Advertisement
ಇಲ್ಲಿ ಭಾರತ-ಆಸ್ಟ್ರೇಲಿಯ 6 ಪಂದ್ಯಗಳಲ್ಲಿ ಮುಖಾಮುಖೀಯಾಗಿವೆ. ಭಾರತ ನಾಲ್ಕರಲ್ಲಿ ಜಯಿಸಿದ್ದು, ಒಂದರಲ್ಲಷ್ಟೇ ಸೋತಿದೆ. ಉಳಿ ದೊಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಈ 6 ಪಂದ್ಯಗಳನ್ನು ಹೊರತುಪಡಿಸಿ ಆಸ್ಟ್ರೇಲಿಯ 2011ರ ವಿಶ್ವಕಪ್ ಕೂಟದ ವೇಳೆ ಕೀನ್ಯಾ ಮತ್ತು ಕೆನಡಾ ವಿರುದ್ಧ ಲೀಗ್ ಪಂದ್ಯಗಳನ್ನಾಡಿದ್ದು, ಎರಡನ್ನೂ ಗೆದ್ದಿದೆ.
ಭಾರತ-ಆಸ್ಟ್ರೇಲಿಯ ಬೆಂಗಳೂರಿನಲ್ಲಿ ಮೊದಲ ಪಂದ್ಯವಾಡಿದ್ದು 1989ರ “ಎಂ.ಆರ್.ಎಫ್. ವರ್ಲ್ಡ್ ಸಿರೀಸ್’ (ನೆಹರೂ ಕಪ್) ವೇಳೆ. ಕೆ. ಶ್ರೀಕಾಂತ್ ಮತ್ತು ಅಲನ್ ಬೋರ್ಡರ್ ನಾಯಕರಾಗಿದ್ದರು. ಭಾರತ ಈ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿತು. ಆಸ್ಟ್ರೇಲಿಯ 8ಕ್ಕೆ 247 ರನ್ ಹೊಡೆದರೆ, ಭಾರತ 47.1 ಓವರ್‌ಗಳಲ್ಲಿ 7 ವಿಕೆಟಿಗೆ 249 ರನ್ ಬಾರಿಸಿತು. ಶ್ರೀಕಾಂತ್ (58)-ರಮಣ್ ಲಾಂಬಾ (57) ಮೊದಲ ವಿಕೆಟಿಗೆ 115 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. 3 ವಿಕೆಟ್ ಜತೆಗೆ 32 ರನ್ ಮಾಡಿದ ಅಜಯ್ ಶರ್ಮ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Related Articles
2001ರ ದ್ವಿಪಕ್ಷೀಯ ಸರಣಿಯಲ್ಲಿ ಭಾರತ 315 ರನ್ ಪೇರಿಸಿ ಸವಾಲೊಡ್ಡಿತ್ತು. ಆಸ್ಟ್ರೇಲಿಯ 255ಕ್ಕೆ ಸರ್ವಪತನ ಕಂಡಿತು. ಸೆಹವಾಗ್ ಅವರ ಆಲ್‌ರೌಂಡ್ ಶೋ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. 6ನೇ ಕ್ರಮಾಂಕದಲ್ಲಿ ಆಡಲಿಳಿದು 58 ರನ್ ಬಾರಿಸಿದ ಸೆಹವಾಗ್, ಬಳಿಕ 59 ರನ್ನಿಗೆ 3 ವಿಕೆಟ್ ಉಡಾಯಿಸಿದರು. ಶ್ರೀನಾಥ್ ಕೂಡ 3 ವಿಕೆಟ್ ಕಿತ್ತರು.
Advertisement
ಬ್ಯಾಟಿಂಗಿನಲ್ಲಿ ಮಿಂಚಿದವರೆಂದರೆ ದ್ರಾವಿಡ್ (80), ಕೀಪರ್ ವಿಜಯ್ ದಹಿಯಾ (51), ಆಸೀಸ್ ಆರಂಭಕಾರ ಹೇಡನ್ (99) ಮತ್ತು ಬೆವನ್ (49). ನಾಯಕರಾಗಿದ್ದವರು ಸೌರವ್ ಗಂಗೂಲಿ, ಸ್ಟೀವ್ ವೋ. ಇದು 5 ಪಂದ್ಯಗಳ ಸರಣಿಯ ಮೊದಲ ಮುಖಾಮುಖೀಯಾಗಿತ್ತು.
ಆಸೀಸ್‌ಗೆ ಏಕೈಕ ಗೆಲುವುಬೆಂಗಳೂರಿನಲ್ಲಿ ಆಸೀಸ್‌ಗೆ ಭಾರತದೆದುರು ಏಕೈಕ ಗೆಲುವು ಒಲಿದದ್ದು 2003ರ “ಟಿವಿಎಸ್ ಕಪ್’ ಕೂಟದ ಪಂದ್ಯದಲ್ಲಿ. ಅಂತರ 61 ರನ್. ಗಿಲ್‌ಕ್ರಿಸ್ಟ್ (111) ಮತ್ತು ನಾಯಕ ಪಾಂಟಿಂಗ್ (ಅಜೇಯ 108) ಶತಕ ಸಾಹಸ ದಿಂದ ಆಸ್ಟ್ರೇಲಿಯ ಎರಡೇ ವಿಕೆಟಿಗೆ 347 ರನ್ ಪೇರಿಸಿತು. ಭಾರತ 8ಕ್ಕೆ 286ರ ತನಕ ಬಂದು ಶರಣಾಯಿತು. ಭಾರತದ ಪರ ತೆಂಡುಲ್ಕರ್ ಸರ್ವಾಧಿಕ 89 ರನ್ ಬಾರಿಸಿದರು. 2007ರ 7 ಪಂದ್ಯಗಳ ಸರಣಿಯ ಮೊದಲ ಮುಖಾಮುಖೀ ಬೆಂಗಳೂರಿನಲ್ಲಿ ನಡೆದಾಗ ಮಳೆ ಕೈಯಾಡಿಸಿತು. ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ನಡೆಸಿ 7ಕ್ಕೆ 307 ರನ್ ಪೇರಿಸಿತ್ತು. ಕ್ಲಾರ್ಕ್ 130 ರನ್ ಬಾರಿಸಿದ್ದರು. ಭಾರತ 2.4 ಓವರ್‌ಗಳಲ್ಲಿ ಒಂದಕ್ಕೆ 9 ರನ್ ಮಾಡಿದ್ದಾಗ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ರೋಹಿತ್ ಡಬಲ್ ಸೆಂಚುರಿ
2013ರಲ್ಲಿ ಭಾರತ-ಆಸ್ಟ್ರೇಲಿಯ ಇಲ್ಲಿ ಕೊನೆಯ ಸಲ ಮುಖಾಮುಖೀಯಾದಾಗ ರೋಹಿತ್ ಶರ್ಮ ಅಮೋಘ ದ್ವಿಶತಕ ಬಾರಿಸಿ ಮಿಂಚು ಹರಿಸಿದ್ದರು (209 ರನ್, 158 ಎಸೆತ, 12 ಬೌಂಡರಿ, 16 ಸಿಕ್ಸರ್). ಧವನ್ 60, ಧೋನಿ 62 ರನ್ ಹೊಡೆದರು. ಭಾರತ 6ಕ್ಕೆ 383 ರನ್ ರಾಶಿ ಹಾಕಿತು. ಜವಾಬಿತ್ತ ಆಸ್ಟ್ರೇಲಿಯ 326ಕ್ಕೆ ಆಲೌಟ್ ಆಯಿತು. ಆಸೀಸ್ ಪರ ಫಾಕ್ನರ್ 7ನೇ ಕ್ರಮಾಂಕದಲ್ಲಿ ಬಂದು 116 ರನ್ ಬಾರಿಸಿದರು. ಶಮಿ ಮತ್ತು ಜಡೇಜ ತಲಾ 3 ವಿಕೆಟ್ ಉರುಳಿಸಿದರು. ಈ ಫಲಿತಾಂಶದೊಂದಿಗೆ ಭಾರತ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತು. ರಾಜ್ಯದ 6 ಆಟಗಾರರು!
1996ರ “ಟೈಟಾನ್ ಕಪ್’ ಪಂದ್ಯ ಅನೇಕ ಕಾರಣಗಳಿಂದ ಕನ್ನಡಿಗರಿಗೆ ಸ್ಮರಣೀಯ. ಭಾರತವಿಲ್ಲಿ ಕರ್ನಾಟಕದ ಆಟಗಾರರ ಸಾಹಸದಿಂದ ಆಸ್ಟ್ರೇಲಿಯವನ್ನು 2 ವಿಕೆಟ್‌ಗಳಿಂದ ರೋಮಾಂಚಕಾರಿಯಾಗಿ ಮಣಿಸಿತ್ತು. ಅಂದಹಾಗೆ ಈ ಪಂದ್ಯದಲ್ಲಿ ರಾಜ್ಯದ 6 ಆಟಗಾರರು ಭಾರತ ತಂಡದಲ್ಲಿದ್ದರು. ಇವರೆಂದರೆ ದ್ರಾವಿಡ್, ಸೋಮಸುಂದರ್, ಕುಂಬ್ಳೆ, ಶ್ರೀನಾಥ್, ಪ್ರಸಾದ್ ಮತ್ತು ಜೋಶಿ! ಇದೊಂದು ಸಣ್ಣ ಮೊತ್ತದ ಸ್ಪರ್ಧೆಯಾಗಿತ್ತು. ನಾಯಕ ಮಾರ್ಕ್ ಟಯ್ಲರ್ (105) ಶತಕದ ಹೊರತಾಗಿಯೂ ಆಸೀಸ್ 215ಕ್ಕೆ ಆಲೌಟಾಯಿತು. ಭಾರತಕ್ಕೆ ಕಪ್ತಾನ ಸಚಿನ್ (88) ಆಸರೆಯಾದರು. 164ಕ್ಕೆ 8ನೇ ವಿಕೆಟ್ ಬಿದ್ದಾಗ ಭಾರತಕ್ಕೆ ಸೋಲು ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಮುರಿಯದ 9ನೇ ವಿಕೆಟಿಗೆ 52 ರನ್ ಪೇರಿಸಿದ ಶ್ರೀನಾಥ್ (30)-ಕುಂಬ್ಳೆ (16) ಸ್ಮರಣೀಯ ಗೆಲುವು ತಂದಿತ್ತಿದ್ದರು! ಪಿ.ಕೆ. ಹಾಲಾಡಿ