Advertisement

ಬೆಂಗಳೂರು –ಮೈಸೂರು ಷಟ್ಪಥ ಕಾಮಗಾರಿಗೆ ಜ.8ರಂದು ಚಾಲನೆ

11:55 AM Dec 02, 2018 | |

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜನವರಿ 8 ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ ನಂತರ ಮಾತನಾಡಿದ ಆವರು, ಬೆಂಗಳೂರು-ಮೈಸೂರು ಷಟ್ಪಥ ರಸ್ತೆಯ ಪ್ಯಾಕೇಜ್‌-1ಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ಯಾಕೆಜ್‌-2ಕ್ಕೆ ಸಂಬಂಧಿಸಿದಂತೆ ಕೆಆರ್‌ಡಿಸಿಎಲ್‌ ಭೂಮಿ ಡಿನೋಟಿಫಿಕೇಷನ್‌ ಮತ್ತು ಕಂದಾಯ ದಾಖಲೆಗಳ ಪರಿಷ್ಕರಣಾ ಕಾರ್ಯ ಪೂರ್ಣಗೊಳಿಸುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 7622 ಕಿ.ಮೀ. ಉದ್ದದ ರಸ್ತೆಯಿದ್ದು,  ಈ ಪೈಕಿ 3348 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲಿದೆ. 1954 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 516 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಹೊಸದಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅಗತ್ಯ ಇರುವ ಭೂ ಸ್ವಾಧೀನ ಪ್ರಕ್ರಿಯೆ ಶೇ.80ರಷ್ಟು ಮುಗಿದಿದ್ದು ಇಂಧನ, ಅರಣ್ಯ, ಕೆಆರ್‌ಡಿಸಿಎಲ್‌ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಇರುವ ತೊಡಕು ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ತುಮಕೂರು-ಶಿವಮೊಗ್ಗ ಪ್ಯಾಕೇಜ್‌ 1,2,3 ಹಾಗೂ ಬೈರಾಪುರ ಚಳ್ಳಕೆರೆ ಪ್ಯಾಕೇಜ್‌-2, ಬಳ್ಳಾರಿ ಬೈರಾಪುರ ಪ್ಯಾಕೇಜ್‌-1, ಚಳ್ಳಕೆರೆ ಹಿರಿಯೂರು ಪ್ಯಾಕೇಜ್‌-3 ಚತುಷ್ಪಥ ರಸ್ತೆಯ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅನುಮತಿ ಬೇಕಾಗಿದ್ದು ತ್ವರಿತ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಬೇಗ ಕೈಗೊಳ್ಳಬೇಕು. ಅದಕ್ಕಾಗಿ ಅಗತ್ಯ ಇರುವ ಭೂಸ್ವಾಧೀನ ಅಧಿಕಾರಿಗಳನ್ನು ತಕ್ಷಣವೇ ನೇಮಿಸಲಾಗುವುದು ಎಂದು ತಿಳಿಸಿದರು. ಆಶ್ರಯ ಯೋಜನೆಯಡಿ ಶೇಷಗಿರಿ ಹಳ್ಳಿ ಮತ್ತು ಹುಳ್ತಾರ್‌ ಅರಣ್ಯ ಪ್ರದೇಶದಲ್ಲಿ ಭೂಮಿ ಕಳೆದುಕೊಂಡವರಿಗೆ ರಾಜ್ಯ ಸರ್ಕಾರವು ಪರ್ಯಾಯ ಭೂಮಿ ಗುರುತಿಸಿದ್ದು, ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಮುಖ್ಯಮಂತ್ರಿಯವರ ಸೂಚಿಸಿದರು.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಪಯಲ್‌, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಹೆದ್ದಾರಿ ಪ್ರಾಧಿಕಾರದ ಮಹಾನಿರ್ದೇಶಕ ಬಿ.ಎನ್‌.ಸಿಂಗ್‌ ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯ ರಸ್ತೆ ಮತ್ತು ಜಲಸಂಪನ್ಮೂಲ ಇಲಾಖೆ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಹಕರಿಸಿದ್ದಾರೆ. ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮೇಕೆದಾಟು ಯೋಜನೆ ಡಿಪಿಎಆರ್‌ ಸಿದ್ಧಪಡಿಸುವ ಸಂಬಂಧ ರಾಜ್ಯದ ಜಲಸಂಪನ್ಮೂಲ ಇಲಾಖೆ ಸಲಹೆಗಾರರೊಂದಿಗೆ  ಈಗಾಗಲೇ ಮಾತುಕತೆ ನಡೆಸಿದ್ದೇನೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next