Advertisement

Bangla ಅಕ್ರಮ ವಲಸೆ : ಸಂತೆಕಟ್ಟೆಯಲ್ಲಿ ಮತ್ತೋರ್ವನ ಬಂಧನ

09:59 PM Oct 18, 2024 | Team Udayavani |

ಉಡುಪಿ: ಬಾಂಗ್ಲಾದೇಶ ದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದಮತ್ತೋರ್ವ  ವ್ಯಕ್ತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನನ್ನು ಬಾಂಗ್ಲಾದೇಶದ ರಾಜ್‌ಶಾಹಿ ಜಿಲ್ಲೆಯ ಮೊಹಮ್ಮದ್‌ ಜಹಂಗೀರ್‌ ಆಲಂ(24) ಎಂದು ಗುರುತಿಸಲಾಗಿದೆ.

Advertisement

ಮೂಡುಬಿದಿರೆಯಲ್ಲಿ ಕಾರ್ಮಿಕ ನಾಗಿದ್ದ ಈತನನ್ನು ಸಂತೆಕಟ್ಟೆಯ ಬಳಿ ಲಭ್ಯ ಮಾಹಿತಿಯ ಮೇರೆಗೆ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ತಿಳಿಸಿದ್ದಾರೆ.

ಇನ್ನಿಬ್ಬರು ವಶಕ್ಕೆ?

ಈಗಾಗಲೇ ಬಂಧಿತರ ಸಂಖ್ಯೆ 10ಕ್ಕೆ ತಲುಪಿದ್ದು, ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಬಾಂಗ್ಲಾ ಮೂಲದ ಇಬ್ಬರು ಕಾರ್ಮಿಕರನ್ನು ಪಡುಬಿದ್ರಿ ಪೊಲೀಸರ ಮೂಲಕ ಶುಕ್ರವಾರ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.ಅಲ್ಲದೆ, ಈ ಬಗ್ಗೆ ಉನ್ನತ ತನಿಖೆಗಾಗಿ ಇಬ್ಬರನ್ನೂ ಮಲ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಉಳ್ಳಾಲ ಮೂಲದ ವ್ಯಕ್ತಿಯೊಬ್ಬರು ಆಧಾರ್‌ ಕಾರ್ಡ್‌ ಮಾಡಿಸಿಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ ಎನ್ನಲಾಗಿದ್ದು, ಪೊಲೀಸರು ಆ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Advertisement

ವಿಮಾನ ನಿಲ್ದಾಣದಲ್ಲಿ ಬಂಧಿತ ಬಾಂಗ್ಲಾ ಪ್ರಜೆಗೆ ನ್ಯಾಯಾಂಗ ಬಂಧನ
ಮಂಗಳೂರು: ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಉಡುಪಿಯ ಮಲ್ಪೆಯಲ್ಲಿ ವಾಸವಾಗಿದ್ದು, ದುಬಾೖಗೆ ತೆರಳಲು ಯತ್ನಿಸಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದ ಬಾಂಗ್ಲಾ ಪ್ರಜೆ ಮಹಮ್ಮದ್‌ ಮಾಣಿಕ್‌ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ದುಬಾೖಗೆ ಪ್ರಯಾಣಿಸಲೆಂದು ಅ.10ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಮ್ಮದ್‌ ಮಾಣಿಕ್‌ನನ್ನು ಇಮಿಗ್ರೇಶನ್‌ ವಿಭಾಗದ ಅಧಿಕಾರಿಗಳು ಪಾಸ್‌ಪೋರ್ಟ್‌ ಮತ್ತು ದಾಖಲಾತಿಗಳ ಪರಿಶೀಲನೆ ವೇಳೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆತ ಬಾಂಗ್ಲಾದೇಶದ ಪ್ರಜೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಒಂದು ವಾರಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಶುಕ್ರವಾ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿದ್ದು, ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ
ವಿಚಾರಣೆ ವೇಳೆ ಬಂಧಿತ ಮಹಮ್ಮದ್‌ ಮಾಣಿಕ್‌ನಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆತನನಿಗೆ ತಿಳಿದಿರುವ ಬಾಂಗ್ಲಾ ಅಕ್ರಮ ನಿವಾಸಿಗಳು ಕಮಿಷನರೆಟ್‌ ಅಥವಾ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿಲ್ಲ. ಮಲ್ಪೆಯಲ್ಲಿ ವಶಕ್ಕೆ ಪಡೆದಿರುವವರು ಮಾತ್ರ ಆತನ ಪರಿಚಯಸ್ಥರಾಗಿದ್ದಾರೆ. ಆತನಿಗೆ ಪಾಸ್‌ಪೋರ್ಟ್‌ ಮಾಡಿಸಿಕೊಟ್ಟಿರುವ ಉಡುಪಿ ನಿವಾಸಿ ಪರ್ವೇಜ್‌ನ ಬಂಧನವಾದರೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಆತ ವಿದೇಶದಲ್ಲಿದ್ದು, ಆತನನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶದ ರಾಜಾಶಾಹಿ ಜಿಲ್ಲೆ ಮಾಣಿಕ್‌ಚೌಕ್‌ ನಿವಾಸಿಯಾಗಿರುವ ಮಹಮ್ಮದ್‌ ಮಾಣಿಕ್‌ 2017ರಲ್ಲಿ ಇಂಡೋ ಬಾಂಗ್ಲಾ ಅಂತಾರಾಷ್ಟ್ರೀಯ ಗಡಿ ರೇಖೆ ಲಾಲ್‌ಗೊಲ್‌ ಮೂಲಕ ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ ಜಿಲ್ಲೆಗೆ ಬಂದಿದ್ದಾನೆ. ಅನಂತರ ಶೆಲ್ಡಾ- ಹೌರಾ- ಚೆನ್ನೈ ಮೂಲಕ ಮಂಗಳೂರಿಗೆ ಬಂದಿದ್ದಾನೆ. ಮೂಡುಬಿದಿರೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದ ಆತ ಬಳಿಕ ಉಡುಪಿ ಜಿಲ್ಲೆಗೆ ತೆರಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next