Advertisement
ನಮ್ಮ ಪ್ರೀತಿಯ ಬೆಂಗಳೂರಿನ ಕಥೆಯಿಂದ ಆರಂಭವಾಗಬೇಕು. ಇದೇ ಮೂವತ್ತು ವರ್ಷಗಳ ಹಿಂದೆ ಬೆಂಗಳೂರು ಹೇಗಿತ್ತು ಎಂದು ಒಂದು ಸಣ್ಣ ಫ್ಲ್ಯಾಶ್‌ಬ್ಯಾಕ್‌ಗೆ ಹೋಗೋಣ. ಯಾವುದೋ ಊರಿನಿಂದ ಮೆಜೆಸ್ಟಿಕ್‌ಗೆ ಬೆಳಗಿನ ಜಾವ ಬಂದು ಇಳಿದರೆ ಸಣ್ಣದೊಂದು ಚಳಿ ನಮ್ಮನ್ನು ಸ್ವಾಗತಿಸುತ್ತಿತ್ತು. ಇದು ಬರೀ ಚಳಿಗಾಲದ ಮಾತಲ್ಲ. ಮಳೆಗಾಲ ಮತ್ತು ಬೇಸಗೆಯಲ್ಲೂ ಸಹ. ಗರಿಷ್ಠ ಬೇಸಗೆಯ ಬಿಸಿ ತಟ್ಟಬಹುದಾದ ಮೇ ತಿಂಗಳಿನಲ್ಲೂ ಈ ಚಳಿಯ ಅಸ್ತಿತ್ವಕ್ಕೆ ಕುಂದೇನೂ ಆಗುತ್ತಿರಲಿಲ್ಲ. ಬೇಸಗೆಯ ಬಿಸಿಯ ಅನುಭವ ಏನಿದ್ದರೂ ಬೆಳಗ್ಗೆ 8 ಗಂಟೆ ದಾಟಿದ ಮೇಲೆಯೇ.
Related Articles
ಇನ್ನೂ ಬೆಂಗಳೂರಿನಲ್ಲಿ ತೀಕ್ಷ್ಣಗೊಳ್ಳುತ್ತಿರುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಬಗ್ಗೆ ಪ್ರಸ್ತಾಪಿಸಿಲ್ಲ. ಅದು ಇಂದಿನ ಬೆಂಗಳೂರು. ಇಷ್ಟೊಂದು ಚೆಂದವಾಗಿದ್ದ ಬೆಂಗಳೂರಿಗೆ ಇದ್ದಕ್ಕಿದ್ದಂತೆ ಮಹಾ ಬೆಂಗಳೂರಾಗಿ ಬೆಳೆಯುವ ಕನಸು ಬಿತ್ತು. ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನಗಳೂ ನಡೆಯಿತು. ಸಾರಿಗೆ ನೆಲೆಯಲ್ಲಿ ಸಾಕಷ್ಟು ಅನು ಕೂಲಕರ ವಾತಾವರಣವಿದ್ದ ಬೆಂಗಳೂರಿಗೆ ನಿರ್ಮಾತೃ ಕೆಂಪೇಗೌಡ ವಿಧಿಸಿದ ಗಡಿ ದಾಟಿ ಬೆಳೆಯುವುದು ಕಷ್ಟವಾಗಲಿಲ್ಲ. ಕೈಗಾರಿಕೆಗಳು ಬಂದವು. ಸಾವಿರ, ಲಕ್ಷೋಪಾದಿಯಾಗಿ ರಾಜ್ಯ ಮತ್ತು ಹೊರರಾಜ್ಯಗಳ ಜನರು ವಲಸೆ ಬರತೊಡಗಿದರು. ಜನರ ವಲಸೆಯ ವೇಗ ಎಷ್ಟಿತ್ತೆಂದರೆ ಸ್ಥಳೀಯ ಆಡಳಿತ (ಬೆಂಗಳೂರು ಮಹಾನಗರ ಪಾಲಿಕೆ) ಮತ್ತು ಸರಕಾರಕ್ಕೆ ಯೋಚಿಸಲೂ ಪುರಸೊತ್ತು ಸಿಗದ ಮಾದರಿಯಲ್ಲಿತ್ತು.
Advertisement
ಉದ್ಯಾನ ನಗರಿಯ ಜನಸಂಖ್ಯೆಯ ಬೆಳವಣಿಗೆ ಕುರಿತು ಸಣ್ಣದೊಂದು ನೋಟ ಹರಿಸೋಣವೆಂದಾದರೆ, 1950ರ ಸುಮಾರಿಗೆ ಇಲ್ಲಿದ್ದ ಜನಸಂಖ್ಯೆ ಕೇವಲ 7.50 ಲಕ್ಷ. ಬಳಿಕ ಐದು ವರ್ಷದಲ್ಲಿ ಸುಮಾರು 2 ಲಕ್ಷ ಜನರು ಹೆಚ್ಚಾದರು. ಇಲ್ಲಿಂದ ಆರಂಭವಾದ ಜನಸಂಖ್ಯೆ ಹೆಚ್ಚಳ ಇಂದಿಗೂ ನಿಂತಿಲ್ಲ. 1960ರಲ್ಲಿ 11.10 ಲಕ್ಷ, 1965ರಲ್ಲಿ 13.70 ಲಕ್ಷ, 1970ರಲ್ಲಿ ಈ ಪ್ರಮಾಣ 16 ಲಕ್ಷದ ಅಂದಾಜಿನಲ್ಲಿತ್ತು. ಆದರೆ ವಲಸಿಗರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದು 1970ರ ಬಳಿಕ. ಆಗಲೇ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳು ತಮ್ಮ ನೆಲೆಯನ್ನು ವಿಸ್ತರಿಸಿಕೊಂಡಿದ್ದು. ಸಾಕ್ಷರತೆ ಪ್ರಮಾಣದಲ್ಲೂ ಒಂದು ಬಗೆಯ ಮಹತ್ವ ದೊರಕ್ಕಿದ್ದು, ಓದಿದವರಿಗೆಲ್ಲಾ ನಗರದಲ್ಲಿ ಕೆಲಸ ಸಿಗುವುದು ಖಚಿತವೆಂಬ ನಂಬಿಕೆ ಬಂದದ್ದು. ಇವೆಲ್ಲದರ ಪರಿಣಾಮ ರಾಜ್ಯದ ಎಲ್ಲ ಊರುಗಳ ಬಸ್ಸುಗಳು, ರೈಲುಗಳು ಬೆಂಗಳೂರಿನತ್ತ ಮುಖ ಮಾಡಿದ್ದು. ಸಾವಿರಾರು ಮಂದಿ ವಿದ್ಯಾವಂತರು ನಗರ ವಲಸೆಯನ್ನು ಆರಂಭಿಸಿದ್ದು. ಆಗ ಬೆಂಗಳೂರಿನಲ್ಲಿ ತಮ್ಮ ಮಗ ಕಂಪೆನಿಯೊಂದರ ಉದ್ಯೋಗದಲ್ಲಿದ್ದಾನೆ ಎಂಬುದೇ ಮಧ್ಯಮ ವರ್ಗದವರ ದೊಡ್ಡ ಪ್ರತಿಷ್ಠೆಯಾಗಿತ್ತು. ಜತೆಗೆ ಅರ್ಥಿಕ ಭರವಸೆಯ ಹೊಳಹಾಗಿಯೂ ಕಾಣುತ್ತಿತ್ತು.
ಅಲ್ಲಿಯವರೆಗೂ ಜನಸಂಖ್ಯೆ ಸುಮಾರು ಐದು ವರ್ಷಗಳ ಅವಧಿ ಯಲ್ಲಿ ಒಂದರಿಂದ ಮೂರು ಲಕ್ಷಗಳವರೆಗೆ ಹೆಚ್ಚಳವಾಗುತ್ತಿತ್ತು. ಅಂದರೆ ವಾರ್ಷಿಕ 60 ರಿಂದ 70 ಸಾವಿರ ಎಂದಿಟ್ಟುಕೊಳ್ಳೋಣ. 1970ರ ಬಳಿಕ ಈ ಪ್ರಮಾಣ ಐದು ಲಕ್ಷಕ್ಕೇರಿತು. 1970ರಲ್ಲಿ ಇದ್ದ 16 ಲಕ್ಷ 1975ರಲ್ಲಿ ಒಮ್ಮೆಲೆ 21 ಲಕ್ಷಕ್ಕೇರಿತು. ಈ ಸಂಖ್ಯೆ 1980ಕ್ಕೆ 28 ಲಕ್ಷವನ್ನು ತಲುಪಿತು. 1995ರವರೆಗೂ ಈ ಗತಿಯಲ್ಲಿ ಬಹಳ ವ್ಯತ್ಯಾಸವಿರಲಿಲ್ಲ. ಸರಾಸರಿ ಐದರಿಂದ ಏಳು ಲಕ್ಷದ ಲೆಕ್ಕಾಚಾರದಲ್ಲೇ ಹೆಚ್ಚಳವಾಗುತ್ತಿತ್ತು. ಆ ಹೊತ್ತಿಗೆ ಇನ್ನೂ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿರಲಿಲ್ಲ.
ಸಿಲಿಕಾನ್ ವ್ಯಾಲಿಯ ಪರಿಣಾಮನಮ್ಮೂರು ಬೆಳೆಯುವುದು ಯಾರಿಗೂ ಬೇಸರ ತರುವಂಥ ವಿಷಯವಲ್ಲ. ಸದಾ ನಗರ ಅಥವಾ ಊರು ಬೆಳವಣಿಗೆಯ ಹಿಂದೆ ಕೇವಲ ಭೌಗೋಳಿಕ ವಿಸ್ತರಣೆ ಇರುವುದಿಲ್ಲ. ಅದರ ಹಿಂದೆಯೇ ಆರ್ಥಿಕ ಅವಕಾಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ನಾಗರಿಕರ ಜೀವನಮಟ್ಟ ಸುಧಾರಣೆಗೊಳ್ಳುತ್ತಾ ಹೋಗುತ್ತದೆ. ಉದ್ಯೋಗಾವ ಕಾಶವೆಂಬುದು ವಿಸ್ತರಿತ ನೆಲೆಗೆ ವಿಕಸನಗೊಳ್ಳುತ್ತದೆಯೇ ಹೊರತು ಲಂಬ ನೆಲೆಯಲ್ಲಿ ಬೆಳೆಯುವುದಿಲ್ಲ. ಒಂದು ಸೀಮಿತ ಮತ್ತು ನಿರ್ದಿಷ್ಟ ಉದ್ದೇಶದ ಕೈಗಾರಿಕೆ ಒಂದು ಊರಿಗೆ ಬಂದರೆ, ಅಲ್ಲಿರುವ ಸೀಮಿತ ಉದ್ಯೋಗ ಅವಕಾಶಗಳನ್ನೇ ಅವಲಂಬಿಸಬೇಕಾಗುತ್ತದೆ. ಅದು ಲಂಬ ನೆಲೆಯ ಬೆಳವಣಿಗೆ ಎನ್ನಬಹುದು. ಆದರೆ, ವಿಸ್ತರಿತ ನೆಲೆಯಲ್ಲಾಗು ವುದೆಂದರೆ ಬಹುಮುಖವಾದ ನೆಲೆಯಲ್ಲಿ ನಗರ ಅಥವಾ ಊರು ಬೆಳೆಯಬೇಕು. ಬೆಂಗಳೂರು ಆ ನೆಲೆಯಲ್ಲೆ ಬೆಳೆಯತೊಡಗಿದ್ದು 2000ದ ಬಳಿಕ. ಇನ್ಫೋಸಿಸ್ ಸೇರಿದಂತೆ ಹಲವಾರು ಕಂಪೆನಿಗಳು ಜ್ಞಾನಾಧಾರಿತ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿ ಜಗತ್ತಿನ ಗಮನ ಸೆಳೆಯತೊಡಗಿದವು. ಅದೇ ಹೊತ್ತಿನಲ್ಲಿ ಸರಕಾರದ ಸಿಇಟಿ ಇತ್ಯಾದಿ ವಿಧಾನಗಳಿಂದ ಮಧ್ಯಮ ವರ್ಗದ ಎಂಜಿನಿಯರ್‌ಗಳು ಯಥೇತ್ಛ ಸಂಖ್ಯೆಯಲ್ಲಿ ಹೊರ ಬರತೊಡಗಿದರು. ಆಗ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು (ಸಂಖ್ಯೆ ಮತ್ತು ಗುಣಮಟ್ಟ) ಬೆಂಗಳೂರನ್ನೇ ಕೇಂದ್ರೀಕರಿಸಿದ್ದರಿಂದಲೂ ಅಲ್ಲಿಗೆ ಕಲಿಯಲು ಬರುವವರ ಸಂಖ್ಯೆ ಹೆಚ್ಚಿತು. ಅದಕ್ಕೆ ತಕ್ಕಂತೆ ಔದ್ಯೋಗಿಕ ಕ್ಷೇತ್ರ ವಿಸ್ತರಣೆಯಾಯಿತು. ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ ಪ್ರಸಿದ್ಧಿ (ಮಾಹಿತಿ ತಂತ್ರ ಜ್ಞಾನ ತಾಣ) ಗಳಿಸತೊಡಗಿದಾಗ ವಲಸಿಗರ ಸಂಖ್ಯೆಯಲ್ಲಿ ವಿಚಿತ್ರ ವೆನ್ನುವಂಥ ಹೆಚ್ಚಳವಾಯಿತು. 1995ರಿಂದ 2000ನೇ ಸಾಲಿಗೆ ಆದ ಹೆಚ್ಚಳ 8 ಲಕ್ಷದಷ್ಟು ಎಂದಿದ್ದರೂ ಅನಂತರದ 5 ವರ್ಷಗಳಲ್ಲಿ ಈ ಸಂಖ್ಯೆ 12 ಲಕ್ಷಕ್ಕೆ ತಲುಪಿತು. ಬಳಿಕ 15 ಲಕ್ಷ, 18 ಲಕ್ಷ…ಹೀಗೆ 2017ರ ಈ ಹೊತ್ತಿನಲ್ಲಿ ಒಂದು ಕೋಟಿಯನ್ನೂ ದಾಟಿತು. ಮುಂದಿನ 13 ವರ್ಷಗಳಲ್ಲಿ ಈ ಪ್ರಮಾಣ 1.40 ಕೋಟಿಗೆ ತಲುಪಬಹುದು ಎಂಬ ಅಂದಾಜಿದೆ. ವಿಸ್ತರಣೆಗೊಂಡ ನಗರ
ಅದರಂತೆಯೆ ನಗರ ಬೆಳೆದೂ ಬೆಳೆದೂ ಹತ್ತಿರದ ಹಳ್ಳಿಗಳನ್ನೆಲ್ಲಾ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತು. ಬೆಂಗಳೂರಿನ ನಿರ್ಮಾತೃ ಕೆಂಪೇ ಗೌಡರ ಗಡಿ ದಾಟಿ ಸಾವಿರಾರು ಪಟ್ಟು ಬೆಳೆಯಿತು. ಅಲ್ಲಲ್ಲಿ ಬಡಾವಣೆಗಳು ಹುಟ್ಟಿಕೊಂಡವು. 2001ರಲ್ಲಿ ಒಂದು ಚದರ ಕಿ.ಮೀ.ಗೆ 2,985 ಮಂದಿ ಬದುಕುತ್ತಿದ್ದರೆ ಈ ಸಂಖ್ಯೆ 2011ರಲ್ಲಿ ಜನಗಣತಿ ಪ್ರಕಾರ ಇಷ್ಟೇ ಪ್ರದೇಶದಲ್ಲಿ 4,378 ಮಂದಿ ವಾಸಿಸತೊಡಗಿದ್ದರು. ಇಲ್ಲಿಗೆ ಜನದಟ್ಟಣೆ ಹೆಚ್ಚಿತು. ಇಷ್ಟೆಲ್ಲಾ ಬೆಳವಣಿಗೆ ಎದುರು ನಾವು ಕಳೆದುಕೊಂಡಿದ್ದಷ್ಟು ಬಹಳ ಇದೆ. ಅದಕ್ಕೆ ಲೆಕ್ಕವಿಲ್ಲ. ಈಗ ಬೆಂಗಳೂರು ತನ್ನ ಅಂದವನ್ನು ಕಳೆದುಕೊಳ್ಳುತ್ತಿದೆ. ಜನರಿಂದ ಮಾಲಿನ್ಯ ನಗರವೆಂಬ ಟೀಕೆಗೂ ಒಳಗಾಗುತ್ತಿದೆ. ಎಲ್ಲವೂ ಸರಿಯಿಲ್ಲ ಎಂದೆನಿಸತೊಡಗಿದೆ. ಆದರೂ, ದೇಶದ ಇತರ ಮಹಾನಗರಗಳಷ್ಟು ಇನ್ನೂ ವ್ಯವಸ್ಥೆ ಕೆಟ್ಟುಹೋಗಿಲ್ಲವೆಂಬುದೂ ಸ್ಪಷ್ಟ. ಅದೇ ಕಾರಣದಿಂದ ಉಳಿದಿದ್ದನ್ನಾದರೂ ಸರಿಯಾಗಿ ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗ ಬೇಕಾದರೆ ನಗರ ನಿರ್ಮಾತೃ ಕೆಂಪೇಗೌಡನ ಮಾದರಿಯಲ್ಲೇ ಯೋಚಿಸ ಬೇಕು. ಇದೇ ಕಾರಣದಿಂದ ಬೆಂಗಳೂರು ಬೆಳೆದ ಪರಿಯನ್ನು ಕಂಡು ಅಚ್ಚರಿಪಡುವುದಕ್ಕಿಂತ ಅದು ತಲುಪಬಹುದಾದ ನೆಲೆಯನ್ನು ಕಂಡು ಆತಂಕ ಪಡಬೇಕಿದೆ.