ಬೆಂಗಳೂರು: ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸುವುದಕ್ಕೆ (ಈಸ್ ಆಫ್ ಲಿವಿಂಗ್) ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ. ಮಿಲಿಯನ್ ಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರತಿ ವರ್ಷ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಾಲ್ ಪರ್ಫಾಮೆನ್ಸ್ ಇಂಡೆಕ್ಸ್ (ಸುಸ್ಥಿರ ಮತ್ತು ಗುಣಮಟ್ಟದ ಜೀವನ ಹಾಗೂ ಪಾಲಿಕೆಗಳ ಕಾರ್ಯ ವೈಖರಿಯ) ಎರಡು ವಿಭಾಗದಲ್ಲಿ ವಿವಿಧ ಮಾನದಂಡಗಳ ಆಧಾರದ ಮೇಲೆ ರ್ಯಾಂಕಿಂಗ್ ನೀಡುತ್ತಿದೆ.
ಇದನ್ನೂ ಓದಿ:ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು
2020ನೇ ಸಾಲಿನ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಾಲ್ ಪರ್ಫಾಮೆನ್ಸ್ ಇಂಡೆಕ್ಸ್‌ನಲ್ಲಿ ದೇಶದ 111 ಪ್ರಮುಖ ನಗರ ಭಾಗವಹಿಸಿದ್ದವು. ಬೆಂಗಳೂರಿಗೆ ಈಸ್ ಆಫ್ ಲಿವಿಂಗ್‌ನಲ್ಲಿ ದೇಶದಲ್ಲೇ ಮೊದಲ ಸ್ಥಾನ ಬಂದಿದ್ದು, ಪಾಲಿಕೆಯ ಕಾರ್ಯವೈಖರಿ ರ್ಯಾಂಕಿಂಗ್‌ನಲ್ಲಿ 31ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರಿದೀಪ್ ಸಿಂಗ್ ಪುರಿ ಅವರು ಗುರುವಾರ ನಡೆದ ವರ್ಚುವಲ್ ಸಭೆ ನಡೆಸಿದ ನಂತರ ನಗರಗಳ ರ್ಯಾಂಕಿಂಗ್ ಘೋಷಿಸಿದರು.