ಮಾಗಡಿ: ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿ ರುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ, ಕೇಂದ್ರ ಸರ್ಕಾರಕ್ಕೆ ಏಕಮುಖವಾಗಿ ಶಿಪಾರಸು ಮಾಡಲು ಹೊರಟಿ ರುವುದನ್ನು ವಿರೋಧಿಸಿ, ತಾಲೂಕಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಬೋವಿ ಸಮುದಾಯದ ಜನರು ಬೆಂಗಳೂರು ಚಲೋ, ಬೃಹತ್ ಪ್ರತಿಭಟನೆ ತೆರಳಿದ್ದಾಗಿ ಬೋವಿ ಸಮುದಾಯದ ತಾಲೂಕು ಅಧ್ಯಕ್ಷ ಬಿಟಿ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ 13ಕ್ಕೂ ಹೆಚ್ಚು ಬಸ್‌ಗಳಲ್ಲಿ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಗೆ ತೆರಳಲು ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬೋವಿ, ಲಂಬಾಣಿ, ಛಲವಾದಿ, ಅಲೆಮಾರಿ ಜಾತಿ ಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡ್ಗ ಜಂಗಮ, ಸಿಳ್ಳೆಕ್ಯಾತಾಸ್, ದೊಂಬರು ಸೇರಿ ದಂತೆ ಪರಿಶಿಷ್ಟ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನ್ಯಾ. ಎಜೆ.ಸದಾಶಿವ ಆಯೋಗದ ವರದಿ ಯನ್ನು ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಲು ಮುಂದಾಗಿರುವುದನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ಅಗತ್ಯ ಕಾರ್ಯಕ್ರಮ ರೂಪಿಸಬೇಕು: ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಸರ್ಕಾರ ಮತ್ತಷ್ಟು ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹೋರಾಟ ಮತ್ತಷ್ಟು ಉಗ್ರ: ರೋಟರಿ ಸಂಸ್ಥೆ ಅಧ್ಯಕ್ಷ ಶಂಕರ್ ಮಾತನಾಡಿ, ನ್ಯಾ. ಸದಾಶಿವ ಆಯೋಗ ಅವಸರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಇದರಿಂದ ಸರ್ಕಾರಿ ಉದ್ದೇಶ ಮತ್ತು ಸಮುದಾಯಗಳ ನಿರೀಕ್ಷೆಯಂತೆ ಆಯೋಗ ಕಾರ್ಯನಿರ್ವಹಿಸಿಲ್ಲ. ಸೋರಿಕೆಯಾಗಿರುವ ಸದಾಶಿವ ಆಯೋಗದ ವರದಿಯಲ್ಲಿನ ಕೆಲ ಅಂಶಗಳು ಮೀಸಲಾತಿಯ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಇದಕ್ಕಾಗಿ ನಮ್ಮ ಹೋರಾಟ ನಡೆದಿದ್ದು, ಸರ್ಕಾರ ಕೂಡಲೇ ಸರಿಪಡಿಸದಿದ್ದರೆ ನಮ್ಮ ಹೋರಾಟ ಮತ್ತಷ್ಟು ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಎನ್‌ಇಎಸ್ ವೆಂಕಟೇಶ್ ಮೂರ್ತಿ ಮಾತನಾಡಿದರು. ಸಮುದಾಯದ ಉಪಾಧ್ಯಕ್ಷ ನಾಗರಾಜು, ತಿರುಮಲೆ ಪಾಂಡು, ಕೃಷ್ಣಮೂರ್ತಿ, ವೆಂಕಟೇಶ್, ನವೀನ, ಚಿಕ್ಕಣ್ಣ, ಕೃಷ್ಣಕುಮಾರ್, ರಾಜಣ್ಣ, ಗಿರೀಶ್, ಮಾನಗಲ್ಲು ರಮೇಶ್, ಶಶಿ, ಶಿವರಾಮಯ್ಯ, ವೆಂಕಟೇಶ್,ಜಯಣ್ಣ, ರಮೇಶ್, ರಾಮಕೃಷ್ಣ ಹಾಗೂ ಇತರರು ಇದ್ದರು .