Advertisement

ಮಳೆಗೆ ಹೊಳೆಯಂತಾಗುವ ಅಂಡರ್‌ಪಾಸ್‌ಗಳು

01:00 PM May 23, 2023 | Team Udayavani |

ಬೆಂಗಳೂರು: ಮಳೆ ಬಿದ್ದ ಕ್ಷಣ ಮಾತ್ರದಲ್ಲಿ ಹೊಳೆಯಂತಾಗುವುದು, ರಾಶಿ ರಾಶಿ ಕಸದ ರಾಶಿ ತುಂಬಿ ತೇಲುವುದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿ ಸಂಪರ್ಕ ಸರಿಯಾಗಿ ಇಲ್ಲದೆ ಇರುವುದು, ಬೆಳಕಿನ ಸೌಕರ್ಯ ಇಲ್ಲದೆ ಇರುವುದು. -ಇವು ಸಿಲಿಕಾನ್‌ ಸಿಟಿ ಬೆಂಗಳೂರಿನ ಕೆಲವು ಅಂಡರ್‌ ಪಾಸ್‌ಗಳಲ್ಲಿ ಕಂಡು ಬರುವ ದೃಶ್ಯಗಳು.

Advertisement

ಸುಗಮ ಸಂಚಾರದ ದೃಷ್ಟಿಯಿಂದ ಬಿಬಿಎಂಪಿ ಕೋಟ್ಯಂತರ ರೂ. ವ್ಯಯಿಸಿ 28 ಅಂಡರ್‌ಪಾಸ್‌ಗಳನ್ನು ನಿರ್ಮಿಸಿದೆ. ಆದರೆ, ಅವುಗಳ ನಿರ್ವಹಣೆಯಲ್ಲಿ ಪಾಲಿಕೆ ಮತ್ತು ಬಿಡಿಎ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಮಳೆ ಸುರಿದ ತಕ್ಷಣ ಕೆ.ಆರ್‌.ಸರ್ಕಲ್‌, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌, ಕಾವೇರಿ ಜಂಕ್ಷನ್‌ ಗುಟ್ಟಹಳ್ಳಿ ಸೇರಿದಂತೆ ಹಲವು ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರಿತಪಿಸುವ ಪರಿಸ್ಥಿತಿ ಇದೆ.

ರಿಂಗ್‌ ರಸ್ತೆಯಲ್ಲಿ ನಿರ್ಮಿಸಿರುವ ಅಂಡರ್‌ ಪಾಸ್‌ಗಳಲ್ಲಿ ಸಣ್ಣ ಸಣ್ಣ ಗಿಡಗಳು ಬೇರು ಬಿಟ್ಟಿದ್ದು, ಇಡೀ ಅಂಡರ್‌ ಪಾಸ್‌ ಸಾಮರ್ಥ್ಯವನ್ನು ದುರ್ಬಲ ಮಾಡುವ ಸಾಧ್ಯತೆ ಇದೆ. ಹಲವು ಕಡೆಗಳಲ್ಲಿ ಅರಳಿ ಮತ್ತು ಆಲದ ಮರ ಸೇರಿದಂತೆ ಮತ್ತಿತರ ಸಣ್ಣ ಸಣ್ಣ ಗಿಡಗಳ ಬೇರು ಆಳವಾಗಿ ವ್ಯಾಪಿಸಿ ಕೊಳ್ಳುವುದರಿಂದ ಅಂಡರ್‌ ಪಾಸ್‌ ಸಾಮರ್ಥ್ಯ ಕುಸಿಯುವ ಸಾಧ್ಯತೆ ಅಧಿಕ ವಿದೆ ಎಂದು ರಸ್ತೆ ಮತ್ತು ಮೂಲಭೂತ ಸೌಕರ್ಯ ತಜ್ಞರು ಹೇಳುತ್ತಾರೆ.

ಸರಾಗವಾಗಿ ಹರಿಯದ ನೀರು: ಜೆ.ಪಿ. ನಗರ ಜಿ.ಆರ್‌.ವಿಶ್ವನಾಥ್‌ ಅಂಡರ್‌ ಪಾಸ್‌, ಕದಿರೇನಹಳ್ಳಿ ಅಂಡರ್‌ ಪಾಸ್‌, ಮಲ್ಲೇಶ್ವರಂ ಅಂಡರ್‌ ಪಾಸ್‌, ಗುಟ್ಟಹಳ್ಳಿಯ ಕಾವೇರಿ ಜಂಕ್ಷನ್‌ ಅಂಡರ್‌ ಪಾಸ್‌ಗಳಿಗೆ ಭೇಟಿ ನೀಡಿದಾಗ ಹಲವು ರೀತಿಯ ವೈಫ‌ಲ್ಯಗಳು ಕಂಡು ಬಂದುವು. ಮಳೆ ಸುರಿದರೆ ರಾಶಿ ರಾಶಿ ಕಸ ಅಂಡರ್‌ ಪಾಸ್‌ ಡ್ರೈನೇಜ್‌ ಕಿಂಡಿಗಳಿಗೆ ಸಿಲುಕಿಕೊಳ್ಳುತ್ತೆ. ಪ್ಲಾಸ್ಟಿಕ್‌ ಜತೆ ಕಸ ಕಡ್ಡಿಗಳು ಕೂಡ ಸೇರುವುದರಿಂದ ಇಡೀ ಅಂಡರ್‌ ಪಾಸ್‌ ಕ್ಷಣ ಮಾತ್ರದಲ್ಲಿ ಹೊಳೆಯಂತಾಗುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಇರುವುದು ಹಲವು ಅವಾಂತರಗಳಿಗೆ ಕಾರಣವಾಗಲಿದೆ.

ನಾನು ನಿತ್ಯ ಬಾಡಿಗೆಗಾಗಿ ಬೆಂಗಳೂರಿನ ಸುತ್ತ ಮುತ್ತ ಸಂಚರಿಸುತ್ತೇನೆ. ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಅಂಡರ್‌ ಪಾಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಅವೈಜ್ಞಾನಿಕವಾಗಿವೆ. ಮಳೆ ಸುರಿದರೆ ನೀರು ತುಂಬಿ ತುಳುಕುತ್ತದೆ, ಆಟೋ ಡ್ರೈವರ್‌ ಸೇರಿದಂತೆ ವಾಹನ ಸವಾರರು ಮಳೆ ಬಂದರೆ ಅಂಡರ್‌ ಪಾಸ್‌ಗಳಲ್ಲಿ ಭಯದಲ್ಲೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಜೆ.ಪಿ.ನಗರ ಆಟೋ ಚಾಲಕ ಬೋರೇಗೌಡ ಹೇಳುತ್ತಾರೆ. ರಾತ್ರಿ ವೇಳೆ ಹಲವು ಅಂಡರ್‌ ಪಾಸ್‌ಗಳಲ್ಲಿ ವಿದ್ಯುತ್‌ ದೀಪಗಳೇ ಇಲ್ಲ. ಹೀಗಾದರೆ ಚಾಲಕರ ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ ಎನ್ನುತ್ತಾರೆ.

Advertisement

ಇಳಿಜಾರು ರೀತಿ ಅಂಡರ್‌ಪಾಸ್‌: ರಾಜಧಾನಿಯಲ್ಲಿ ನಿರ್ಮಿಸಿರುವ ಬಹುತೇಕ ಅಂಡರ್‌ ಪಾಸ್‌ಗಳ ವಿನ್ಯಾಸ ತಾಂತ್ರಿಕ ದೋಷದಿಂದ ಕೂಡಿದೆ. ಇಳಿಜಾರು ಬಂಡಿಯ ರೀತಿಯಲ್ಲಿ ಅಂಡರ್‌ ಪಾಸ್‌ ನಿರ್ಮಿಸಲಾಗಿದೆ. ಇಳಿಜಾರು ರೀತಿಯಲ್ಲಿ ಅಂಡರ್‌ ಪಾಸ್‌ ಇರುವುದು ಮಳೆ ಬಂದಾಗ ಅನೇಕ ರೀತಿಯ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ರಸ್ತೆ ಮತ್ತು ಮೂಲಭೂತ ಸೌಕರ್ಯ ತಜ್ಞರಾದ ಪ್ರೊ.ಶ್ರೀಹರಿ ಹೇಳುತ್ತಾರೆ. ಇಳಿಜಾರು ಬಂಡಿ ರೀತಿಯಲ್ಲಿ ಅಂಡರ್‌ಪಾಸ್‌ ನಿರ್ಮಿಸಿರುವುದರಿಂದ ಮಳೆ ನೀರು ಅಂಡರ್‌ ಪಾಸ್‌ನ ಡ್ರೈನೇಜ್‌ ಒಳಗೆ ಸೇರಿಕೊಳ್ಳುತ್ತದೆ. ಕಸಕಡ್ಡಿ ತುಂಬುವುದರಿಂದ ಕ್ಷಣ ಮಾತ್ರದಲ್ಲಿ ನೀರು ತುಂಬಿಕೊಳ್ಳುತ್ತದೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಹೊಳೆಯ ರೀತಿಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತಿಳಿಸುತ್ತಾರೆ. ನಮ್ಮಲ್ಲಿರುವ ಹಲವು ಅಂಡರ್‌ಪಾಸ್‌ಗಳು ಒಂದು ತುದಿಯಿಂದ ಮತ್ತೂಂದು ತುದಿ ಕಾಣಿಸುವುದೇ ಇಲ್ಲ. ವೈಜ್ಞಾನಿಕವಾಗಿ ನಿರ್ಮಿಸಿರುವ ಅಂಡರ್‌ ಪಾಸ್‌ಗಳ ಒಂದು ತುದಿ ಮತ್ತೂಂದು ತುದಿಗೆ ಕಾಣಿಸುತ್ತದೆ. ಜತೆಗೆ ಹಲವು ಅಂಡರ್‌ ಪಾಸ್‌ಗಳಲ್ಲಿ ವಿದ್ಯುತ್‌ ದೀಪದ ಸೌಕರ್ಯ ಇಲ್ಲ. ಇದು ಕೂಡ ರಾತ್ರಿ ವೇಳೆ ಹಲವು ಅನಾಹುತಗಳಿಗೂ ಕಾರಣವಾಗಬಹುದು ಎಂದು ಹೇಳುತ್ತಾರೆ.

ನಿರ್ವಹಣೆಗೆ 20 ಕೋಟಿ ರೂ. ಮೀಸಲು: ಬೆಂಗಳೂರು ವ್ಯಾಪ್ತಿಯಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳು ಇವೆ. 2022 -23ನೇ ಸಾಲಿನ ಬಜೆಟ್‌ನಲ್ಲಿ ಪಾಲಿಕೆ ಮೆಲ್ಸೇತುವೆ- ಕೆಳಸೇತುವೆ ಸೇರಿದಂತೆ ಸುರಂಗ ಮಾರ್ಗಗಳ ನಿರ್ವಹಣೆಗಾಗಿ ಸುಮಾರು 20 ಕೋಟಿ ರೂ. ಮೀಸಲಿಟ್ಟಿದೆ. ಹೊಸದಾಗಿ 4 ಮೆಲ್ಸೇತುವೆ ಮತ್ತು 4 ಕೆಳಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸಂಚಾರ ಸಮಸ್ಯೆಯನ್ನು ನೀಗಿಸಲು ಸಿಗ್ನಲ್‌ ರಹಿತ ಕಾರಿಡಾರ್‌ ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ 5 ಹೊಸ ಸೇತುವೆ ನಿರ್ಮಿಸಲು 210 ಕೋಟಿ ರೂ. ವ್ಯಯಿಸಲಾಗುತ್ತದೆ. ಪಾದಚಾರಿ ನಿರ್ವಹಣೆಗೆ ತಲಾ 25 ಲಕ್ಷ ರೂ. ಮೀಸಲಿರಿಸಲಾಗಿದೆ. ಪಾಲಿಕೆ ಬಜೆಟ್‌ನಲ್ಲಿ ಸೇತುವೆಗಳ, ಸುರಂಗ ಮಾರ್ಗ ಮತ್ತು ಪಾದಚಾರಿ ಮಾರ್ಗ ನಿರ್ವಹಣೆ ಅನುದಾನ ಮೀಸಲಿಟಟ್ಟಿದೆ. ಆದರೆ, ಪಾಲಿಕೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಪಾಲಿಕೆ ಎಂಜನಿಯರ್‌ಗಳು ಅಂಡರ್‌ ಪಾಸ್‌ಗಳ ಸ್ಥಿತಿ-ಗತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಎಲ್ಲೆಲ್ಲಿ ಕೆಟ್ಟಪರಿಸ್ಥಿತಿ ಇದೆ. ಡ್ರೈನೇಜ್‌ಗಳು ಬ್ಲಾಕ್‌ ಆಗಿವೆ ಎಂಬುದರ ಮಾಹಿತಿ ಪಡೆಯಲಾಗುತ್ತಿದೆ. ಸಂಚಾರಕ್ಕೆ ಯೋಗ್ಯವಲ್ಲದ ಅಂಡರ್‌ ಪಾಸ್‌ಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ನಿರ್ವಹಣೆ ನಡೆಯಲಿದೆ. – ತುಷಾರ್‌ ಗಿರಿನಾಥ್‌, ಪಾಲಿಕೆ ಮುಖ್ಯ ಆಯುಕ್ತ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next