ತಮಿಮ್‌ ಇಕ್ಬಾಲ್‌ ಅವರ ಶತಕ ಸಾಹಸದಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ 3ನೇ ಏಕದಿನ ಪಂದ್ಯವನ್ನು 18 ರನ್ನುಗಳಿಂದ ಗೆದ್ದ ಬಾಂಗ್ಲಾದೇಶ, 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಆಡ ಬೇಕಾದ ಸಂಕಟಕ್ಕೆ ಸಿಲುಕಿರುವ ಒಂದು ಕಾಲದ “ಕ್ರಿಕೆಟ್‌ ಕಿಂಗ್‌’ ವಿಂಡೀಸಿಗೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ 6 ವಿಕೆಟಿಗೆ 301 ರನ್‌ ಪೇರಿಸಿ ಸವಾಲೊಡ್ಡಿತು. ಇದು ವಿಂಡೀಸ್‌ ವಿರುದ್ಧ ಬಾಂಗ್ಲಾ ಪೇರಿಸಿದ ಅತ್ಯಧಿಕ ರನ್‌ ಆಗಿದೆ. ವೆಸ್ಟ್‌ ಇಂಡೀಸ್‌ ಕೊನೆಯ ಹಂತದಲ್ಲಿ ಎಡವಿ 6 ವಿಕೆಟಿಗೆ 283 ರನ್‌ ಗಳಿಸಿ ಶರಣಾಯಿತು. ಇದು 9 ವರ್ಷಗಳ ಬಳಿಕ ವಿದೇಶದಲ್ಲಿ ಬಾಂಗ್ಲಾದೇಶ ಸಾಧಿಸಿದ ಮೊದಲ ಸರಣಿ ವಿಜಯವಾಗಿದೆ.

ತಮಿಮ್‌ ಪ್ರಚಂಡ ಬ್ಯಾಟಿಂಗ್‌
ಪ್ರಚಂಡ ಫಾರ್ಮ್ನಲ್ಲಿರುವ ಓಪನರ್‌ ತಮಿಮ್‌ ಇಕ್ಬಾಲ್‌ 124 ಎಸೆತ ಎದುರಿಸಿ 103 ರನ್‌ ಬಾರಿಸಿದರು (7 ಬೌಂಡರಿ, 2 ಸಿಕ್ಸರ್‌). ಇದು 182 ಪಂದ್ಯಗಳಲ್ಲಿ ತಮಿಮ್‌ ಹೊಡೆದ 8ನೇ ಶತಕವಾದರೆ, ಈ ಸರಣಿಯಲ್ಲಿ ಎರಡನೆಯದು. ಮೊದಲ ಪಂದ್ಯದಲ್ಲಿ ತಮಿಮ್‌ ಅಜೇಯ 130 ರನ್‌ ಬಾರಿಸಿದ್ದರು. ಈ ಪಂದ್ಯವನ್ನು ಬಾಂಗ್ಲಾ ಗೆದ್ದಿತ್ತು. 2ನೇ ಪಂದ್ಯದಲ್ಲಿ ತಮಿಮ್‌ 54 ರನ್‌ ಹೊಡೆದಿದ್ದರು. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಗಳೆರಡಕ್ಕೂ ಪಾತ್ರರಾಗಿದ್ದಾರೆ.
ಅಜೇಯ 67 ರನ್‌ ಮಾಡಿದ ಮಹಮದುಲ್ಲ ಬಾಂಗ್ಲಾದ ಮತ್ತೋರ್ವ ಪ್ರಮುಖ ಸ್ಕೋರರ್‌. ಗೇಲ್‌, ಪೊವೆಲ್‌ ಹೋರಾಟ ವ್ಯರ್ಥ ವೆಸ್ಟ್‌ ಇಂಡೀಸಿಗೆ ಕ್ರಿಸ್‌ ಗೇಲ್‌ ಸ್ಫೋಟಕ ಆರಂಭ ಒದಗಿಸಿದ್ದರು (66 ಎಸೆತಗಳಿಂದ 73 ರನ್‌, 6 ಬೌಂಡರಿ, 5 ಸಿಕ್ಸರ್‌). ವನ್‌ಡೌನ್‌ ಬ್ಯಾಟ್ಸ್‌ಮನ್‌ ಶೈ ಹೋಪ್‌ 64 ರನ್‌ ಬಾರಿಸಿದರು. 36ನೇ ಓವರ್‌ ವೇಳೆ ವಿಂಡೀಸ್‌ ಕೇವಲ 2 ವಿಕೆಟಿಗೆ 172 ರನ್‌ ಬಾರಿಸಿ ಗೆಲುವಿನ ಸೂಚನೆ ನೀಡಿತ್ತು. ಕೊನೆಯಲ್ಲಿ ರಿಕಾರ್ಡೊ ಪೊವೆಲ್‌ ಸಿಡಿದು ನಿಂತು 41 ಎಸೆತಗಳಿಂದ ಅಜೇಯ 74 ರನ್‌ ಸೂರೆಗೈದರು (5 ಬೌಂಡರಿ, 4 ಸಿಕ್ಸರ್‌). ಆದರೆ ಮ್ಯಾಚ್‌ ವಿನ್ನರ್‌ ಎನಿಸಿಕೊಳ್ಳಲು ಅವರಿಂದಾಗಲಿಲ್ಲ.

5 ವಿಕೆಟ್‌ ಕೈಯಲ್ಲಿದ್ದರೂ ಕೊನೆಯ 5 ಓವರ್‌ಗಳಿಂದ  57 ರನ್‌ ತೆಗೆಯುವ ಸವಾಲು ಕೆರಿಬಿಯನ್ನರ ಪಾಲಿಗೆ ಮರೀಚಿಕೆಯೇ ಆಗುಳಿಯಿತು. ಈ ಸರಣಿಯ ಮೂರೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡವೇ ಗೆಲುವು ಸಾಧಿಸಿದ್ದು ವಿಶೇಷ.

Advertisement

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-6 ವಿಕೆಟಿಗೆ 301 (ತಮಿಮ್‌ 101, ಮಹಮದುಲ್ಲ 67, ಶಕಿಬ್‌ 37, ನರ್ಸ್‌ 53ಕ್ಕೆ 2, ಹೋಲ್ಡರ್‌ 55ಕ್ಕೆ 2). ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 283 (ಪೊವೆಲ್‌ ಅಜೇಯ 74, ಗೇಲ್‌ 73, ಹೋಪ್‌ 64, ಮೊರ್ತಜಾ 63ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ತಮಿಮ್‌ ಇಕ್ಬಾಲ್‌.

Advertisement

Udayavani is now on Telegram. Click here to join our channel and stay updated with the latest news.

Next