Advertisement

ಬೆಂಗಳೂರು- ಮೈಸೂರು ಷಟ್ಪಥ ಕಾಮಗಾರಿ ಶೀಘ್ರ

06:00 AM Jul 24, 2018 | Team Udayavani |

ಬೆಂಗಳೂರು: ಬೆಂಗಳೂರು -ಮೈಸೂರು ಷಟ³ಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆಪ್ಟೆಂಬರ್‌ನಿಂದ ಆರಂಭಿಸಲಾಗುವುದು ಎಂದು ಲೋಕೋ ಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಷಟ್ಪಥ ರಸ್ತೆ ಕಾಮಗಾರಿಗೆ ಈಗಾಗಲೇ ಶೇ. 63ರಷ್ಟು ಭೂ ಸ್ವಾಧೀನ
ಪಡಿಸಿಕೊಳ್ಳಲಾಗಿದ್ದು, ದಿಲೀಪ್‌ ಕನ್‌ ಸ್ಟ್ರಕ್ಸನ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 6500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು-ನಿಡಘಟ್ಟ 56 ಕಿ.ಮೀ. 2334 ಕೋಟಿ ರೂ. ವೆಚ್ಚ. ನಿಡಘಟ್ಟ- ಮೈಸೂರು ಆರು ಪಥ, 61 ಕಿ.ಮೀ. 2685 ಕೋಟಿ ರೂ., ಮಲ್ಲಸಂದ್ರ-ಕರಡಿ ನಾಲ್ಕು ಪಥ, 53 ಕಿ.ಮೀ.1067 ಕೋಟಿ ರೂ., ಕದ್ರಿ-ಬಾಣಾವರ ನಾಲ್ಕು ಪಥ, 56 ಕಿ.ಮೀ. 936 ಕೋಟಿ ರೂ.,ಬಾಣಾವರ-ಬೆಟ್ಟದಹಳ್ಳಿ 4 ಪಥ , 48 ಕಿ.ಮೀ. 783 ಕೋಟಿ ರೂ., ಬೆಳಗಾವಿ-ಖಾನಾಪುರ 4 ಪಥ, 30 ಕಿ.ಮೀ.803 ಕೋಟಿ ರೂ., ಖಾನಾಪುರ-ಗೋವಾ ಗಡಿ ಭಾಗ 52 ಕಿ.ಮೀ.440 ಕೋಟಿ ರೂ., ಬೈರಾಪುರ-ಚಳ್ಳಕೆರೆ 49 ಕಿ.ಮೀ. 606 ಕೋಟಿ ರೂ., ಶಿರಸಿ-ಕುಮಟಾ-ಬೇಲೆಕೇರಿ ಬಂದರು, 59.30 ಕಿ. ಮೀ. 370 ಕೋಟಿ ರೂ. ಯೋಜನೆ ಸೇರಿ 10 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ಒಪ್ಪಿಗೆ ದೊರೆತಿದೆ ಎಂದು ಹೇಳಿದರು.

ಚಾರ್ಮಾಡಿ ಘಾಟ್‌ ಕಾಮಗಾರಿಗೆ 250 ಕೋಟಿ ರೂ. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ಅವರ ಹುಬ್ಬಳ್ಳಿ ನಿವಾಸದ ಎದುರಿನ ರಸ್ತೆಯನ್ನು ಸಿಆರ್‌ಎಫ್ ನಿಧಿಯಿಂದ ಕೈಗೊಳ್ಳಲು ಸೂಚಿಸಲಾಗಿದ್ದು, ಗುತ್ತಿಗೆದಾರರಿಗೆ 35 ಕೋಟಿ ರೂ. ಬಿಲ್‌ ಬಾಕಿ ಇದೆ. 23 ಕೋಟಿ ರೂ.ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದರು.

Advertisement

ಗುಂಡಿ ಮುಚ್ಚಲು ಹಣ: ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಗುಂಡಿ ಮುಚ್ಚಲು ಪ್ರತಿ ಕಿಲೊ ಮೀಟರ್‌ಗೆ 25 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಗುಂಡಿ ಮುಚ್ಚುವ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಳೆ ನಿಂತ ತಕ್ಷಣ ಕಾರ್ಯ ಆರಂಭಿಸಲಾಗುವುದು.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನದಿ ಮತ್ತು ಹಳ್ಳ ದಾಟಲು ಕಾಲು ಸಂಕ ಬಳಸುತ್ತಿದ್ದು,ಇದರಿಂದ ಜಾರಿ ಬಿದ್ದು ಕೆಲವರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲೆಲ್ಲಿ ಸೇತುವೆಗಳಿಯೋ ಅಂತಹ ಕಡೆ ಸಣ್ಣ ಸೇತುವೆ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬಡ್ತಿ ಮೀಸಲಾತಿ ಪ್ರಕರಣ ಸುಪ್ರೀಂಕೋರ್ಟ್‌ ನಲ್ಲಿದೆ. ಕೋರ್ಟ್‌ ಆದೇಶ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಇಲಾಖೆಯಲ್ಲಿ ಹಸ್ತಕ್ಷೇಪ ಇಲ್ಲ
ಸಮ್ಮಿಶ್ರ ಸರ್ಕಾರದಲ್ಲಿ ಬೇರೆಯವರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪಕ್ಕೆ ಸಚಿವ ರೇವಣ್ಣ ಗರಂ ಆಗಿದ್ದಾರೆ. ಈ ಕುರಿತ ಆರೋಪಗಳ ಬಗ್ಗೆ ಸುದ್ದಿಗಾರರರು ಪ್ರಶ್ನಿಸಿದಾಗ ಕೋಪಗೊಂಡ ಅವರು, ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಹಿರಿಯರಿದ್ದಾರೆ. ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಭವಿಷ್ಯ ನುಡಿಯಲು ಆರಂಭಿಸಿದರೆ ಹೇಗೆ ? ಅವರಿಗೆ ಏನಾದರೂ ತೊಂದರೆಯಾಗಿದ್ದರೆ, ನಾನು ಯಾವ ಇಲಾಖೆಯಲ್ಲಿ ಮೂಗು ತೂರಿಸಿದ್ದೇನೆ ಎಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next