Advertisement

20- 21ರಂದು ಕೊಣ್ಣೂರ ನುಡಿ ಸಡಗರ: ಪ್ರೊ|ಕೊಣ್ಣೂರ

03:31 PM Sep 19, 2018 | Team Udayavani |

ಬನಹಟ್ಟಿ: ಯಲ್ಲಟ್ಟಿಯ ಕೊಣ್ಣೂರು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಕಾಲೇಜಿನ ಮೈದಾನದಲ್ಲಿ ಕೊಣ್ಣೂರು ಶಿಕ್ಷಣ ಸಮೂಹ ಸಂಸ್ಥೆಗಳ ಅಡಿಯಲ್ಲಿ ಸೆ. 20 ಹಾಗೂ 21ರಂದು ಉತ್ತರ ಕರ್ನಾಟಕದ ಅಕ್ಷರ ಜಾತ್ರೆ ‘ಕೊಣ್ಣೂರ ನುಡಿ ಸಡಗರ’ 2 ದಿನಗಳ ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಣ್ಣೂರು ನುಡಿ ಸಡಗರದ ಸ್ವಾಗತಿ ಸಮಿತಿ ಅಧ್ಯಕ್ಷರು, ಕೊಣ್ಣೂರ ವಿಜ್ಞಾನ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯ ಪ್ರೊ| ಬಿ. ಕೆ. ಕೊಣ್ಣೂರ ಹೇಳಿದರು.

Advertisement

ಯಲ್ಲಟ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಜರುಗಲಿರುವ ಈ ಕೊಣ್ಣೂರು ನುಡಿ ಸಡಗರ ಕಾರ್ಯಕ್ರಮದ ಕುರಿತು ಪೂರ್ವ ಸಿದ್ಧತೆ ಭರದಿಂದ ಸಾಗುತ್ತಿದ್ದು, ಅಂದಾಜು 10ರಿಂದ 15 ಸಾವಿರ ಜನ ಸಾಹಿತಿಗಳು ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕರ ಸಮ್ಮುಖದಲ್ಲಿ ಈ ಬೃಹತ್‌ ಕಾರ್ಯಕ್ರಮ ಜರುಗಲಿದೆ. ಉತ್ತರ ಕರ್ನಾಟಕದಲ್ಲಿ ದ್ವಿತೀಯ ಬಾರಿಗೆ ಜರುಗುವ ಮಹತ್ವಪೂರ್ಣ ಹಾಗೂ ದೊಡ್ಡ ಮಟ್ಟದ ಅಕ್ಷರ ಜಾತ್ರೆ ಇದಾಗಲಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಅನೇಕ ಸಾಹಿತಿ, ರಂಗಭೂಮಿ ಸೇರಿದಂತೆ ಎಲ್ಲ ರಂಗಗಳ ಮಹಾನ್‌ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಬೆಂಗಳೂರಿನ ಖ್ಯಾತ ಸಾಹಿತಿಗಳಾದ ಬಿ. ಆರ್‌. ಲಕ್ಷ್ಮಣರಾವ್‌ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಅಂದು ಬೆಳಗ್ಗೆ ಯಲ್ಲಟ್ಟಿಯ ಶ್ರೀ ನರಸಿಂಹೇಶ್ವರ ದೇವಸ್ಥಾನದಿಂದ ವೈವಿಧ್ಯಮಯ ಕಲಾ ತಂಡಗಳ ಬೃಹತ್‌ ಮೆರವಣಿಗೆಯ ಮೂಲಕ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ. ಉದ್ದಿಮೆದಾರ ಜಗದೀಶ ಗುಡಗುಂಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದರೆ. ಅನೇಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿ ಈ ಬಾರಿ ಜಗದಾಳದ ಪ್ರಗತಿಪರ ರೈತ ಸದಾಶಿವ ಬಂಗಿ ಅವರಿಗೆ ಅನ್ನ ಪ್ರಶಸ್ತಿ, ಬನಹಟ್ಟಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿಯವರಿಗೆ ಅಕ್ಷರ ಪ್ರಶಸ್ತಿ, ಬನಹಟ್ಟಿಯ ಎಸ್‌ಆರ್‌ಎ ಸಂಯುಕ್ತ ಪ. ಪೂ. ಮಹಾವಿದ್ಯಾಲಯಕ್ಕೆ ಶಿಕ್ಷಣ ಪ್ರಶಸ್ತಿ, ಮಿರಜ್‌ದ ಡಾ. ರಾಜೇಂದ್ರ ಡೊರ್ಲೆ ಅವರಿಗೆ ವೈದ್ಯ ಪ್ರಶಸ್ತಿ ಹಾಗೂ ಹುಬ್ಬಳ್ಳಿಯ ಡಾ| ಜಿ. ಆರ್‌. ತಮಗೊಂಡ ಅವರಿಗೆ ಸಮಾಜ ಸೇವೆಗೆ ಪ್ರಶಸ್ತಿ ನೀಡಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಮೆರವಣಿಗೆ, ಉದ್ಘಾಟನೆ, ಪ್ರಶಸ್ತಿ ಪ್ರಧಾನ, ಕವಿ ಸಮಯ, ಜಾನಪದ ಸಡಗರ, ಸಂಗೀತ ಸಿಂಚನ, ವೈಜ್ಞಾನಿಕ ಕ್ರಾಂತಿ, ಐಎ.ಎಸ್‌/ಕೆಎಎಸ್‌ ಪರೀಕ್ಷೆಗೆ ಮಾರ್ಗದರ್ಶನ ಮತ್ತು ರಸಪ್ರಶ್ನೆ, ಗ್ರಂಥ ಲೋಕಾರ್ಪಣೆ ಮತ್ತು ಖ್ಯಾತ ಚಲನಚಿತ್ರ ನಟಿ ಗೀತಾ ಅವರೊಂದಿಗೆ ಸಂವಾದ, ಹಾಸ್ಯ-ಲಾಸ್ಯ, ಸಮಾರೋಪ ಸೇರಿದಂತೆ ಅನೇಕ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ದಾಶ್ಯಾಳ, ಭರಮಪ್ಪ ಕೊಣ್ಣೂರ, ಶೀತಲ ಕೊಣ್ಣೂರ ಚಂದ್ರಕಾಂತ ಹೊಸೂರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next