Advertisement

ಜಕಣಾಚಾರಿ

11:41 AM Nov 11, 2017 | |

ಬೆಂಗಳೂರಿನ ಶಿಲ್ಪಿ ಪ್ರಕಾಶ್‌ ಅಪ್ಪಾಜಾಚಾರ್‌ರ ಕೈ ಚಿನ್ನ ಬೆಳ್ಳಿ ಕೆಲಸ ಮಾಡುತ್ತಿತ್ತು. ಅದರಲ್ಲಿ ಯಶಸ್ಸೂ ಆಗಿದ್ದರು. ಆದರೆ  ಪ್ರಕಾಶರಿಗೆ ಇದರಲ್ಲಿ ಆಸಕ್ತಿ ಇರಲಿಲ್ಲ.  ಬೇರೆ ಏನಾದರೂ ಮಾಡಬೇಕು ಅಂತ ಮನಸ್ಸು ಹಾತೊರೆದಾಗ ಕಂಡದ್ದು ಲೋಹದ ದೇವರ ಮೂರ್ತಿಗಳನ್ನು ಮಾಡುವ ವಿದ್ಯೆ. 

Advertisement

ಇದನ್ನು ಹೇಳಿಕೊಡಲು ಯಾರಾದರೂ ಬೇಕಲ್ಲ? ಅದಕ್ಕೆ ಗುರುಗಳನ್ನು ಹುಡುಕಿಕೊಂಡು  ಹಾಸನಕ್ಕೆ ಹೋದರು.  ಆದರೆ ಅವರಿಂದ ಉತ್ತಮ ಮಾರ್ಗದರ್ಶನ ಸಿಗಲಿಲ್ಲ.  ಅರ್ಧಂಭರ್ದ ಕಲಿತು ಊರಿಗೆ ವಾಪಸ್ಸಾದರು. 

ದೇವರಲ್ಲಿ ಅಪಾರ ನಂಬಿಕೆ. ಹೀಗಾಗಿ, ಏನಾದರೂ ಅಗಲಿ ನೋಡೇಬಿಡೋಣ ಅಂತ ಕಲಿತಿದ್ದ ಅಲ್ಪ ವಿದ್ಯೆಯನ್ನು ಬಳಸಿ ಚಿಕ್ಕ ಚಿಕ್ಕ ಮೂರ್ತಿಗಳನ್ನು ತಯಾರಿಸಲು ಮುಂದಾದರು. ಮೊದಲಿಗೆ ನಿರಾಸೆಯಾಯಿತು.ಪ್ರಕಾಶ್‌ ಹಿಂಜರಿಯಲಿಲ್ಲ. ಶತ ಪ್ರಯತ್ನ ಪಟ್ಟು ಲೋಹದ ಅಂದದ ಮೂರ್ತಿಗಳನ್ನು ತಯಾರಿಸುವುದನ್ನು ಕಲಿತೇ ಬಿಟ್ಟರು. ಕಳೆದ ಇಪ್ಪತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ.  ಪಂಚಲೋಹ, ಹಿತ್ತಾಳೆ, ಬೆಳ್ಳಿ ತಾಮ್ರ ಮುಂತಾದವುಗಳಿಂದ ನಿಮಗೆ ಹೇಗೆ ಬೇಕೋ ಹಾಗೆ ಅಂದವಾದ ದೇವರ ವಿಗ್ರಹವನ್ನು ನಿರ್ಮಿಸಿಕೊಡುತ್ತಾರೆ.  ಈ ವಿಗ್ರಹಗಳನ್ನು ಮಾಡಲು ಬೇಕಾದ ಅಚ್ಚುಗಳನ್ನು ಮರಳಿನಿಂದ ತಾವೇ ತಯಾರಿಸಿಕೊಳ್ಳುತ್ತಾರೆ. 

ಎಂಥಹ ಸೂಕ್ಷ್ಮ ಕೆತ್ತೆನೆ ಇರುವ ವಿಗ್ರಹವಾದರೂ ಸರಿ.  ಅದನ್ನು ಅಚ್ಚುಕಟ್ಟಾಗಿ ಸುಂದರವಾಗಿ ಕೆತ್ತಿಕೊಡುತ್ತಾರೆ. ಇವರ ಬಳಿ ಬಂದ ಗ್ರಾಹಕರೊಬ್ಬರು ಒಂದು ಅಮೃತ ಶಿಲೆಯ ಆಂಜನೇಯನ ಮೂರ್ತಿ ತಂದಿದ್ದರು. ಅದನ್ನು ಅವರ ಗೆಳೆಯ ಉಡುಗೊರೆಯಾಗಿ ನೀಡಿದ್ದರಂತೆ. ಅದನ್ನು ಪಂಚಲೋಹದಲ್ಲಿ ಮಾಡಿಸಿ ಅದಕ್ಕೆ ಪ್ರತಿವಾರ  ಅಭಿಷೇಕ ಮಾಡಬೇಕೆಂಬ ಹಂಬಲ.  ಹಲವಾರು ಶಿಲ್ಪಿಗಳ ಬಳಿಗೆ ಹೋದರೂ ಇದರ ಅಚ್ಚು ತೆಗೆಯುವುದು ಕಷ್ಟ ಎಂದರಂತೆ. ಪ್ರಕಾಶ್‌ ಬಳಿ ಕೇಳುವ ಕೊನೆಯ ಪ್ರಯತ್ನ ಮಾಡೋಣವೆಂದು  ತಂದು ತೋರಿಸಿದರು. ಅದನ್ನು ಸವಾಲಾಗಿ ಸ್ವೀಕರಿಸಿ ಅಮೃತ ಶಿಲೆಯ ಆಂಜನೇಯನ ತದ್ರೂಪು ಶಿಲ್ಪ ಕೈಗಿಟ್ಟರು. ಇದುವೇ ಅವರ ಪರಿಪೂರ್ಣತೆಗೆ ಉದಾಹರಣೆ.  ಇವರು ತಯಾರಿಸಿರುವ ಲೋಹದ ಮೂರ್ತಿಗಳು ದೇಶ ವಿದೇಶಗಳಿಗೂ ಹೋಗಿವೆ. 

ಒಂದಿಂಚಿನ ವಿಗ್ರಹಗಳಿಂದ ಹಿಡಿದು ಆಳೆತ್ತರದ ಮೂರ್ತಿಗಳನ್ನೂ ಇವರು ನಿರ್ಮಿಸಿದ್ದಾರೆ. ಬರಿ ದೇವರ ಮೂರ್ತಿಗಳನ್ನಲ್ಲದೇ ದೇವರ ಬೆಳ್ಳಿ ಮುಖವಾಡಗಳು, ಕವಚಗಳು, ಸುಂದರವಾದ ಬಾಗಿಲಿನ ಬೆಳ್ಳಿಯ ಹಾಗೂ ಹಿತ್ತಾಳೆ ಲೋಹದ ಹೊದಿಕೆಗಳು, ಉತ್ಸವ ಮೂರ್ತಿಗಳನ್ನು ಮಾಡಿಸಲು ರಾಜ್ಯದ ಮೂಲೆ ಮೂಲೆಗಳಿಂದ ಇವರನ್ನು ಹುಡುಕಿಕೊಂಡು ಬರುತ್ತಾರೆ. 

Advertisement

ಲೋಹದ ಮಾರ್ತಿಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚು.  ಅಪ್ಪನ ಕನಸನ್ನು ನನಸಾಗಿಸಲು ಇವರ ದೊಡ್ಡ ಮಗ ಪುನೀತ್‌ ಕೈತುಂಬ  ಸಂಬಳ ತರುತ್ತಿದ್ದ ಕೆಲಸವನ್ನು ಬಿಟ್ಟು ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ.  ಎರಡನೆಯ ಮಗ ಪವನ್‌ ಕೂಡ ಕಾಲೇಜಿನ ನಂತರದ ಬಹಳ ಸಮಯವನ್ನು ತಮ್ಮ ತಂದೆಯ ಮಾರ್ತಿ ತಯಾರಿಕಾ ಕಾರ್ಯಗಾರದಲ್ಲಿಯೇ ಕಳೆಯುತ್ತಾರೆ.  ಮೂರ್ತಿ ತಯಾರಿಸುವುದನ್ನು ಕಲಿಯುತ್ತಿದ್ದಾರೆ. ಮಕ್ಕಳು ಇವರ ಕಾರ್ಯದಲ್ಲಿ ಸಹಕರಿಸುತ್ತಿರುವುದು ಪ್ರಕಾಶ್‌ಗೆ ಮೂರ್ತಿಗಳನ್ನು ಗ್ರಾಹಕರಿಗೆ ಬೇಗ ತಲುಪಿಸಲು ನೆರವಾಗಿದೆ. 

 ಪ್ರಕಾಶ್‌.ಕೆ.ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next