ಬೆಂಗಳೂರು: ಮನೆ ಮುಂದೆ ಚಿಕನ್ ಅಂಗಡಿ ತೆರೆಯಬೇಡ ಎಂದ ಐಟಿಐ ನಿವೃತ್ತ ಎಂಜಿನಿಯರ್ ರನ್ನು ಕೋಳಿ ವ್ಯಾಪಾರಿ ಮತ್ತು ಆತನ ಪುತ್ರ ಹತ್ಯೆಗೈದಿರುವ ಘಟನೆ ಜೆ.ಪಿ.ನಗರ 30ನೇ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಜೆ.ಪಿ.ನಗರ ನಿವಾಸಿ ಕೆ.ವೆಂಕಟೇಶಪ್ಪ(75) ಕೊಲೆ ಯಾದವರು. ಕೃತ್ಯ ಎಸಗಿದ ಬಳಿಕ ಬಸವೇಶ್ವರನಗರ ನಿವಾಸಿ ನಾಗರಾಜು (51) ಮತ್ತು ಆತನ ಪುತ್ರ ಅಭಿಷೇಕ್(26) ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ವೆಂಕಟೇಶಪ್ಪ ಐಟಿಐ ನಿವೃತ್ತ ಎಂಜಿನಿಯರ್ ಆಗಿದ್ದು, ಜೆ.ಪಿ.ನಗರದಲ್ಲಿ ಪತ್ನಿ ಮಂಜುಳಾ ಜತೆ ವಾಸವಾಗಿದ್ದಾರೆ. ಬಸವೇಶ್ವರನಗರದಲ್ಲಿ ಮತ್ತೂಂದು ಮನೆಯಿದ್ದು, ಬಾಡಿಗೆ ನೀಡಿದ್ದಾರೆ. ಈ ಮನೆ ಮುಂಭಾಗ ಹೊಸದಾಗಿ ಆರೋಪಿಗಳು ಕೋಳಿ ಅಂಗಡಿ ತೆರೆದಿದ್ದರು. ಆದರೆ, ಬಾಡಿಗೆದಾರರು ಹಾಗೂ ಸ್ಥಳೀಯರು ಈ ಅಂಗಡಿಯಿಂದ ದುರ್ವಾಸನೆ ಬರುತ್ತದೆ ಖಾಲಿ ಮಾಡಿಸುವಂತೆ ವೆಂಕಟೇಶಪ್ಪನಿಗೆ ಹೇಳಿದ್ದರು. ಒಂದು ವೇಳೆ ಖಾಲಿ ಮಾಡಿಸದಿದ್ದರೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದರು. ಹೀಗಾಗಿ ವೆಂಕಟೇಶಪ್ಪ ಆರೋಪಿಗಳಿಗೆ ಅಂಗಡಿ ಖಾಲಿ ಮಾಡುವಂತೆ ತಾಕೀತು ಮಾಡಿದ್ದರು. ಆದರೆ, ಆರೋಪಿಗಳು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದೇವೆ. ಖಾಲಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ವೆಂಕಟೇಶಪ್ಪ ಖಾಲಿ ಮಾಡಿದಿದ್ದರೆ ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಕೋಳಿ ಅಂಗಡಿ ಬಳಿ ಬಂದು ಎಚ್ಚರಿಕೆ ನೀಡಿದ್ದರು.
ಡ್ರ್ಯಾಗರ್‌ನಿಂದ ಇರಿದು ಕೊಲೆ: ಅದರಿಂದ ಕೋಪಗೊಂಡು ಆರೋಪಿಗಳು ಸೋಮವಾರ ಮಧ್ಯಾಹ್ನ ಜೆ.ಪಿ.ನಗರದಲ್ಲಿರುವ ವೆಂಕಟೇಶಪ್ಪನ ಮನೆಗೆ ಬಂದಿದ್ದು, ಪರಿಚಯಸ್ಥರಾಗಿದ್ದರಿಂದ ಬಾಗಿಲು ತೆರೆದು ವೆಂಕಟೇಶಪ್ಪ ಒಳಗೆ ಬರುವಂತೆ ಹೇಳಿದ್ದಾರೆ. ಆಗ ಮಂಜುಳಾ ಅವರು ಕಾಫಿ ತರಲು ಅಡುಗೆ ಮನೆಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು, ಕೋಳಿ ಅಂಗಡಿ ವಿಚಾರವಾಗಿ ವೆಂಕಟೇಶಪ್ಪ ಜತೆ ಜಗಳ ತೆಗೆದು ಏಕಾಏಕಿ ಡ್ರ್ಯಾಗರ್ ನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಮಂಜುಳಾ ಅವರ ಕೂಗಾಟದ ಸದ್ದು ಕೇಳಿ ಸ್ಥಳೀಯರು ಬಂದು ಗಾಯಾಳುನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ವೆಂಕಟೇಶಪ್ಪ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಆರೋಪಿಗಳೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂಬುದು ಪೊಲೀಸರು ಮಾಹಿತಿ ನೀಡಿದರು.