Advertisement

ಪ್ರೀತಿಸಿ, ಸುತ್ತಾಡಿ, ಹಣ ಪಡೆದು ವಿವಾಹ ನಿರಾಕರಿಸಿದ್ದಕ್ಕೆ ‘Miss Andra’ ಸುಸೈಡ್‌

03:08 PM Jul 28, 2023 | Team Udayavani |

ಬೆಂಗಳೂರು: ಪ್ರೇಮ ವೈಫ‌ಲ್ಯಕ್ಕೆ ಖಾಸಗಿ ಕಂಪನಿಯ ಯುವತಿಯೊಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆಂಪಾಪುರ ನಿವಾಸಿ ವಿದ್ಯಾಶ್ರೀ (25) ಮೃತರು.

ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆಂಗೇರಿ ನಿವಾಸಿ, ಜೀಮ್‌ ತರಬೇತುದಾರ ಅಕ್ಷಯ್‌ (26) ಎಂಬಾತನನ್ನು ಬಂಧಿಸಲಾಗಿದೆ. ಜುಲೈ 21ರಂದು ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದರು.

ಎಂಸಿಎ ಪದವೀಧರೆಯಾಗಿರುವ ವಿದ್ಯಾಶ್ರೀ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ಮಾಡೆಲ್‌ ಕೂಡ ಆಗಿದ್ದರು. ಮಿಸ್‌ ಆಂಧ್ರ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು.

ಈ ನಡುವೆ ಫೇಸ್‌ಬುಕ್‌ ಮೂಲಕ ಜೀಮ್‌ ತರಬೇತುದಾರ, ಕೆಂಗೇರಿಯ ಅಕ್ಷಯ್‌ ಪರಿಚಯವಾಗಿದೆ. ಆ ಬಳಿಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ನಿತ್ಯ ವಾಟ್ಸ್‌ಆ್ಯಪ್‌ ಚಾಟಿಂಗ್‌ ನಡೆಸುತ್ತಿದ್ದರು. ಈ ವೇಳೆ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಆಕೆ ಜತೆ ಸುತ್ತಾಡಿದ್ದಾನೆ.

Advertisement

ಈ ಮಧ್ಯೆ ಆಕೆಯಿಂದ ವಿವಿಧ ಕಾರಣ ನೀಡಿ 1.76 ಲಕ್ಷ ರೂ. ಪಡೆದುಕೊಂಡಿದ್ದಾನೆ. ತದನಂತರ ದಲ್ಲಿ ವಿದ್ಯಾಶ್ರೀಯನ್ನು ನಿರ್ಲಕ್ಷಿಸಿದ್ದಾನೆ. ಅಲ್ಲದೆ, ಆಕೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾನೆ. ಬಳಿಕ ನೇರವಾಗಿ ಆತನನ್ನು ಭೇಟಿಯಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದರಿಂದ ಬೇಸತ್ತ ವಿದ್ಯಾಶ್ರೀ ಜುಲೈ 21ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಡೈರಿಯಲ್ಲಿ ಪ್ರಿಯಕರ ಅಕ್ಷಯ್‌ನ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಆಕೆಯ ಮೊಬೈಲ್‌ ಪರಿಶೀಲಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದ್ದು, ಬುಧವಾರ ಅಕ್ಷಯ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಯುವತಿಯರೇ, ಯಾರೂ ಪ್ರೀತಿಸಬೇಡಿ’

“ನನ್ನ ಸಾವಿಗೆ ಅಕ್ಷಯ್‌ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್‌ ಮಾಡುತ್ತಿದ್ದಾನೆ. ನನಗೆ ಕೊಡಬೇಕಾದ 1.76 ಲಕ್ಷ ರೂ. ಗಳನ್ನು ವಾಪಸ್‌ ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿ, ಫೋನ್‌ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾನೆ. ಖನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೆ ನನಗೆ ತುಂಬಾ ಸ್ಟ್ರೆಸ್‌ ಆಗುತ್ತಿದೆ. ಅಮ್ಮ, ಗುರು, ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ’. “ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ. ಯಾರೂ ಪ್ರೀತಿ ಮಾಡಬೇಡಿ ಗುಡ್‌ ಬೈ ಟು ದಿಸ್‌ ವರ್ಲ್ಡ್‌ʼ ಎಂದು ವಿದ್ಯಾಶ್ರೀ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next