Advertisement

Agricultural fair:1.31 ಲಕ್ಷ ಜನ ಭೇಟಿ, 80 ಲಕ್ಷ ರೂ.ವಹಿವಾಟು

11:08 AM Nov 18, 2023 | Team Udayavani |

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಇದೇ ವೇಳೆ ಹೊಸ ತಳಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕೃಷಿ ಮೇಳದ ಮೊದಲ ದಿನವಾದ ಶುಕ್ರವಾರ ಸುಮಾರು 1.31 ಲಕ್ಷ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅವರಲ್ಲಿ ಸುಮಾರು 8,000 ಮಂದಿ ರೈತರು ಕೃಷಿ ವಿವಿ ರಿಯಾಯಿತಿ ದರದ ಆಹಾರವನ್ನು ಭೋಜನಾಲಯದಲ್ಲಿ ಸ್ವೀಕರಿಸಿದರು.

Advertisement

ಮೇಳದಲ್ಲಿ 80 ಲಕ್ಷ ರೂ. ವಹಿವಾಟಾಗಿದೆ. ಶನಿವಾರ ಹಾಗೂ ಭಾನುವಾರ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕೃಷಿ ಮೇಳಕ್ಕೆ ಆಗಮಿಸುವವರ ಸಂಖ್ಯೆ ಹಾಗೂ ವಹಿವಾಟು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ನೆಟ್‌ವರ್ಕ್‌ ಜಾಮ್‌: ಕೃಷಿ ಮೇಳದಲ್ಲಿ 650ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಆದರೆ ಯಾವ ಮಳಿಗೆಯಲ್ಲಿಯೂ ಡಿಜಿಟಲ್‌ ಪಾವತಿಗೆ ಅವಕಾಶವಿರಲಿಲ್ಲ. ಏಕೆಂದರೆ ಮೇಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇರಲಿಲ್ಲ. ಇದರಿಂದಾಗಿ ಕೆಲವರು ನಗದು ಪಾವತಿ ಮಾಡಿ ವಸ್ತುಗಳನ್ನು ಖರೀದಿಸಿದ್ದರೆ, ಇನ್ನೂ ಕೆಲವರು ಡಿಜಿಟಲ್‌ ಪಾವತಿಗೆ ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು.

ಸಿರಿಧಾನ್ಯ ಐಸ್‌ಕ್ರೀಂ: ಕೇಂದ್ರ ಸರ್ಕಾರ ಸಿರಿಧಾನ್ಯ ವರ್ಷಾಚರಣೆಯ ಘೋಷಣೆಯ ಹಿನ್ನೆಲೆಯಲ್ಲಿ ಮೇಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಿರಿಧಾನ್ಯ ಉತ್ಪನ್ನಗಳು ಕಂಡು ಬಂತು. ಜಿಕೆವಿಕೆ ವಿಶೇಷವಾಗಿ ಸಿರಿಧಾನ್ಯ ಕೃಷಿ ಚಾವಡಿಯನ್ನು ನಿರ್ಮಿಸಿದ್ದು, ಸಾರ್ವಜನಿಕರ ಗಮನ ಸಳೆಯಿತು. ಜತೆಗೆ ಸಿರಿಧಾನ್ಯದ ಆಹಾರೋತ್ಪನ್ನಗಳು, ಐಸ್ಕ್ರೀಂ ಸ್ಯಾಂಪಲ್‌ಗ‌ಳನ್ನು ಉಚಿತವಾಗಿ ಸವಿದ ಸಾರ್ವಜನಿಕರು ತದನಂತರ ಅಗತ್ಯವಿದ್ದಷ್ಟು ಪ್ರಮಾಣದ ಸಿರಿಧಾನ್ಯ ಆಹಾರೋತ್ಪನ್ನ ಖರೀದಿಸುವ ದೃಶ್ಯಗಳು ಕಂಡು ಬಂತು.

ಸುಸ್ತಾದ ಜನರು: ಕೃಷಿ ಮೇಳ ವೀಕ್ಷಣೆಗೆ ಅತ್ಯಂತ ಉತ್ಸಾಹದಿಂದ ಬಂದ ಸಾರ್ವಜನಿಕರು ಮಳಿಗೆ ಸುತ್ತು ಹಾಕಿ ಹಿಂದಿರುವಾಗ ಸುಸ್ತಾದಂತೆ ಕಂಡ ಬಂದರು. ಜಿಕೆವಿಕೆ ಮೇಳದಿಂದ ಕಾಲೇಜಿನ ಮುಂಭಾಗದ ಗೇಟಿನವರೆಗೆ ಹೋಗಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಕಿ.ಮೀ. ದೂರ ನಡೆದುಕೊಂಡು ಬಂದು ಬಸ್‌ ನಿಲ್ದಾಣ ತಲುಪಿದರು.

Advertisement

ಇನ್ನೂ ಕೆಲ ಆನ್‌ಲೈನ್‌ ಕ್ಯಾಬ್‌ ಹಾಗೂ ಆಟೋ ಸೇವೆಗಳು ಹೆಬ್ಟಾಳ ಜಿಕೆವಿಕೆ ಎಂದಾಕ್ಷಣವೇ ಟ್ರೀಪ್‌ ರದ್ದುಗೊಳಿಸಿರುವುದು ವರದಿಯಾಗಿದೆ. ಕೃಷಿ ಮೇಳದ ಜಿಕೆವಿಕೆ ಹಾಗೂ ಮಾರಾಟ ಮಳಿಗೆಗಳು ವಿವಿಧ ಬಗೆಯ ಹೂವಿನ, ಸಿರಿಧಾನ್ಯದ ಸಂದೇಶ ಸಾರುವ ಸೆಲ್ಫಿ ಪಾಯಿಂಟ್‌ಗಳನ್ನು ಅಲ್ಲಲ್ಲಿ ನಿರ್ಮಿಸಲಾಗಿತ್ತು. ಮೇಳಕ್ಕೆ ಭೇಟಿ ನೀಡಿದ ಸಾರ್ವಜನಿಕರು ಸೆಲ್ಫಿ ಪಾಯಿಂಟ್‌ನತ್ತ ಮುಗಿ ಬಿದ್ದು, ಫೋಟೋ ತೆಗೆಸಿಕೊಳ್ಳುವ ದೃಶ್ಯಗಳು ಕಂಡು ಬಂತು.

ಉದ್ದನೆ ಕಿವಿವುಳ್ಳ ಒಂದು ಮೇಕೆ ಬೆಲೆ 2 ಲಕ್ಷ ರೂ.!: ಒಂದು ಮೇಕೆ ಬೆಲೆ ಎಷ್ಟಿರಬಹುದು? 10 ಸಾವಿರ ರೂ. ಅಬ್ಬಬ್ಟಾ ಎಂದರೆ 50 ಸಾವಿರ ರೂ. ಆದರೆ, ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿರುವ ಉದ್ದನೆಯ ಕಿವಿವುಳ್ಳ ಒಂದು ಮೇಕೆ ಬೆಲೆ ಎರಡು ಲಕ್ಷ ರೂ.!

ಬೆಂಗಳೂರು ಉದ್ದ ಕಿವಿ ಮೇಕೆ ತಳಿಗಾರರ ಸಂಘದಿಂದ ಕೃಷಿ ಮೇಳದಲ್ಲಿ ಅಪರೂಪದ ಈ ತಳಿಯ ಮೇಕೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಒಂದೊಂದು ಮೇಕೆಯ ಕಿವಿಗಳ ಉದ್ದ 22 ಇಂಚು ಇದ್ದು, ಅಗಲ 9ರಿಂದ 10 ಇಂಚು ಇವೆ. 15 ತಿಂಗಳಲ್ಲಿ ಎರಡು ಬಾರಿ ಮರಿ ಹಾಕುವ ಈ ಮೇಕೆಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ತಮ್ಮ ಕಿವಿಗಳಿಂದಲೇ ಈ ಮೇಕೆಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸಾಮಾನ್ಯವಾಗಿ ಈ ತಳಿಯ ಮೇಕೆ ಕಿವಿಗಳು 10 ಇಂಚು ಉದ್ದ ಇರುತ್ತವೆ. ಆದರೆ, ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ ಈ ಮೇಕೆಗಳ ಕಿವಿಗಳ ಉದ್ದ ದುಪ್ಪಟ್ಟಿದೆ.

ನಗರದಲ್ಲಿ ಒಟ್ಟಾರೆ ಅಂದಾಜು 800 ಉದ್ದ ಕಿವಿ ಮೇಕೆಗಳು ಇವೆ. ಹೆಣ್ಣು ಮತ್ತು ಗಂಡು ಮೇಕೆಗಳ ಬೆಲೆ ಕ್ರಮವಾಗಿ ಒಂದೂವರೆ ಯಿಂದ ಎರಡು ಲಕ್ಷ ರೂ. ಆಗಿದೆ. ಮೇಳ ದಲ್ಲಿ ಮೊದಲ ದಿನವೇ ಹಲವರು ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಎಷ್ಟು ಜನ ಖರೀದಿ ಸಲು ಬುಕಿಂಗ್‌ ಮಾಡಿದ್ದಾರೆ ಎಂಬುದು ಈಗಲೇ ನಿಖರವಾಗಿ ಹೇಳುವುದು ಕಷ್ಟ ಎಂದು ಸಂಘದ ಸಲಹೆಗಾರ ಶಾಮೀರ್‌ ಖುರೇಷಿ ತಿಳಿಸಿದರು.

ಹಳ್ಳೀಕಾರ್‌ ಎತ್ತುಗಳ ಜತೆ ಸೆಲ್ಫೀ: ಈಚೆಗೆ ಸಾಕಷ್ಟು ಸುದ್ದಿಯಲ್ಲಿರುವ ವರ್ತೂರು ಸಂತೋಷ್‌ ಬಿಗ್‌ಬಾಸ್‌ ಮನೆ ಸೇರಿರುವುದರಿಂದ ಮೇಳದಲ್ಲಿ ಕಾಣಿಸಲಿಲ್ಲ. ಆದರೆ, ಅವರ ಹಳ್ಳೀಕಾರ್‌ ಜೋಡೆತ್ತುಗಳು ಮಾತ್ರ ಗಮನ ಸೆಳೆದವು. ಮೇಳಕ್ಕೆ ಭೇಟಿ ನೀಡಿದವರು ಜಾನುವಾರುಗಳಿರುವ ಮಳಿಗೆಯಲ್ಲಿ ಹಾದುಬರುವಾಗ ವರ್ತೂರು ಸಂತೋಷ್‌ ಅವರ ಹಳ್ಳೀಕಾರ್‌ ಎತ್ತುಗಳನ್ನು ನೋಡಿ, ಅವುಗಳೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂತು. ಈ ವೇಳೆ ಎತ್ತುಗಳನ್ನು ತಂದಿದ್ದ ಸಂತೋಷ್‌ ಅಭಿಮಾನಿ, “ಸಂತೋಷಣ್ಣ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಮೊದಲೇ ನನಗೆ ಸೂಚಿಸಿದ್ದರಿಂದ ಮೇಳಕ್ಕೆ ಎತ್ತುಗಳನ್ನು ಕರೆತಂದಿದ್ದೇನೆ. ಅಪರೂಪದ ತಳಿ ಆಗಿದ್ದರಿಂದ ಸಹಜವಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುತ್ತವೆ’ ಎಂದರು.

ಸಿರಿಧಾನ್ಯಗಳ ಕೇಕ್‌ ತಯಾರಿಸಿ, ಸವಿದ ಜನ: ಸಿರಿಧಾನ್ಯ ವರ್ಷವಾಗಿರುವುದರಿಂದ ಮೇಳದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಸಜ್ಜೆ, ರಾಗಿ, ನವಣೆ ಮತ್ತಿತರ ಧಾನ್ಯಗಳಿಂದ ಕೇಕ್‌, ಬಿಸ್ಕತ್ತು ಮತ್ತಿತರ ಬೇಕರಿ ಉತ್ಪನ್ನಗಳನ್ನು ತಯಾರಿಸುವುದರ ಜತೆಗೆ ಅವುಗಳನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಮೇಳದಲ್ಲಿ ಜಿಕೆವಿಕೆಯ ಬೇಕರಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಯುವಕ-ಯುವತಿಯರು, ಮಹಿಳೆಯರು, ತಮ್ಮ ಕೈಯಿಂದಲೇ ಸಿರಿಧಾನ್ಯಗಳ ಕೇಕ್‌ ತಯಾರಿಸಿ, ಅದರ ರುಚಿ ಸವಿದರು. ಈ ಸಂದರ್ಭದಲ್ಲಿ ತಾವು ತಯಾರಿಸುತ್ತಿರುವ ವಿಡಿಯೋ ಚಿತ್ರೀಕರಣ, ಸಿದ್ಧಪಡಿಸಿದ ಬಣ್ಣ-ಬಣ್ಣದ ಕೇಕ್‌ ನೊಂದಿಗೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.

ಖಡಕ್‌ನಾಥ್‌ ಕೋಳಿಗಳ ಆಕರ್ಷಣೆ: ಎಂದಿನಂತೆ ಈ ವರ್ಷವೂ ಖಡಕ್‌ನಾಥ್‌ ಕೋಳಿಗಳು ಮೇಳದಲ್ಲಿ ಗಮನ ಸೆಳೆದಿವೆ. ಕಾಡುಕೋಳಿಗಳು ಎಂದೂ ಕರೆಯಲ್ಪಡುವ ಈ ಕೋಳಿಗಳ ಬಣ್ಣ ಕಡುಕಪ್ಪು. ಕಣ್ಣು, ಬಾಲ ಅಷ್ಟೇ ಯಾಕೆ, ರಕ್ತ-ಮಾಂಸ ಕೂಡ ಕಪ್ಪು (ವಾಸ್ತವವಾಗಿ ಕಡುಗೆಂಪು) ಆಗಿದೆ. ಜಾನುವಾರು ಮಳಿಗೆಗಳಿರುವ ವಿಭಾಗಕ್ಕೆ ಭೇಟಿ ನೀಡುವ ಜನ, ಖಡಕ್‌ನಾಥ್‌ ಕೋಳಿಗಳನ್ನು ಹುಡುಕಿಕೊಂಡು ಹೋಗುತ್ತಿರುವುದು ಕಂಡುಬಂತು. ಎರಡನೇ ದಿನ ಪೊಲೀಸ್‌ ಕ್ಯಾಪ್‌ ಸೇರಿದಂತೆ ಸಾವಿರಾರು ರೂಪಾಯಿ ಬೆಲೆಬಾಳುವ ಕೋಳಿಗಳು ಪ್ರದರ್ಶನಕ್ಕೆ ಬಂದಿಳಿಯಲಿವೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next