ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ 6ನೇ ಮಹಡಿಯಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆಂಧ್ರಪ್ರದೇಶದ ಕರ್ನೂಲು ಮೂಲದ ಕರಸಾಲ ರಾಹುಲ್ (21) ಮೃತ ಎಂಜಿನಿಯರಿಂಗ್ ವಿದ್ಯಾರ್ಥಿ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ರಾಹುಲ್ ಬಿಇ ಕಂಪ್ಯೂಟರ್ ಸೈನ್ಸ್ 5ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಲಿಕೆಯಲ್ಲಿ ಮುಂದಿದ್ದ ರಾಹುಲ್ ಮಂಗಳವಾರ ಬೆಳಗ್ಗೆ ಪರೀಕ್ಷೆ ಇದ್ದುದರಿಂದ ಎಂದಿನಂತೆ ಕಾಲೇಜಿಗೆ ಬಂದಿದ್ದ. ಮಂಗಳವಾರ ಬೆಳಗ್ಗೆ ಸುಮಾರು 10.13 ನಿಮಿಷಕ್ಕೆ ಕಾಲೇಜಿನ 6ನೇ ಮಹಡಿಯಿಂದ ಏಕಾಏಕಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪಾಲಕರು ದೂರು ನೀಡಿದ್ದಾರೆ. ಹೀಗಾಗಿ ತನಿಖೆ ನಡೆಸಿದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ವರ್ಷಗಳಿಂದ ಇವರ ಕುಟುಂಬ ಬಳ್ಳಾರಿಯಲ್ಲಿ ನೆಲೆಸಿತ್ತು. ಈತನ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ತನ್ನ ತಾಯಿಯೊಂದಿಗೆ ಕೂಡ್ಲುವಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮಂಗಳವಾರ ಪರೀಕ್ಷೆ 8.30ಕ್ಕೆ ಆರಂಭವಾಗಲಿದ್ದ ಕಾರಣ 7.30ರ ಸುಮಾರಿಗೆ ಮನೆಯಿಂದ ಹೊರಟಿದ್ದ. ಆದರೆ, ಪರೀಕ್ಷೆಗೆ ತಡವಾಗಿ ಬಂದ ಕಾರಣ ಪ್ರವೇಶ ನಿರಾಕರಿಸಿರುವ ಆರೋಪವೂ ಕೇಳಿ ಬಂದಿದೆ. ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕಾಗಿ ನಿಂದಿಸಿದ್ದರಿಂದ ನೊಂದಿದ್ದ ಎನ್ನಲಾಗುತ್ತಿದೆ. ಆದರೆ, ಪೊಲೀಸರು ಈ ಬಗ್ಗೆ ದೃಢಪಡಿಸಿಲ್ಲ.