Advertisement

ಬೆಂಗಳೂರು ಚಿತ್ರೋತ್ಸವ : ಹಲವಾರು ವೈವಿಧ್ಯ-ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ

01:12 PM Feb 26, 2020 | Nagendra Trasi |

ಉದಯವಾಣಿ ಪ್ರತಿನಿಧಿಯಿಂದ ಬೆಂಗಳೂರು ಫೆ. 26 : ಐಟಿ ರಾಜಧಾನಿ ಬೆಂಗಳೂರು 12 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿದೆ. ಇಂದು (ಬುಧವಾರ) ಚಾಲನೆಗೊಳ್ಳುವ ಚಿತ್ರೋತ್ಸವ ಮಾ. 4 ರವರೆಗೂ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಈ ಚಿತ್ರೋತ್ಸವ ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ.

Advertisement

ಯಶವಂತಪುರ ಬಳಿಯ ಒರಿಯಾನ್‌ ಮಾಲ್‌, ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ, ರಾಜಾಜಿನಗರದ ನವರಂಗ್‌ ಥಿಯೇಟರ್‌ ಹಾಗೂ ಡಾ. ರಾಜ್‌ ಭವನಕ್ಕೆ ವಿಸ್ತರಣೆಗೊಂಡಿರುವುದು ವಿಶೇಷ. ಸುಮಾರು 60 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಿದ್ಧತೆ ಕುರಿತು ವಿವರಿಸಿದ ಚಿತ್ರೋತ್ಸವ ಕಲಾ ನಿರ್ದೇಶಕ ಎನ್‌। ವಿದ್ಯಾಶಂಕರ್‌, ‘ಪ್ರತಿನಿಧಿಗಳು ಹಾಗೂ ಸಿನಿಮಾ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೂ ಸೇರಿದಂತೆ ಸುಮಾರು 10 ಸಾವಿರ ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಂಬಂಧ ಪೂರ್ವ ಸಿದ್ಧತೆ ಮುಗಿದಿದೆ’ ಎಂದು ಉದಯವಾಣಿಗೆ ತಿಳಿಸಿದ್ದಾರೆ.

ಈ ಬಾರಿಯ ಉತ್ಸವದ ಥೀಮ್ ‘ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಿನಿಮಾ ‘. ಹಾಗಾಗಿ ಈ ಥೀಮ್ ನ್ನು ಚಿತ್ರಿಸುವ ಹಾಗೂ ಆ ಕುರಿತು ಹೇಳುವಂಥ ಹಲವು ಚಿತ್ರಗಳಿಗೆ ಪ್ರಾಮುಖ್ಯ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ ಭಾರತೀಯ ಪಾರಂಪರಿಕ ಸಂಗೀತ ಪ್ರಧಾನ ಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ.

ಕನ್ನಡದ ಸಂಧ್ಯಾರಾಗ, ಹಂಸಗೀತೆ, ಶ್ರೀ ಪುರಂದರ ದಾಸರು, ಮಲಯ ಮಾರುತ, ವಾಣಿ ಸೇರಿದಂತೆ ಹಿಂದಿಯ ತಾನ್‌ಸೇನ್‌. ಬೈಜು ಬಾವ್ರಾ, ತೆಲುಗಿನ ಶಂಕರಾಭರಣಂ, ಮರಾಠಿಯ ಸಂತ ತುಕಾರಾಂ, ತೆಲುಗಿನ ತ್ಯಾಗಯ್ಯ, ತಮಿಳಿನ ಮೀರಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು ವಿದ್ಯಾಶಂಕರ್‌.

Advertisement

ಈ ಬಾರಿಯ ಮತ್ತೊಂದು ವಿಶೇಷ ಹಾಗೂ ಬೆಳವಣಿಗೆಯಂದರೆ, ಬಿಫೆಸ್ ಸ್ಕ್ರಿಪ್ಟ್‌ ಲ್ಯಾಬ್‌. ಎರಡು ವರ್ಷದಿಂದ ಈ ಸ್ಕ್ರಿಪ್ಟ್‌ ಲ್ಯಾಬ್‌ ಮಾಡುತ್ತಿದ್ದೆವು. ಇದರಲ್ಲಿ ಹೆಸರಾಂತ ಸಿನಿಮಾ ನಿರ್ದೇಶಕರು ಹೊಸಬರಿಗೆ ಸ್ಕ್ರಿಪ್ಟ್‌ ಇತ್ಯಾದಿ ಕುರಿತು ಹೇಳುತ್ತಿದ್ದರು. ಹೀಗೆ ತರಬೇತಿಯಲ್ಲಿ ಪಾಲ್ಗೊಂಡ ಐವರು ಈಗ ಸ್ಕ್ರಿಪ್ಟ್ ರಚಿಸಿದ್ದಾರೆ. ಅದರ ಕುರಿತು ಚರ್ಚೆ ಹಾಗೂ ಮಾರ್ಗದರ್ಶನ ಈ ಲ್ಯಾಬ್‌ನಲ್ಲಿ ನಡೆಯಲಿದೆ ಎಂಬುದು ವಿದ್ಯಾಶಂಕರ್‌ ರ ವಿವರಣೆ.

ಈ ಚಿತ್ರೋತ್ಸವದಲ್ಲಿ ಕ್ಲಾಸಿಕ್ ಚಿತ್ರಗಳ ಮರು ವೀಕ್ಷಣೆ ಮತ್ತೊಂದು ವಿಶೇಷ. ಬೈಸಿಕಲ್‌ ಥೀವ್ಸ್‌ನಿಂದ ಹಿಡಿದು ದಿ ಜನರಲ್ ಇತ್ಯಾದಿ ಚಿತ್ರಗಳಿವೆ. ಹಲವಾರು ವಿಶ್ವ ಸಿನಿಮಾಗಳ ಭಾರತೀಯ ಪ್ರೀಮಿಯರ್‌ ಈ ಚಿತ್ರೋತ್ಸವದಲ್ಲಾಗುತ್ತಿದೆ. ಅಕಿರಾ ಕುರಸೋವಾ ಸೇರಿದಂತೆ ಹಲವರ ಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ.

ಮಾಸ್ಟರ್‌ ಕ್ಲಾಸಸ್‌, ವಿಚಾರ ಸಂಕಿರಣ ಚಿತ್ರೋತ್ಸವದ ಭಾಗವಾಗಿದೆ. ಸ್ಪರ್ಧೆಗಳ ಪೈಕಿ ಏಷ್ಯನ್ ಚಲನಚಿತ್ರ ವಿಭಾಗ, ಚಿತ್ರ ಭಾರತಿ ಹಾಗೂ ಕನ್ನಡ ಸಿನಿಮಾಗಳ ವಿಭಾಗದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next