Advertisement

ಬೆಂಗಳೂರಿನಲ್ಲಿ ಫೆ.2ರಿಂದ ಸಿನಿಮೋತ್ಸವ

11:41 AM Jan 28, 2017 | |

ಬೆಂಗಳೂರು: ಒಂಬತ್ತನೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಫೆಬ್ರವರಿ 2 ರಂದು ವಿಧಾನಸೌಧ ಮುಂಭಾಗ ಅದ್ಧೂರಿ ಚಾಲನೆ ದೊರೆಯಲಿದೆ. ಅಂದು ಸಂಜೆ 6 ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿತ್ರೋತ್ಸವ ಉದ್ಘಾಟಿಸಲಿದ್ದು, ಆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬಂಗಾಲಿಯ ಹೆಸರಾಂತ ನಿರ್ದೇಶಕ ಬುದ್ಧದೇವದಾಸ್‌ ಗುಪ್ತ, ಈಜಿಪ್ಟಿಯನ್‌ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್‌, ಕನ್ನಡ ನಟ ಪುನೀತ್‌ರಾಜ್‌ಕುಮಾರ್‌ ಭಾಗವಹಿಸಲಿದ್ದಾರೆ.

Advertisement

ನಟಿ ಸುಹಾಸಿನಿ ಮಣಿರತ್ನಂ ಮತ್ತು ರಮೇಶ್‌ ಅರವಿಂದ್‌ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಫೆ.9 ರ ಸಂಜೆ ಮೈಸೂರು ಅರಮನೆಯ ಮುಂದೆ ನಡೆಯಲಿದೆ. ರಾಜ್ಯಪಾಲ ವಜೂಭಾಯಿ ವಾಲಾ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂದು ಕನ್ನಡ ಚಿತ್ರರಂಗದ ನಟ, ನಟಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಚಿತ್ರೋತ್ಸವ ಕುರಿತು ಶುಕ್ರವಾರ ವಿವರ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್‌, “ಫೆಬ್ರವರಿ 3 ರಿಂದ 9 ರವರೆಗೆ ನಡೆಯಲಿರುವ ಚಿತ್ರೋತ್ಸವ ಬೆಂಗಳೂರಿನ ಒರಾಯನ್‌ ಮಾಲ್‌ನ ಪಿವಿಆರ್‌ ಸಿನಿಮಾಸ್‌ನ 11 ಪರದೆಗಳು ಹಾಗೂ ಮೈಸೂರಿನ ಮಾಲ್‌ ಆಫ್ ಮೈಸೂರು ಐನಾಕ್ಸ್‌ ಸಿನಿಮಾಸ್‌ನ 4 ಪರದೆಗಳಲ್ಲಿ ನಡೆಯಲಿದೆ. 

ಈ ಬಾರಿ 60 ದೇಶಗಳ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ. ಉದ್ಘಾಟನೆ ಚಿತ್ರವಾಗಿ ಅಲ್ಗೇರಿಯಾದ ಮಹ್ಮದ್‌ ಹಮಿದಿ ನಿರ್ದೇಶನದ “ಲಾ ವಚೆ’ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಕನ್ನಡದ 5 ಜನಪ್ರಿಯ ಹಾಗೂ 12 ಕನ್ನಡ ಚಿತ್ರಗಳು: ಜನಪ್ರಿಯ ಕನ್ನಡ ಸಿನಿಮಾಗಳ ವಿಭಾಗದಲ್ಲಿ “ಕೋಟಿಗೊಬ್ಬ’,”ಜಗ್ಗುದಾದ’,”ಮುಂಗಾರು ಮಳೆ-2′,”ದೊಡ್ಮನೆ ಹುಡ್ಗ’ ಹಾಗೂ “ಶಿವಲಿಂಗ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿ  ನಿರ್ದೇಶಕ ಆರ್‌.ಮಹಂತೇಶ್‌ ನಿರ್ದೇಶನದ “6 “3′, ದಯಾಳ್‌ ಪದ್ಮನಾಭನ್‌ ನಿರ್ದೇಶನದ “ಆ್ಯಕ್ಟರ್‌’, ಅಮರದೇವ ನಿರ್ದೇಶಿಸಿರುವ “ಅಲೆಮಾರಿಯ ಆತ್ಮಕಥೆ’,

Advertisement

ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಬೆಕ್ಕು’, ಸಬಾಸ್ಟಿನ್‌ ಡೇವಿಡ್‌ ನಿರ್ದೇಶಿಸಿರುವ “ಧ್ವನಿ’,  ಹೇಮಂತ್‌ರಾವ್‌ ನಿರ್ದೇಶನದ “ಗೋ ಬಣ್ಣ ಸಾಧಾರಣ ಮೈಕಟ್ಟು’, ಅರವಿಂದ್‌ ಶಾಸಿ ನಿರ್ದೇಶನದ “ಕಹಿ’, ಸಾಲೋಮನ್‌ ಕೆ.ಜಾರ್ಜ್‌ ನಿರ್ದೇಶಿಸಿರುವ “ಕಂದ’, ಸುಮನಾ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’, ರಘು ನಿರ್ದೇಶನದ “ಪಲ್ಲಟ’,  ಡಿ. ಸತ್ಯಪ್ರಕಾಶ್‌ ನಿರ್ದೇಶನದ “ರಾಮಾ ರಾಮಾ ರೇ’ ಹಾಗೂ ಬಿ.ಸುರೇಶ ನಿರ್ದೇಶನ “ಉಪ್ಪಿನ ಕಾಗದ’ ಚಿತ್ರಗಳು ಪ್ರದರ್ಶನ ಕಾಣಲಿವೆ.

ಆಸ್ಕರ್‌ಗೆ ಮೆಟ್ಟಿಲೇರಿದ ಸಿನಿಮಾಗಳೂ ಇವೆ
ಚಿತ್ರೋತ್ಸವದಲ್ಲಿ ಈ ಸಲ ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಸುಮಾರು 30 ಸಿನಿಮಾಗಳು ಪ್ರದರ್ಶನ ಕಾಣುತ್ತಿರುವುದು ವಿಶೇಷ. ಇವುಗಳೊಂದಿಗೆ ಇರಾನ್‌, ಯುಕೆ, ಸ್ವೀಡನ್‌, ರಷ್ಯಾ, ಚಿಲೆ, ಜರ್ಮನಿ, ಬ್ರೆಜಿಲ್‌, ಸೌತ್‌ಆಫ್ರಿಕಾ, ರೊಮಾನಿಯ, ಐಸ್‌ಲ್ಯಾಂಡ್‌, ಬಲ್ಗೇರಿಯ, ಇಸ್ರೇಲ್‌, ಇಟಲಿ, ಮೆಕ್ಸಿಕೊ, ಟರ್ಕಿ, ಜಪಾನ್‌, ಚೀನಾ, ನೇಪಾಳ್‌, ಕೊಲಂಬಿಯ ಸೇರಿದಂತೆ ಹಲವು ದೇಶಗಳ ಖ್ಯಾತ ನಿರ್ದೇಶಕರ ಅದ್ಭುತ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next