ಮುಂಬಯಿ: ಆಸ್ಪತ್ರೆಯ ಬೆಡ್ ನಲ್ಲೇ ಕೂತು ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಮುಂಬಯಿಯ ಬಾಂದ್ರಾದಲ್ಲಿ ನಡೆದಿದೆ.
ಅಂಜುಮನ್-ಐ-ಇಸ್ಲಾಂ ಶಾಲೆಯ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್ ಇತ್ತೀಚೆಗೆ ತಮ್ಮ ವಿಜ್ಞಾನ ಪರೀಕ್ಷೆ ಬರೆದು ಮನೆಗೆ ಹೋಗುವಾಗ ಕಾರೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಮುಬಾಶಿರಾ ಎಡಕಾಲಿಗೆ ಬಲವಾದ ಏಟು ಬಿದ್ದಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ಅನಿವಾರ್ಯತೆ ಎದುರಾಗುತ್ತದೆ. ಈ ವೇಳೆ ಶಿಕ್ಷಕರ ಬಳಿ ನೋವಿನಲ್ಲೇ ನಾನು ಪರೀಕ್ಷೆಯನ್ನು ಬರೆಯಬೇಕೆಂದು ಮುಬಾಶಿರಾ ಹೇಳಿ ಆಪರೇಷನ್ ಥಿಯೇಟರ್ ಯೊಳಗೆ ಹೋಗುತ್ತಾರೆ.
ಮುಬಾಶಿರಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಕಾರಣ ಸಂಬಂಧಪಟ್ಟ ಶಿಕ್ಷಕಕರು, ಅಧಿಕಾರಿಗಳು ವಿದ್ಯಾರ್ಥಿನಿ ಉಳಿದ ಪರೀಕ್ಷೆ ಬರೆಯಬೇಕೆಂದು ಹೇಳಿದ ಕಾರಣ, ಅದಕ್ಕೆ ಅನುಗುಣವಾಗಿ ಎಲ್ಲಾ ತಯಾರಿಗಳನ್ನು ಮಾಡಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಮಲಗಿಯೇ ಮುಬಾಶಿರಾ ಪರೀಕ್ಷೆಯನ್ನು ಬರೆದಿದ್ದಾರೆ. ಈ ವೇಳೆ ಪೋಷಕರು, ಶಿಕ್ಷಕರು ಅವರ ಜೊತೆಗಿದ್ದರು.
ಕಾಲಿಗೆ ಬ್ಯಾಂಡೇಜ್ ಹಾಕಿದ ಕಾರಣ ಮುಂದಿನ ಪರೀಕ್ಷೆಯನ್ನು ಕೂಡ ಮುಬಾಶಿರಾ ಅವರು ಆಂಬ್ಯುಲೆನ್ಸ್ ಮಲಗಿಕೊಂಡೇ ಬರೆಯಲಿದ್ದಾರೆ.
ಬಡಕುಟುಂಬ ಆಗಿರುವ ಕಾರಣ ಶಿಕ್ಷಕರು ಅಪಘಾತದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಆರ್ಥಿಕವಾಗಿ ನರೆವಿಗೆ ನಿಂತಿದ್ದಾರೆ.