ಗಂಗಾವತಿ: ವಿಜಯನಗರ ಕಾಲುವೆ ದುರಸ್ತಿ ಕಾರ್ಯಕ್ಕೆ ಬಂಡಿಬಸಪ್ಪ ಕ್ಯಾಂಪ್ ಸ್ಮಶಾನ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸ್ಮಶಾನ ಒಟ್ಟು 2.17ಎಕರೆ ಪ್ರದೇಶವಿದ್ದು ಬಂಡಿ ಬಸಪ್ಪ ಕ್ಯಾಂಪ್ ಜನಸಂಖ್ಯೆ ಮೂರು ಸಾವಿರ ಇದೆ. ಸ್ಮಶಾನ ಸಣ್ಣದಿರುವ ಕಾರಣ ಇಲ್ಲಿ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದರಿಂದ ಗ್ರಾಮದ ಮೃತದೇಹಗಳನ್ನು ಸಂಸ್ಕಾರ ಮಾಡಲು ಸ್ಥಳದ ಅಭಾವ ಉಂಟಾಗುತ್ತದೆ.
ಜಿಲ್ಲಾಡಳಿತದ ಪರವಾನಿಗೆ ಇಲ್ಲದೇ ಕಾಲುವೆ ಕಾಮಗಾರಿ ಗುತ್ತಿಗೆ ಪಡೆದವರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು ಜಿಲ್ಲಾಡಳಿತ ಕೂಡಲೇ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ: ಸ್ಮಶಾನದ ಮಣ್ಣು ಅಕ್ರಮ ಸಾಗಾಣಿಕೆ ಕುರಿತು ಗ್ರಾಮಸ್ಥರು ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಅವರ ಗಮನಕ್ಕೆ ತಂದ ತಕ್ಷಣ ಅವರು ಗ್ರಾಮ ಲೆಕ್ಕಾಧಿಕಾರಿ ಅಸ್ಲಾಂ ಪಾಷಾ ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸ್ಮಶಾನದ ಪಕ್ಕದಲ್ಲಿ ಸರಕಾರಿ ಜಾಗದಲ್ಲಿ ಮಣ್ಣನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದು ಸ್ಮಶಾನ ಮತ್ತು ಸರಕಾರಿ ಜಾಗದ ಸರ್ವೆ ಮಾಡುವ ತನಕ ಮಣ್ಣು ಸಾಗಿಸುವುದನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಸ್ಲಾಂಪಾಷಾ ಉದಯವಾಣಿ ಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಮು, ಬಸವರಾಜ ನಾಯಕ, ರವಿ.ವೈರಮಣಿ, ಬೂತೆಪ್ಪ, ಗುನ್ನೆಪ್ಪ,ಕೃಷ್ಣಾ ಸೇರಿ ಅನೇಕರಿದ್ದರು.