ಉದಯವಾಣಿ ಸಮಾಚಾರ
ಬೆಂಗಳೂರು: ಹಲವು ಬಾರಿ ಹೆಸರು ಬದಲಾವಣೆ ಹಾಗೂ ಪುನರ್ವಿಂಗಡಣೆಗೆ ಒಳಗಾದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಮೂವರು ಕೇಂದ್ರ ಮಂತ್ರಿಗಳನ್ನು ಕೊಟ್ಟಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸಂಸದರಾಗುವ ಅವಕಾಶ ಮಾಡಿಕೊಟ್ಟ ಕ್ಷೇತ್ರ. ಘಟಾನುಘಟಿಗಳ ಸೋಲು ಹಾಗೂ ಗೆಲುವಿಗೆ ಕಾರಣವಾದ ಈ ಕ್ಷೇತ್ರದಲ್ಲಿ 2004 ರಿಂದ ಬಿಜೆಪಿ ಪಾರುಪತ್ಯ ಸಾಧಿಸಿದೆ.
1952ರ ಮೊದಲ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಕೇಶವ ಐಯ್ಯಂಗಾರ್ ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರೆ, ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಲ್ಲದೆ, ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. ಅದರಲ್ಲೂ ರೈಲ್ವೆ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಅದೇ ರೀತಿ ಬರೋಬ್ಬರಿ 7 ಬಾರಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದ ಸಿ.ಕೆ. ಜಾಫರ್ ಷರೀಫ್ ಕೂಡ ಕೇಂದ್ರದಲ್ಲಿ ರೈಲ್ವೆ ಸೇರಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. 1996 ರಲ್ಲಿ ಮಾತ್ರ ಜೆಡಿಎಸ್‌ನ ಸಿ.ನಾರಾಯಣಸ್ವಾಮಿ ಗೆದ್ದಿದ್ದು ಬಿಟ್ಟರೆ, ಸುಮಾರು 46 ವರ್ಷಗಳ ಕಾಲ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿತ್ತು. 2004ರಲ್ಲಿ ಎಚ್.ಟಿ. ಸಾಂಗ್ಲಿಯಾನ ಗೆಲ್ಲುವ ಮೂಲಕ ಬಿಜೆಪಿಯ ಖಾತೆ ತೆರೆದರಲ್ಲದೆ, ಅಂದಿನಿಂದ ಈವರೆಗೆ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಡಿ.ಬಿ. ಚಂದ್ರೇಗೌಡರ ನಂತರ ಎರಡು ಬಾರಿ ಬಿಜೆಪಿಯಿಂದಲೇ ಗೆದ್ದ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಇತ್ತೀಚಿನವರೆಗೆ ಕೇಂದ್ರ ಮಂತ್ರಿಯಾಗಿಯೂ ಇದ್ದರು.
ವಲಸಿಗರ ಕೈ ಹಿಡಿದದ್ದೇ ಹೆಚ್ಚು: ಬಹುತೇಕ ವಲಸಿಗರನ್ನೇ ಗೆಲ್ಲಿಸಿರುವ ಇಲ್ಲಿನ ಮತದಾರರು ಸ್ಥಳೀಯರನ್ನು ಕೈ ಹಿಡಿದದ್ದು ಕಡಿಮೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರು ಮೂಲತಃ ರಾಮನಗರದವರಾದರೆ, ಜಾಫರ್ ಷರೀಫ್ ಚಳ್ಳಕೆರೆ ಮೂಲದವರು. ಚಿಕ್ಕಮಗಳೂರು ಮೂಲದ ಡಿ.ಬಿ. ಚಂದ್ರೇಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಡಿ.ವಿ. ಸದಾನಂದಗೌಡ ಸೇರಿ ವಲಸಿಗರನ್ನೇ ಅಪ್ಪಿಕೊಂಡಿದ್ದು ಹೆಚ್ಚು. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆದ್ದಿದ್ದರೆ, ಮೂರರಲ್ಲಿ ಕಾಂಗ್ರೆಸ್ ಬಲವಿದೆ. ಆದರೆ, ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿದ್ದು, ಬಿಜೆಪಿಯಿಂದ ಹೊರಬಂದಂತಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಶವಂತಪುರದಲ್ಲಿ ಉಪಚುನಾವಣೆ ಎದುರಿಸುವುದು ಕಷ್ಟವಿದೆ. ಅದರ ಬದಲು ಲೋಕಸಭೆಗೇ ಸ್ಪರ್ಧಿಸುವ ಅವಕಾಶವನ್ನು ಕಾಂಗ್ರೆಸ್ ನೀಡಲು ಚಿಂತನೆ ನಡೆಸಿದೆ. ಸೋಮಶೇಖರ್ ಕೂಡ ಇದಕ್ಕೆ ತಯಾರಾಗುತ್ತಿದ್ದಾರೆ. ಚುನಾವಣೆ ಕಾವೇರಿದ ನಂತರ ಕ್ಷೇತ್ರದ ರಾಜಕೀಯ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ.
*ಸಾಮಗ ಶೇಷಾದ್ರಿ