Advertisement

Crime: ಒಂದೂವರೆ ಸಾವಿರ ರೂ.ಗೆ ವ್ಯಕಿ ಕೊಲೆ!

10:42 AM Dec 07, 2023 | Team Udayavani |

ಬೆಂಗಳೂರು: ಒಂದೂವರೆ ಸಾವಿರ ರೂ. ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳದಲ್ಲಿ ಕೂಲಿ ಕಾರ್ಮಿಕನನ್ನು ಎಲೆಕ್ಟ್ರಿಷಿಯನ್‌ ಕೊಲೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಸಿಂಗಸಂದ್ರ ನಿವಾಸಿ ಗೋಪಾಲ (35) ಕೊಲೆಯಾದ ಕೂಲಿ ಕಾರ್ಮಿಕ. ಕೃತ್ಯ ಎಸಗಿದ ಎಲೆಕ್ಟ್ರಿಷಿಯನ್‌ ಗಿರೀಶ್‌ ತಲೆಮರೆಸಿಕೊಂಡಿದ್ದಾನೆ.

ಕೆಲ ತಿಂಗಳ ಹಿಂದೆ ಗೋಪಾಲ ಸ್ನೇಹಿತ ಕರಿಗೌಡ ಎಂಬಾತನಿಂದ ಗಿರೀಶ್‌ ಒಂದೂವರೆ ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಆದರೆ, ನಿಗದಿತ ಸಮಯಕ್ಕೆ ವಾಪಸ್‌ ನೀಡಿರಲಿಲ್ಲ. ಈ ವಿಚಾರವನ್ನು ಗೋಪಾಲನ ಬಳಿ ಕರಿಗೌಡ ಹೇಳಿಕೊಂಡಿದ್ದ. ಆದರಿಂದ ಗೋಪಾಲ, ಗಿರೀಶ್‌ಗೆ ಕರೆ ಮಾಡಿ, ಕರಿಗೌಡನ ಹಣ ವಾಪಸ್‌ ಕೊಡುವಂತೆ ಎಚ್ಚರಿಕೆ ನೀಡಿದ್ದಾನೆ. ಆಗ ಗಿರೀಶ್‌ ಹಣ ಕೊಡುವುದಾಗಿ ಹೇಳಿದ್ದ ಎಂದು ಪೊಲೀಸರು ಹೇಳಿದರು.

ಈ ಮಧ್ಯೆ ಡಿ.2ರಂದು ಗೋಪಾಲ, ಕರಿಗೌಡ ಹಾಗೂ ಸ್ನೇಹಿತರಾದ ಶಶಿಧರ್‌ ಬಾರ್‌ವೊಂದರಲ್ಲಿ ಮದ್ಯ ಕುಡಿಯಲು ಹೋಗಿದ್ದಾರೆ. ಅದೇ ಬಾರ್‌ಗೆ ಪ್ರದೀಪ್‌, ಗಿರೀಶ್‌ ಕೂಡ ಬಂದಿದ್ದಾರೆ. ಅದನ್ನು ಗಮನಿಸಿದ ಕರಿಗೌಡ, ಗಿರೀಶ್‌ಗೆ ತನ್ನ ಹಣ ಕೊಡುವಂತೆ ಕೇಳಿದ್ದು, ಆಗ ಗಿರೀಶ್‌, “ಬೇರೆಯವರ ಬಳಿ ಫೋನ್‌ ಮಾಡಿ ಬೆದರಿಕೆ ಹಾಕಿರುವೆ, ಹಣ ಕೊಡುವುದಿಲ್ಲ’ ಎಂದಿದ್ದಾನೆ. ಅಲ್ಲೇ ಇದ್ದ ಗೋಪಾಲ್‌, ಗಿರೀಶ್‌ಗೆ ಹೊಡೆದಿದ್ದಾನೆ. ಬಳಿಕ ಇತರೆ ಸ್ನೇಹಿತರು ಸಂಧಾನ ಮಾಡಿದ್ದಾರೆ. ಆಗ ಫೋನ್‌ ಪೇ ಮೂಲಕ ಗಿರೀಶ್‌, ಕರಿಗೌಡನ ಖಾತೆಗೆ ಹಣ ಹಾಕಿದ್ದಾನೆ. ಬಳಿಕ ಎರಡು ಗುಂಪಿನವರು ಬಾರ್‌ನಿಂದ ಮನೆಗೆ ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.

ಮನೆಗೆ ಕರೆಸಿಕೊಂಡು ಚಾಕು ಇರಿದ: ಬಾರ್‌ನಲ್ಲಿ ನಡೆದ ಘಟನೆಯಿಂದ ಆಕ್ರೋಶಗೊಂಡಿದ್ದ ಗಿರೀಶ್‌, ಮನೆಗೆ ಹೋಗಿ, ಸ್ನೇಹಿತ ಶಶಿಧರ್‌ ಮತ್ತು ಗೋಪಾಲಗೆ ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

Advertisement

ಅದರಿಂದ ಕೋಪಗೊಂಡ ಗೋಪಾಲ, ತನ್ನ ಸ್ನೇಹಿತರ ಜತೆ ಗಿರೀಶ್‌ ಮನೆಗೆ ಹೋಗಿ ಜಗಳ ತೆಗೆದು, ಗಿರೀಶ್‌ಗೆ ಸರಿಯಾಗಿ ಮಾತನಾಡುವಂತೆ ಹೇಳಿ, ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಅಡುಗೆ ಮನೆಯಿಂದ ಚಾಕು ತಂದ ಗಿರೀಶ್‌, ಗೋಪಾಲನ ಬೆನ್ನು ಹಾಗೂ ಎದೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ರಸ್ತೆ ಅಪಘಾತ ಎಂದು ಆಸ್ಪತ್ರೆಗೆ ದಾಖಲು

ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿದ್ದರಿಂದ ಗೋಪಾಲನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಘಟನೆ ಬಗ್ಗೆ ಆಸ್ಪತ್ರೆ ವೈದ್ಯರು ಕೇಳಿದಾಗ ರಸ್ತೆ ಅಪಘಾತವಾಗಿ ಯಾವುದೋ ವಸ್ತು ಚುಚ್ಚಿಕೊಂಡಿದೆ ಎಂದು ಸುಳ್ಳು ಹೇಳಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ, ಒಳಭಾಗದಲ್ಲಿ ರಕ್ತಸ್ರಾವ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫ‌ಲಕಾರಿಯಾಗದೆ ಡಿ.5ರಂದು ನಸುಕಿನಲ್ಲಿ ಮೃತಪಟ್ಟಿದ್ದಾನೆ.

ಈ ಸಂಬಂಧ ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ಪೊಲೀಸರಿಗೂ ಗೋಪಾಲ ಸ್ನೇಹಿತರು ರಸ್ತೆ ಅಪಘಾತದ ಕಥೆ ಕಟ್ಟಿದ್ದರು. ಬಳಿಕ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಘಟನೆಯನ್ನು ವಿವರಿಸಿದ್ದಾರೆ.

ಈ ಸಂಬಂಧ ಗೋಪಾಲ ಸ್ನೇಹಿತರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿ ಗಿರೀಶ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next