Advertisement

ಬಾಳೆದಿಂಡಿನ ಸವಿರುಚಿ

11:12 AM Feb 27, 2020 | mahesh |

ಬಾಳೆದಿಂಡನ್ನು ಅಡುಗೆಯಲ್ಲಿ ಬಳಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲಿ ಅತ್ಯಧಿಕ ನಾರಿನಂಶವಿದ್ದು, ಮಲಬದ್ಧತೆ ನಿವಾರಣೆಗೆ ಸಹಕಾರಿ. ಬಾಳೆದಿಂಡಿನಲ್ಲಿ ವಿಟಮಿನ್‌ ಬಿ6 ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನು ಹೆಚ್ಚಿಸುತ್ತದೆ. ದಿಂಡನ್ನು ಬಳಸಿ ಮೊಸರು ಬಜ್ಜಿ, ಕೋಸಂಬರಿ, ಪಲ್ಯ ಮುಂತಾದ ಅಡುಗೆಗಳನ್ನು ಮಾಡಬಹುದಾಗಿದೆ.

Advertisement

1. ಮೊಸರುಬಜ್ಜಿ
ಬೇಕಾಗುವ ಪದಾರ್ಥ: ಬಾಳೆದಿಂಡು ಹೆಚ್ಚಿದ್ದು- 1 ಕಪ್‌, ಮೊಸರು- 2 ಕಪ್‌, ಹಸಿಮೆಣಸಿನಕಾಯಿ- 3, ಉದ್ದಿನಬೇಳೆ- 1 ಚಮಚ, ಸಾಸಿವೆ- ಅರ್ಧ ಚಮಚ, ಕರಿಬೇವು- 6, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ- 2 ಚಮಚ.

ಮಾಡುವ ವಿಧಾನ: ಬಾಳೆದಿಂಡಿನ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ. ಇದನ್ನು ಮೊಸರಿಗೆ ಹಾಕಿಡಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಇದನ್ನು ಬಾಳೆದಿಂಡು ಹಾಕಿದ ಮೊಸರಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೂಡಿಸಿ.

2. ಪಲ್ಯ
ಬೇಕಾಗುವ ಪದಾರ್ಥ: ಹೆಚ್ಚಿದ ಬಾಳೆದಿಂಡು- 2 ಕಪ್‌, ಕೊತ್ತಂಬರಿ ಸೊಪ್ಪು- ಅರ್ಧ ಕಪ್‌, ಕರಿಬೇವು, ಕಾಯಿತುರಿ- ಅರ್ಧ ಕಪ್‌, ಸಾಸಿವೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ- 5, ಅರಿಶಿಣ, ಎಣ್ಣೆ- 3 ಚಮಚ.

ಮಾಡುವ ವಿಧಾನ: ಬಾಳೆದಿಂಡಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡು ನೀರಿನಲ್ಲಿ ಹಾಕಿಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಬಾಳೆದಿಂಡು, ಅರಿಶಿನ ಹಾಕಿ ಕೂಡಿಸಿ. ಇದಕ್ಕೆ ಒಂದು ಕಪ್‌ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೂಡಿಸಿ ಹದವಾಗಿ ಬೇಯಿಸಿ. ಬೆಂದ ನಂತರ ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ 2 ನಿಮಿಷ ಬೇಯಿಸಿ.

Advertisement

3. ಗೊಜ್ಜು
ಬೇಕಾಗುವ ಪದಾರ್ಥ: ಬಾಳೆದಿಂಡು- 2 ಕಪ್‌, ಕಡಲೆಕಾಳು- 1 ಕಪ್‌, ಜೀರಿಗೆ- 1 ಚಮಚ, ಧನಿಯ- 2 ಚಮಚ, ಅಚ್ಚ ಖಾರದಪುಡಿ- 1 ಚಮಚ, ಈರುಳ್ಳಿ-2, ಕರಿಬೇವು, ಹಸಿಮೆಣಸಿನಕಾಯಿ-2, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು. ಎಣ್ಣೆ- ಅರ್ಧ ಕಪ್‌.

ಮಾಡುವ ವಿಧಾನ: ರಾತ್ರಿ ಕಡಲೆಕಾಳನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಕುಕ್ಕರ್‌ನಲ್ಲಿ 2 ವಿಷಲ್‌ ಕೂಗಿಸಿ. ಇದು ಆರಿದ ನಂತರ ಹೆಚ್ಚಿದ ಬಾಳೆದಿಂಡು, ಉಪ್ಪು ಹಾಕಿ ಮತ್ತೂಂದು ವಿಷಲ್‌ ಕೂಗಿಸಿ. ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಧನಿಯವನ್ನು ಘಮ್ಮೆನ್ನುವವರೆಗೆ ಹುರಿಯಿರಿ. ನಂತರ ಅದೇ ಬಾಣಲೆಗೆ ಜೀರಿಗೆ, ಕರಿಬೇವು ಹಾಕಿ ಹುರಿಯಿರಿ. ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಫ್ರೆç ಮಾಡಿ. ಮಿಕ್ಸಿ ಜಾರ್‌ನಲ್ಲಿ ಹುರಿದ ಧನಿಯ, ಜೀರಿಗೆ- ಕರಿಬೇವು, ಕಾಯಿತುರಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಕುಕ್ಕರ್‌ಗೆ ಹಾಕಿ ಕುದಿಯಲು ಇಡಿ. ಅಚ್ಚಖಾರದಪುಡಿ, ಉಪ್ಪು ಬೇಕಿದ್ದಲ್ಲಿ ಸೇರಿಸಿ ಕುದಿಸಿ. ಇದನ್ನು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

4. ಚಾಟ್‌
ಬೇಕಾಗುವ ಪದಾರ್ಥ: ಬಾಳೆದಿಂಡು ಸಣ್ಣಗೆ ಹೆಚ್ಚಿದ್ದು- 2 ಕಪ್‌, ಹೆಚ್ಚಿದ ಈರುಳ್ಳಿ- 1 ಕಪ್‌, ಹೆಚ್ಚಿದ ಟೊಮೇಟೊ- ಅರ್ಧ ಕಪ್‌, ಕೊತ್ತಂಬರಿ ಸೊಪ್ಪು- ಅರ್ಧ ಕಪ್‌, ಗರಂ ಮಸಾಲ- ಅರ್ಧ ಚಮಚ, ಅಚ್ಚಖಾರದಪುಡಿ- 2 ಚಮಚ, ಚಾಟ್‌ ಮಸಾಲ- ಅರ್ಧ ಚಮಚ, ಉಪ್ಪು- ರುಚಿಗೆ, ಸೇವ್‌- ಅರ್ಧ ಕಪ್‌, ಕ್ಯಾರೆಟ್‌ ತುರಿ- ಅರ್ಧ ಕಪ್‌.

ಮಾಡುವ ವಿಧಾನ: ಹೆಚ್ಚಿದ ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಕೂಡಿಸಿ. ಅದಕ್ಕೆ ಗರಂ ಮಸಾಲ, ಅಚ್ಚಖಾರದಪುಡಿ, ಚಾಟ್‌ ಮಸಾಲ, ಸೇವ್‌ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸರ್ವ್‌ ಮಾಡಿ. ಸಂಜೆಗೆ ಕಾಫಿ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.

- ಶ್ರುತಿ ಕೆ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next