Advertisement

ಜನಪ್ರಿಯತೆ ಕಳೆದುಕೊಂಡ ಕಂಬಳಿ; ಆದರೆ ಶುಭ ಸಮಾರಂಭಕ್ಕೆ ಮಾತ್ರ ಬೇಕೇ ಬೇಕು.

07:12 PM Apr 07, 2024 | Team Udayavani |

ರಬಕವಿ ಬನಹಟ್ಟಿ : ಚಳಿಗಾಲ, ಮಳೆಗಾಲ ಹಾಗೂ ಶುಭ ಸಂದರ್ಭಗಳಲ್ಲಿ ಹಾಗೂ ಕುರುಬನ ರಾಣಿ ಚಿತ್ರದ ಶಿವರಾಜಕುಮಾರ ನೋಡಿದೊಡನೆ ನೆನಪಿಗೆ ಬರುವ ವಸ್ತುವಾಗಿರುವ ಕಪ್ಪು ಕಂಬಳಿ. ಬದಲಾದ ಕಾಲ, ಆಧುನಿಕತೆಯ ವ್ಯಾಮೋಹದಿಂದ ಕಂಬಳಿ ತನ್ನ ವೈಶಿಷ್ಟ್ಯತೆಯನ್ನು ಕಳೆದುಕೊಳ್ಳುತ್ತಿದೆ. ಆಧುನಿಕವಾಗಿ ಸಿಗುವ ಬಣ್ಣ ಬಣ್ಣದ ಬೆಚ್ಚನೆಯ ವಸ್ತ್ರಗಳಿಂದಾಗಿ ಕಪ್ಪು ಕಂಬಳಿಯನ್ನು ಮರೆಯುತ್ತಿದ್ದಾರೆ. ಕುರುಬ ಸಮಾಜದವರಿಗೆ ಎಲ್ಲದಕ್ಕೂ ಬೇಕಾಗುವ ಈ ಕಂಬಳಿ ಈಗ ಜನಪ್ರೀಯತೆ ಕಳೆದುಕೊಳ್ಳುತ್ತಿದೆ. ಆದರೆ ಎಲ್ಲ ಶುಭ ಸಮಾರಂಭಕ್ಕೆ ಮಾತ್ರ ಈ ಕಂಬಳಿ ಬೇಕೆ ಬೇಕು.

Advertisement

ರಬಕವಿ ಬನಹಟ್ಟಿಯಾದ್ಯಂತ ನೂರಾರು ಕುರುಬ ಸಮುದಾಯದ ಮೂಲ ಕಸುಬಾಗಿದ್ದ ಕಂಬಳಿ ತಯಾರಿಕೆಯು ಸರ್ಕಾರದ ಪೂರಕ ಬೆಂಬಲವಿಲ್ಲದೆ ಇದೀಗ ಕೇವಲ ಒಂದೇ ಒಂದು ಕುಟುಂಬ ಈ ಕಾಯಕದಲ್ಲಿ ತೊಡಗಿಕೊಂಡಿದೆ.

ಕಂಬಳಿ ತಯಾರಿಸುವ ಕಾಯಕ ಕುರುಬ ಸಮುದಾಯಕ್ಕೆ ಅವರ ಹಿರಿಯರಿಂದ ಬಂದ ಬಳುವಳಿ. ಮೊದಲು ಕುರಿ ಕುರಿಗಾಯಿಗಳ ಹತ್ತಿರ ಹೋಗಿ ಜವಾರಿ ಕುರಿಗಳ ತುಪ್ಪಳವನ್ನು ಕತ್ತರಿಸಿ ಸಂಗ್ರಹಿಸಿ ಅದರ ಹಂಜಿಯನ್ನು ಮಾಡಲಾಗುತ್ತದೆ. ನಂತರ ಗಾಂಧಿ ಚರಕದಲ್ಲಿ ನೂಲುವುದು ಮಹಿಳೆಯರದ್ದು. ನಂತರ ಕಂಬಳಿ ನೂಲುಗಳನ್ನು ಜೋಡಿಸಿ ನೇಯ್ಗೆ ಮಾಡಿ ಗಂಜಿಯನ್ನು ಸವರಿ ಬಿಸಿಲಿನಲ್ಲಿ ಒಣಗಿಸಿದಾಗ ಒಂದು ಕಂಬಳಿ ಸಿದ್ಧವಾಗುತ್ತದೆ. ಒಂದು ಕಂಬಳಿ ನೇಯ್ಗೆಗೆ ಕನಿಷ್ಠ ಎರಡು ದಿನ ಬೇಕೇ ಬೇಕು.

ಕುರಿ ಕಾಯುವ ಕುರಿಗಾರರು ತಮ್ಮ ಕುರಿಗಳ ಮೈಮೇಲೆ ಬರುವ ಉಣ್ಣಿಗಳನ್ನು ಕತ್ತರಿಸಿ ಕಂಬಳಿ ನೇಯಲು ಕೊಡುತ್ತಾರೆ. ಆದರೆ ಇಂದು ಈ ಉದ್ದಿಮೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಜನ ಸಿಗುತ್ತಾರೆ. ಆದರೆ ಕಂಬಳಿ ಉತ್ಪಾದನೆ ವೆಚ್ಚ ಹೆಚ್ಚಿದ್ದು, ಬೇಡಿಕೆ ಕೂಡಾ ಇಲ್ಲದ ಕಾರಣ ಸಾಂಪ್ರದಾಯಿಕ ಕಂಬಳಿ ನೇಯ್ಗೆ ಕಡಿಮೆಯಾಗುತ್ತಿದೆ.

ಹಲವು ವರ್ಷಗಳ ಹಿಂದೆ ಮುಂಗಾರು ಮಳೆ ಆರಂಭವಾಯಿತೆಂದರೆ ಕಂಬಳಿ,ಗೊಂಗಡಿ, ಗೊಂಚಿಗೆ ಸೇರಿದಂತೆ ಉಣ್ಣೆಯಿಂದ ಮಾಡಿದ ಇವುಗಳಿಗೆ ಭಾರೀ ಬೇಡಿಕೆ ಇರುತ್ತಿತ್ತು. ಮಳೆಗಾಲದಲ್ಲಿ ರೈತರಿಗಂತೂ ಕೃಷಿ ಚಟುವಟಿಕೆ ಸಂದರ್ಭದಲ್ಲಿ ಬೀಳುವ ತುಂತುರು ಮಳೆಗೆ ಕಂಬಳಿಯೇ ಆಸರೆಯಾಗಿತ್ತು.

Advertisement

ಕಂಬಳಿ ಬಸಿ ಮಳೆಯಾದರೆ ಹೊವೆಲ್ಲ ನೀರು ಎಂಬಂತೆ, ಕುರಿಯ ಉಣ್ಣೆಯ ಕಂಬಳಿ ಚಳಿಯಲ್ಲಿ ದೇಹಕ್ಕೆ ಉಷ್ಣತೆ ನೀಡುತ್ತದೆ ಎನ್ನತ್ತಾರೆ ರೈತರು. ಮಳೆ ಚಳಿಯಿಂದ ರಕ್ಷಣೆ ನೀಡಿ ಬೆಚ್ಚನೆ ಅನುಭವ ನೀಡುವುದು ಕಂಬಳಿಯ ವಿಶೇಷ. ಮಳೆ ಗಾಳಿಗೆ ಕಂಬಳಿ ಹಾರಿ ಹೋಗುವುದಿಲ್ಲ. ಮಳೆ ನೀರಿನಿಂದ ಮೈ ನೆನೆಯುವುದಿಲ್ಲ. ಕಂಬಳಿ ಗೊಂಚಿ ಹೊದ್ದ ರೈತ ಗದ್ದೆಯಲ್ಲಿ ಇಳಿದರೆ ಎಷ್ಟು ದೊಡ್ಡ ಮಳೆಯೇ ಬರಲಿ ಹೆದರುವುಲ್ಲ. ಯಾಕೆಂದರೆ ಇದು ನೀರು ಹಿಡಿಯುತ್ತದೆ ಆದರೆ ಅದನ್ನು ಹೊರೆಗೆ ಬಿಡುವುದಿಲ್ಲ. ಇದೇ ಇದರ ವಿಶೇಷತೆ. ಆಗ ರೈತರ ಮನೆಯಲ್ಲಿ ಸಾಕಷ್ಟು ಕಂಬಳಿಗಳು ಇರುತ್ತಿದ್ದವು. ಮನೆಗೆ ಸ್ವಾಮಿಗಳು ಮತ್ಯಾರೋ ಹಿರಿಯರು ಮನೆಗೆ ಬಂದರೆ ಕಂಬಳಿ ಹಾಯಿಸಿ ಕೂರಿಸುತ್ತಿದ್ದರು. ಅಲ್ಲದೆ ನಾಟಕದಲ್ಲಿ, ದೊಡ್ಡಾಟದಲ್ಲಿ ಅಂಕಪರದೆಯಾಗಿ ಕಂಬಳಿ ಬಳಸುತ್ತಿದ್ದರು. ಆದರೆ ಈಗ ಆಧುನಿಕತೆಗೆ ತಕ್ಕಂತೆ ಪ್ಲಾಸ್ಟಿಕ್‌ ಚಾಪೆ ಬಂದು ಕಂಬಳಿ ಮಾಯವಾಗಿದೆ.

ಒಂದು ಕಂಬಳಿ ನೇಯ್ಗೆಗೆ 3 ರಿಂದ 5 ಕೆಜಿ ಕುರಿ ಉಣ್ಣೆ ಬೇಕು. ಉಣ್ಣೆಯನ್ನು ಹದಗೊಳಿಸಿದ ನಂತರ ನೂಲು ಮಾಡುವುದು. ನಂತರ ಮಗ್ಗದಲ್ಲಿ ಕಂಬಳಿ ನೇಯಲು ಮುರ್ನಾಲ್ಕು ದಿನ ಶ್ರಮಬೇಕು. ಮನೆ ಮಂದಿಯೆಲ್ಲ ಕೆಲಸ ಮಾಡಿದರೆ ವಾರಕ್ಕೆರಡು ಕಂಬಳಿ ನೇಯ್ಗೆ ಸಾಧ್ಯ. ಮಾರುಕಟ್ಟೆಯಲ್ಲಿ 1500 ರಿಂದ 2000 ರೂ. ಸಿಗಬಹುದು. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವೆನ್ನುತ್ತಾರೆ ಮಲ್ಲಪ್ಪ ತುಂಗಳ.

ಹಿಂದೆ 800 ರಿಂದ 1000 ರೂ. ಇದ್ದ ದರ ಈಗ ಒಂದು ಕಂಬಳಿ ಬೆಲೆ 1500 ರಿಂದ ಎರಡು ಸಾವಿರ ರೂ ಏರಿದೆ. ಬೆಲೆ ಹೆಚ್ಚಾಗಿರುವುದರಿಂದ ಅದರ ಬೇಡಿಕೆಯೂ ಖುಷಿಯಿದೆ. ಆದರು ಹೊಸ ಮನೆಕಟ್ಟಿದವರು, ಹೊಸದಾಗಿ ಮದುವೆ ಮಾಡುವವರು, ದಾನ ಕೊಡುವವರು ಕಡ್ಡಾಯ ವಾಗಿ ಖರೀದಿ ಮಾಡುತ್ತಾರೆ. ಯಾಕೆಂದರೆ ಮದುವೆ ಸಂದರ್ಭದಲ್ಲಿ ಅಕ್ಕಿಯಿಂದ ಚುಕ್ಕೆ ಇಡಲು, ಹೊಸ ಮನೆಗೆ ಪ್ರವೇಶ ಮಾಡುವಾಗ ಹೋಮದ ಸಂದರ್ಭದಲ್ಲಿ ಹಾಗೂ ಕೆಲವು ಸಂದರ್ಭದಲ್ಲಿ ದಾನದ ರೂಪದಲ್ಲಿ ಕೊಡಲು ಈ ಕಂಬಳಿ ಬೇಕೇ ಬೇಕು.

ಆದರೂ ಕಂಬಳಿ ವ್ಯಾಪಾರಸ್ತರಿಗೆ ಸರಕಾರವೂ ಕೂಡಾ ಸಹಾಯ ಹಸ್ತ ನೀಡುವುದರ ಜೊತೆಗೆ ಇವುಗಳಿಗೆ ಒಂದು ಉತ್ತಮ ಮಾರುಕಟ್ಟೆ ನಿರ್ಮಿಸುವಲ್ಲಿ ಸಹಾಯ ಹಸ್ತನೀಡಿದ್ದಲ್ಲಿ ಈ ಕಲೆ ಉಳಿಯಲು ಸಾಧ್ಯ. `ಅಂಬಲಿಗಿಂತ ಉಂಬಳಿಯಿಲ್ಲ ಕಂಬಳಿಗಿಂತ ಹಾಸಿಗೆಯಿಲ್ಲ’ ಎಂಬ ಹಿರಿಯರ ನಾಣ್ಣುಡಿ ಎಷ್ಟು ಸತ್ಯವೆಂಬುದು ಕಂಬಳಿ ಉಪಯೋಗಿಸಿದವರಿಗೆ ಮಾತ್ರ ತಿಳಿಯುವುದು ಅದರ ಮಹತ್ವ.

ಕಂಬಳಿ ನೇಯ್ಗೆಯಿಂದ ಉತ್ತಮ ಲಾಭವೆನೂ ಇಲ್ಲ. ಹಿರಿಯರ ಪರಂಪರೆ ಉಳಿಸಬೇಕೆಂಬುದಾಗಿದೆ. ಅದೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಗಮನಹರಿಸಿದ್ದಲ್ಲಿ ಈ ಕಸಬು ಮುಂದುವರೆಯಲು ಸಾಧ್ಯ’.
-ಮಲ್ಲಪ್ಪ ತುಂಗಳ, ಕಂಬಳಿ ತಯಾರಕ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next