Advertisement

ಅಕ್ರಮ ಸಂಬಂಧ, ಹಣಕಾಸು ವಿಚಾರವೇ ಕೊಲೆಗೆ ಕಾರಣ; ಸಾಲ ವಾಪಸ್‌ಗೆ ಸರೋಜಾಳನ್ನು ಪೀಡಿಸುತ್ತಿದ್ದ ಯುವಕ

05:49 PM Dec 08, 2022 | Team Udayavani |

ಬೆಂಗಳೂರು: ಇತ್ತೀಚೆಗೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾದಾಮಿ ತಾಲೂಕಿನ ಮಂಜುನಾಥ್‌ ಬಾಳಪ್ಪ ಜಮಖಂಡಿ ಎಂಬಾತನ ಭೀಕರ ಹತ್ಯೆಗೆ ಅಕ್ರಮ ಸಂಬಂಧ ಮಾತ್ರವಲ್ಲ, ಹಳೇ ದ್ವೇಷ, ಜಮೀನು ಹಾಗೂ ಹಣಕಾಸಿನ ವಿಚಾರ ಕೂಡ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ವಿಜಯಪುರ ಜಿಲ್ಲೆಯ ಪ್ರೇಮವ್ವ, ಆಕೆಯ ಅಕ್ಕ ಮಹಾದೇವಿ, ಈಕೆಯ ಪತಿ ಮಂಜುನಾಥ್‌, ಸಂಬಂಧಿ ಕಿರಣ್‌, ಕಾಶಿನಾಥ್‌, ಚಿನ್ನಪ್ಪ ಎಂಬುವರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಸರೋಜಾ ಎಂಬಾಕೆಗಾಗಿ ಶೋಧ ನಡೆಸಲಾಗುತ್ತಿದೆ. ಡಿ.4ರಂದು ನಸುಕಿನ 1 ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮಂಜುನಾಥ್‌ ಬಾಳಪ್ಪ ಜಮಖಂಡಿ(22) ಎಂಬಾತನ ಮೇಲೆ ಕೊಲೆಗೈದು ಪರಾರಿಯಾಗಿದ್ದರು.

ಬಾಗಲಕೋಟೆಯಲ್ಲೇ ಪರಿಚಯ: ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ಮಂಜುನಾಥ್‌ ಬಾಳಪ್ಪ ಜಮಖಂಡಿ ಖಾನಾವಳಿ ನಡೆಸುತ್ತಿದ್ದು, ಸರೋಜಾ ಪತಿ ದುಬೈನಲ್ಲಿದ್ದರು. ಹೀಗಾಗಿ ಈಕೆ ಇಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿದ್ದು, ಲಿವಿಂಗ್‌ ಟುಗೇದರ್‌ನಲ್ಲಿ ವಾಸವಾಗಿದ್ದರು. ಈ ವಿಚಾರ ಆಕೆಯ ತಾಯಿ ಪ್ರೇಮವ್ವ, ಸಹೋದರಿ ಅಕ್ಕಮಹಾದೇವಿ ಹಾಗೂ ಕುಟುಂಬಕ್ಕೂ ಗೊತ್ತಿತ್ತು. ಮತ್ತೂಂದೆಡೆ ದುಬೈನಲ್ಲಿರುವ ಪತಿಗೆ ಗೊತ್ತಾಗಿ, ಆತ ಪ್ರೇಮವ್ವ ಜತೆ ಫೋನ್‌ನಲ್ಲಿ ಜಗಳ ಮಾಡಿದ್ದ. ಹೀಗಾಗಿ ಇಡೀ ಕುಟುಂಬ ಆಕ್ರೋಶಗೊಂಡಿತ್ತು.

ಆದರೆ, ಮಂಜುನಾಥ್‌, ಖಾನಾವಳಿ ಮಾರಾಟ ಮಾಡಿ, ಬಂದ ಹಣದಲ್ಲಿ ಒಂದಿಷ್ಟನ್ನು ಪ್ರೇಯಸಿ ಸರೋಜಾಗೂ ಕೊಟ್ಟಿದ್ದ. ಒಂದೂವರೆ ವರ್ಷದ ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಆಗಿನಿಂದಲೂ ಮಂಜುನಾಥ್‌ ಬಾಳಪ್ಪ ಹಣ ವಾಪಸ್‌ ಕೊಡುವಂತೆ ಪೀಡಿಸುತ್ತಿದ್ದ. ಈ ಸಂಬಂಧ ಸರೋಜಾ ಮತ್ತು ಆಕೆಯ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಮಂಜುನಾಥ್‌ ವಿರುದ್ಧ ದೂರು ನೀಡಿದ್ದರು. ಬಳಿಕ ಆಕೆ ದಾವಣಗೆರೆಗೆ ಸ್ಥಳಾಂತರಗೊಂಡು ಅಲ್ಲಿಯೂ ಬಟ್ಟೆ ವ್ಯಾಪಾರ ಮಾಡುವಾಗ ಅಲ್ಲಿಗೂ ಬಂದ ಮಂಜುನಾಥ್‌, ಹಣಕ್ಕಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಮಂಜುನಾಥ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿತ್ತು.

Advertisement

ಒಂದು ವಾರದ ಹಿಂದೆ ಬಂದಿದ್ದ ಸರೋಜಾ: ಕೃತ್ಯಕ್ಕೂ ಒಂದು ವಾರದ ಹಿಂದಷ್ಟೇ ಸರೋಜಾ ಬೆಂಗಳೂರಿಗೆ ಬಂದಿದ್ದು, ಸಹೋದರಿ ಅಕ್ಕಮಹಾದೇವಿ ಮನೆಯಲ್ಲಿ ವಾಸವಾಗಿದ್ದಳು. ಒಂದೆರಡು ದಿನಗಳಲ್ಲಿ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಂಡು, ಕೆಲಸ ಹುಡುಕುತ್ತಿದ್ದಳು.

ಆಕೆಯ ಬೆನ್ನತ್ತಿ ಬಂದಿದ್ದ ಮಂಜುನಾಥ್‌ ಆಕೆಗೆ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದ. ಅದರಿಂದ ಆಕ್ರೋಶಗೊಂಡಿದ್ದ ಇಡೀ ಕುಟುಂಬ ಕೊಲೆಗೆ ಸಂಚು ರೂಪಿಸಿತ್ತು. ನಂತರ ಆತನನ್ನು ಮಾತುಕತೆಗೆಂದು ಕರೆದು, ನಡು ರಸ್ತೆಯಲ್ಲಿ ವಾಗ್ವಾದ ನಡೆಸಿದ್ದರು. ಆದರೆ, ಇದ್ಯಾವುದಕ್ಕೂ ಒಪ್ಪದ ಮಂಜುನಾಥ್‌ ತನಗೆ ಹಣಬೇಕೆಂದು ಆಗ್ರಹಿಸಿದ್ದ. ಅದರಿಂದ ಆಕ್ರೋಶಗೊಂಡ ಆರೋಪಿಗಳು ನೆಲಕ್ಕೆ ಕೆಡವಿ ಹಲ್ಲೆ ನಡೆಸಿದ್ದಾರೆ. ಆಗ ಪ್ರೇಮವ್ವ ಈ ಹಿಂದಿನಿಂದಲೂ ತಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದವನನ್ನು ಕೊಲೆಗೈಯಬೇಕೆಂದು ಕಲ್ಲು ಎತ್ತಿ ಹಾಕಿದ್ದಾಳೆ. ನಂತರ ಆಕೆಯ ಪುತ್ರಿ, ಅಕ್ಕಮಹಾದೇವಿ, ಸರೋಜಾ ಹಾಗೂ ಇತರೆ ಆರೋಪಿಗಳು 20 ಬಾರಿಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಯಿಗೆ ಮಾಹಿತಿ ನೀಡಿದ್ದ ಮಂಜುನಾಥ್‌

ತಾನೂ ಸರೋಜಾಳಿಂದ ಹಣ ಪಡೆಯಲು ಬೆಂಗಳೂರಿಗೆ ಹೋಗುತ್ತಿದ್ದಾಗಿ ತಾಯಿಗೆ ತಿಳಿಸಿದ್ದ. ಅಲ್ಲದೆ, ಬೆಂಗಳೂರಿಗೆ ಬಂದಾಗ ಕರೆ ಮಾಡಿ, ತನಗೆ ಏನಾದರೂ ತೊಂದರೆ ಉಂಟಾದರೆ, ಮಾಗಡಿ ರಸ್ತೆಯಲ್ಲಿರುವ ಸರೋಜಾಳ ವಿಳಾಸ ತಿಳಿಸಿದ್ದ. ಈತ ಮಂಜುನಾಥ್‌ ಬಾಳಪ್ಪನ ಗುರುತು ಪತ್ತೆ ಹಚ್ಚಿದ ಪೊಲೀಸರಿಗೆ ಆತ ತಾಯಿಗೆ ಕರೆ ಮಾಡಿರುವ ವಿಚಾರ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದೊಂದು ಪೂರ್ವನಿಯೋಜಿತ ಕೊಲೆ. ಪ್ರಾಥಮಿಕ ವಿಚಾರಣೆಯಲ್ಲಿ ಹಣಕಾಸು ಹಾಗೂ ಇತರೆ ವಿಚಾರಗಳಿಗೆ ಕೃತ್ಯ ನಡಿದಿದೆ ಎಂಬುದು ಗೊತ್ತಾಗಿದೆ. ಸರೋಜಾ ಬಂಧಿಸಿದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ.  –ಲಕ್ಷ್ಮಣ್‌ ನಿಂಬರಗಿ, ಪಶ್ಚಿಮ ವಿಭಾಗ ಡಿಸಿಪಿ

 

Advertisement

Udayavani is now on Telegram. Click here to join our channel and stay updated with the latest news.

Next