ಬೆಂಗಳೂರು: ಬೆಂಗಳೂರಿನಿಂದ (“ನೈಸ್’ ರಸ್ತೆ ಮಾರ್ಗ) ಮಾಗಡಿಯ ಪಟ್ಟಣದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇನ್ನೊಂದು ತಿಂಗಳೊಳಗೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಈ ಸಂಬಂಧ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿಫ್) ಮುಖ್ಯ ಯೋಜನಾಧಿಕಾರಿ ಕೆ.ಎಸ್.ಕೃಷ್ಣಾರೆಡ್ಡಿ, ಮುಖ್ಯ ಎಂಜಿನಿಯರ್ ಸುರೇಶ್ ಬಾಬು ಅವರ ಜತೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿಕಾಸ ಸೌಧ ದಲ್ಲಿ ಬುಧವಾರ ಯೋಜನಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ತಾಂತ್ರಿಕ ಕಾರಣಗಳಿಂದ ಬೆಂಗಳೂರಿನಿಂದ ಮಾಗಡಿಯ ಪಟ್ಟಣದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಉದ್ದೇಶಿತ ಯೋಜನೆಗೆ ಸದ್ಯ 1,036 ಕೋಟಿ ರೂ. ಮೊತ್ತದಲ್ಲಿ 170 ಎಕರೆ ಭೂಮಿಯನ್ನು ಖರೀದಿಸಲಾಗಿದೆ.
ಯೋಜನೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ಶೇ.90 ಭೂಮಿ ಸರ್ಕಾರಕ್ಕೆ ಹಸ್ತಾಂತರವಾಗಿದ್ದು, ಉಳಿದಿರುವ ಪ್ರಕ್ರಿಯೆಯನ್ನು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಮಾಗಡಿಯ ಪಟ್ಟಣದ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ, ಆದ್ಯತೆಯ ಮೇಲೆ ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.
ಇನ್ನು ಮಾಗಡಿ ತಾಲೂಕಿನಲ್ಲಿ ನಾಡಪ್ರಭು ಕೆಂಪೇಗೌಡ ಅವರ ಸಮಾಧಿ ಇದೆ. ಈ ಭಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಹ ಈ ಹೆದ್ದಾರಿ ಸಹಕಾರಿಯಾಗಲಿದೆ. ಅಲ್ಲದೆ, ರಸ್ತೆ ಹುಲಿಯೂರುದುರ್ಗದ ಮೂಲಕ ರಂಗನಾಥಪುರ ಹಾಗೂ ಸೋಮವಾರ ಪೇಟೆಗೂ ಸಂಪರ್ಕ ಕಲ್ಪಿಸಲಿದೆ. ಇದರಿಂದ ಪ್ರವಾಸಿ ತಾಣಗಳ ಸಂಪರ್ಕ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಾಗಡಿ ಶಾಸಕ ಮಂಜುನಾಥ ಮತ್ತಿತರರು ಹಾಜರಿದ್ದರು.