Advertisement

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

12:20 AM Mar 29, 2024 | Team Udayavani |

ಬೆಂಗಳೂರು: ನಗರದ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಒಳಸುಳಿಯನ್ನು ಭೇದಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವು ಸ್ಫೋಟಕ ಸಾಮಗ್ರಿ ಸಾಗಾಟಕ್ಕೆ ನೆರವು ನೀಡಿದ ಸಹ ಸಂಚುಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಮಾ. 1ರಂದು ಸಂಭವಿಸಿದ್ದ ಘಟನೆ ಸಂಬಂಧ ಮಾ. 3ರಂದು ಪ್ರಕರಣ ದಾಖಲಿಸಿಕೊಂಡು ಕಾರ್ಯಾ ಚರಣೆಗಿಳಿದಿದ್ದ ಎನ್‌ಐಎಯು ಕರ್ನಾಟಕ, ತಮಿಳು ನಾಡು ಉತ್ತರ ಪ್ರದೇಶದ ಹಲವೆಡೆ ಕಾರ್ಯಾಚರಣೆ ನಡೆಸಿ ಗುರುವಾರ ಒಬ್ಬನನ್ನು ಬಂಧಿಸಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುಬೈ ನಗರದ ಮುಜಾಮೀಲ್‌ ಷರೀಫ್ (35) ಎಂಬಾತನನ್ನು ಬಂಧಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಸಾವೀರ್‌ ಶಾಜೀಬ್‌ ಹುಸೇನ್‌ ಮತ್ತು ಮತ್ತೂಬ್ಬ ಸಂಚುಕೋರ ಅಬ್ದುಲ್‌ ಮತೀನ್‌ ತಾಹಾಗೆ ಸ್ಫೋಟಕ ವಸ್ತುಗಳ ಸಾಗಾಟಕ್ಕೆ ನೆರವು ನೀಡಿದ್ದ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಸ್ಫೋಟ ಮಾಡಿದ ವ್ಯಕ್ತಿ ತೀರ್ಥಹಳ್ಳಿಯ ಮುಸಾವೀರ್‌ ಸಾಹೇಬ್‌ ಹುಸೇನ್‌ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬ ಮಾಹಿತಿಯನ್ನು ಎನ್‌ಐಎ ಹೊರಗೆಡವಿದೆ.

ಕರ್ನಾಟಕದ ಶಿವಮೊಗ್ಗದ ತೀರ್ಥಹಳ್ಳಿ, ಬೆಂಗ ಳೂರಿನ ಗುರಪ್ಪನಪಾಳ್ಯ, ಚಿಕ್ಕಮಗಳೂರಿನ ಮೂಡಿಗೆರೆ ಮತ್ತು ಉ.ಕ. ಜಿಲ್ಲೆಯ ಭಟ್ಕಳ ಸೇರಿ 12 ಕಡೆ ಗಳಲ್ಲಿ ದಾಳಿ ನಡೆಸಿ ಶೋಧಿಸಲಾಗಿತ್ತು. ಈ ವೇಳೆ ತಲೆಮರೆಸಿಕೊಂಡಿರುವ ಮುಸಾವೀರ್‌ ಶಾಜೀಬ್‌ ಹುಸೇನ್‌, ಅಬ್ದುಲ್‌ ಮತೀನ್‌ ಮತ್ತು ಬಂಧನ ಕ್ಕೊಳಗಾಗಿರುವ ಮುಜಾಮೀಲ್‌ ಷರೀಫ್ ಮನೆ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗ ಕೆಲವು ಡಿಜಿಟಲ್‌ ಸಾಕ್ಷ್ಯಗಳು ಮತ್ತು ನಗದು ಪತ್ತೆಯಾಗಿತ್ತು.

Advertisement

ಈ ಸಂದರ್ಭದಲ್ಲಿ ಮುಜಾಮೀಲ್‌ ಷರೀಫ್ ಇತರ ಇಬ್ಬರು ಶಂಕಿತರಿಗೆ ಸ್ಫೋಟಕ ವಸ್ತುಗಳ ಸಾಗಾಟಕ್ಕೆ ನೆರವು ನೀಡಿರುವ ಅನುಮಾನ ಮೂಡಿತ್ತು. ಹೀಗಾಗಿ ಆತನಿಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಆತನ ಬಳಿ ಪತ್ತೆಯಾದ ಡಿಜಿಟಲ್‌ ಸಾಕ್ಷ್ಯಗಳು ಈತನೇ ಸ್ಫೋಟಕ ವಸ್ತುಗಳ ಸಾಗಾಟಕ್ಕೆ ನೆರವು ನೀಡಿದ್ದು ಹಾಗೂ ಮೊಬೈಲ್‌ ಸಿಮ್‌ ಕಾರ್ಡ್‌ ವಿತರಣೆ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಬುಧವಾರವೇ ಆರೋಪಿಯನ್ನು ಬಂಧಿಸಲಾಗಿದೆ.

ಯಾರಿದು ಷರೀಫ್?
ತಲೆಮರೆಸಿಕೊಂಡಿರುವ ಮುಸಾವೀರ್‌ ಶಾಜೀಬ್‌ ಹುಸೇನ್‌, ಅಬ್ದುಲ್‌ ಮತೀನ್‌ ತಾಹಾಗೆ ಷರೀಫ್ ಹಳೇ ಸ್ನೇಹಿತ.
2020ರಲ್ಲಿ ಬೆಂಗಳೂರಿನ ಸುದ್ದುಗುಂಟೆ ಪಾಳ್ಯದಲ್ಲಿ ಕರ್ನಾಟಕ ಮತ್ತು ಇತರ ರಾಜ್ಯಗಳ ಪೊಲೀಸರು, ಹಿಂದೂ ನಾಯಕರ ಹತ್ಯೆಗೆ ಸಂಚು.
ಅಲ್‌ ಹಿಂದ್‌ ಸಂಘಟನೆಯ ಜತೆಗೆ ಸಂಚು ರೂಪಿಸಿದ್ದ ಆರೋಪ.
ಅಬ್ದುಲ್‌ ಮತೀನ್‌ ತಾಹಾ ನೆರವಿನಿಂದ ಮುಜಾಮೀಲ್‌ ಷರೀಫ್ ಭೇಟಿ. ಆ ದಿನ ದಿಂದಲೂ ಮತೀನ್‌ ತಾಹಾ ಜತೆಗೆ ಸಂಪರ್ಕ.
ಹಲವು ಬಾರಿ ಚೆನ್ನೈಯಲ್ಲೂ ಇಬ್ಬರು ಶಂಕಿತರ ಜತೆಗೆ ಭೇಟಿ.

ಬಂಧನ ಹೇಗಾಯಿತು?
ತಾಂತ್ರಿಕ ತನಿಖೆ ನಡೆಸಿದಾಗ ಶಂಕಿತ ಮುಜಾಮೀಲ್‌ ಷರೀಫ್ ಅಬ್ದುಲ್‌ ಮತೀನ್‌ ತಾಹಾನ ಸಂಪರ್ಕದಲ್ಲಿರುವುದು ಪತ್ತೆ
ಮಂಗಳವಾರ ದಾಳಿ ವೇಳೆ ಮುಜಾಮೀಲ್‌ ಷರೀಫ್ನ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ರೂವಾರಿಗಳಿಗೆ ಸಹಕಾರ ಮತ್ತು ಸಹ ಸಂಚುಕೋರ ಎಂಬುದು ಬೆಳಕಿಗೆ.
ಸ್ಫೋಟ ನಡೆಸಿದ ಮುಸಾವೀರ್‌ ಶಾಜೀಬ್‌ ಹುಸೇನ್‌ಗೆ ಸಿಮ್‌ಕಾರ್ಡ್‌, ಕಚ್ಚಾ ಸ್ಫೋಟಕ ವಿತರಣೆ ಮಾಡಿರುವುದು ದೃಢ.

Advertisement

Udayavani is now on Telegram. Click here to join our channel and stay updated with the latest news.

Next