Advertisement

Karnataka Polls 2023: ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್‌ಗೆ ಕೈ, ಕಮಲದೊಳಗೆ ಸ್ಪರ್ಧೆ

12:01 PM Apr 07, 2023 | Team Udayavani |

ಬೆಂಗಳೂರು: ಒಕ್ಕಲಿಗ ಸಮುದಾಯದ ಬಾಹುಳ್ಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಕಂಡು ಬಂದಿದೆ. ಈಗಾಗಲೇ ಜೆಡಿಎಸ್‌ ಪಕ್ಷದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಪ್ರಭಾಕರ್‌ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

Advertisement

ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಟಿಕೆಟ್‌ ಯಾರಿಗೆ ದೊರೆಯಲಿದೆ ಎಂಬುವುದು ತೀವ್ರ ಕುತೂಹಲ ಕೆರಳಿಸಿದೆ.

ಕ್ಷೇತ್ರ ಮರು ವಿಂಗಡಣೆ ನಂತರ ಹುಟ್ಟಿಕೊಂಡಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಎಂ.ಕೃಷ್ಣಪ್ಪ ನೆಲೆಕಂಡು ಕೊಂಡಿದ್ದಾರೆ. ಇದೀಗ ನಾಲ್ಕನೇ ಜಯದ ಹುಮ್ಮಸ್ಸಿನಲ್ಲಿದ್ದಾರೆ. ಎಂ.ಕೃಷ್ಣಪ್ಪ ಅವರ ಬೆಂಬಲಿಗರು ಕೂಡ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

ಇನ್ನು ವಿಧಾನ ಪರಿಷತ್ತಿನ ಸದಸ್ಯ ತುಳಸಿ ಮುನಿರಾಜಗೌಡ ಕೂಡ ಬಿಜೆಪಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ರಾಜರಾಜೇಶ್ವರಿನಗರ ಅಥವಾ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಎರಡರಲ್ಲಿ ಒಂದು ಕಡೆ ಟಿಕೆಟ್‌ ಕೇಳಿದ್ದಾರೆ.

Advertisement

ಬೆಂ.ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿ, ಇಬ್ಬರಲ್ಲಿ ಯಾರಿಗೆ ಪಕ್ಷದ ವರಿಷ್ಠರು ಕೃಪೆ ತೋರಲಿದ್ದಾರೆ ಎಂಬುವುದು ಕೌತುಕ ಮೂಡಿಸಿದೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಪೈಪೋಟಿ: ಕಾಂಗ್ರೆಸ್‌ನಲ್ಲಿ ಕೂಡ ಟಿಕೆಟ್‌ಗೆ ಭಾರೀ ಪೈಪೋಟಿ ಕಂಡು ಬಂದಿದೆ. ಆಕಾಂಕ್ಷಿಗಳ ದೊಡ್ಡಪಟ್ಟಿಯೇ ಇದ್ದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಗುರುವಾರ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಕೈ ಟಿಕೆಟ್‌ ಯಾರ ಪಾಲಾಗುತ್ತೋ ಎಂಬುವುದೇ ಕ್ಷೇತ್ರದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆರ್‌.ಕೆ.ರಮೇಶ್‌ ಮತ್ತೊಮ್ಮೆ ಟಿಕೆಟ್‌ ಬಯಸಿದ್ದಾರೆ.

ಜತೆಗೆ ರಾಜಗೋಪಾಲ ರೆಡ್ಡಿ ಹಾಗೂ ಅವರ ಪತ್ನಿ ಸುಷ್ಮಾ ರಾಜಗೋಪಾಲ ರೆಡ್ಡಿ ಹಾಗೂ ಕಿಶೋರ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು ಟಿಕೆಟ್‌ ಪಡೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಟಿಕೆಟ್‌ ಆಕಾಂಕ್ಷಿಯಾಗಿರುವ ಆರ್‌.ಕೆ. ರಮೇಶ್‌ ಕ್ಷೇತ್ರದ ತುಂಬೆಲ್ಲ ಸುತ್ತಾಟ ನಡೆಸುತ್ತಿದ್ದಾರೆ. ಜೆಡಿಎಸ್‌ ಈಗಾಗಲೇ ಪ್ರಭಾಕರ್‌ ರೆಡ್ಡಿಗೆ ಟಿಕೆಟ್‌ ನೀಡಿದ್ದು ಅವರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆಮ್‌ ಆದ್ಮಿ ಪಾರ್ಟಿಯಿಂದ ಅಶೋಕ್‌ ಮೃತ್ಯುಂಜಯ ಕಣಕ್ಕಿಳಿದಿದ್ದಾರೆ.

2018ರಲ್ಲಿ ಏನಾಗಿತ್ತು?
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಂ.ಕೃಷ್ಣಪ್ಪ ಅವರು ಕಾಂಗ್ರೆಸ್‌ನ ಆರ್‌.ಕೆ.ರಮೇಶ್‌ ಅವರನ್ನು 30,417 ಮತಗಳಿಂದ ಮಣಿಸಿದ್ದರು.

ಎಂ.ಕೃಷ್ಣಪ್ಪ 1,52,469 ಮತ ಪಡೆದಿದ್ದರೆ ಎದುರಾಳಿಯಾಗಿದ್ದ ಕೈ ಅಭ್ಯರ್ಥಿ ರಮೇಶ್‌ 1,22,052 ಮತ ಪಡೆದಿದ್ದರು. ಶೇ.46 ರಷ್ಟು ಮತ ಪಡೆದು ಕೃಷ್ಣಪ್ಪ ವಿಜಯಶಾಲಿಯಾಗಿದ್ದರು. ಇದೀಗ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಪ್ರಭಾಕರ ರೆಡ್ಡಿ 36,164 ಮತ ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 15,829 ಮಂದಿ ನೋಟ ಚಲಾಯಿಸಿದ್ದರು.

ವಾರ್ಡ್‌ಗಳೆಷ್ಟು?
ಬೆಂಗಳೂರು ದಕ್ಷಿಣ ಕ್ಷೇತ್ರ ಈ ಹಿಂದೆ ಉತ್ತರಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಸೇರಿತ್ತು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಬೆಂ. ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಉತ್ತರ ಹಳ್ಳಿಯ ಹಲವು ಪ್ರದೇಶಗಳು ಸೇರ್ಪಡೆ ಆಗಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ, ಸುಬ್ರಹ್ಮಣ್ಯಪುರ, ವಸಂತಪುರ, ಯಲಚೇನಹಳ್ಳಿ,
ಕೋಣನಕುಂಟೆ, ಆರ್‌ಬಿಐ ಲೇಔಟ್‌, ಚುಂಚಘಟ್ಟ, ಅಂಜನಾಪುರ , ಗೊಟ್ಟಿಗೆರೆ, ಕಾಳೇನ ಅಗ್ರಹಾರ, ಬೇಗೂರು, ನಾಗನಾಥಪುರ ವಾರ್ಡ್‌ಗಳು ಬೆಂಗಳೂರು ದಕ್ಷಿಣ ವಿಧಾನಸಭಾಕ್ಷೇತ್ರ ವ್ಯಾಪ್ತಿಗೆ ಸೇರಿವೆ.

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next