Advertisement
ಇದೇ 26ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರಲಿದ್ದು, ಆಗ ಸಿಎಂ ಹಾಗೂ ಡಿಸಿಎಂ ಜತೆ ಚರ್ಚಿಸುವ ನಿರೀಕ್ಷೆ ಇದೆ. ಅಲ್ಲೇನಾದರೂ ಒಮ್ಮತ ಮೂಡಿದರೆ, ತತ್‌ಕ್ಷಣವೇ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ ಆಗಲೂ ಒಮ್ಮತ ಮೂಡದಿದ್ದರೆ ಲೋಕಸಭಾ ಚುನಾವಣೆ ಬಳಿಕವಷ್ಟೇ ನಿಗಮ, ಮಂಡಳಿ ನೇಮಕಾತಿ ನಡೆಯಬಹುದು ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಮೊದಲೇ ರಾಜ್ಯ ಉಸ್ತುವಾರಿ ಸಹಿತ ನಾಯಕರು ಭರವಸೆ ನೀಡಿದಂತೆ ಸಂಕ್ರಾಂತಿ ಬಳಿಕ ನೇಮಕಾತಿ ಪಟ್ಟಿ ಸಿದ್ಧಗೊಳಿಸಲಾಗಿತ್ತು. ದಿಲ್ಲಿಯಿಂದ ಅನುಮೋದನೆಯೂ ಆಗಿತ್ತು. ಇನ್ನೇನು ಅಧಿಕೃತ ಘೋಷಣೆಯಾಗುವಷ್ಟರಲ್ಲಿ ನಿಗಮ-ಮಂಡಳಿ ಸಮೇತ ಪಟ್ಟಿಯಲ್ಲಿದ್ದವರ ಹೆಸರು ಸೋರಿಕೆಯಾಗಿದೆ. ಇದು ನಾಯಕರ ಕಿತ್ತಾಟಕ್ಕೆ ನಾಂದಿಹಾಡಿದ್ದು, ಸದ್ಯಕ್ಕೆ ಈ ನೇಮಕಾತಿ ಪಟ್ಟಿ ಬಿಡುಗಡೆ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ದಿಲ್ಲಿಯಿಂದ ಬಂದ ಪಟ್ಟಿಯಲ್ಲಿ ಹೆಸರು ಬಿಟ್ಟು
ಹೋಗಿದ್ದು ಗೊತ್ತಾಗುತ್ತಿದ್ದಂತೆ ಆಕಾಂಕ್ಷಿಗಳು ತಮ್ಮ ನಾಯಕರಿಂದ ಒತ್ತಡ ಹಾಕಲು ಆರಂಭಿಸಿದ್ದಾರೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ನಾಯಕರು, ಪಕ್ಷದಲ್ಲಿ ಹುದ್ದೆಗಳು ಬೇರೆ ಬೇರೆ ಇರಬಹುದು. ಆದರೆ ತಮಗೂ ಸಮಾನ ಹಕ್ಕುಗಳಿವೆ. ಗೆಲುವಿಗೆ ಶ್ರಮಿಸಿದ ಬೆಂಬಲಿಗರಿಗೆ “ಅಧಿಕಾರ ಭಾಗ್ಯ” ನೀಡಬೇಕು ಎಂದು ಕೆಲವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಬಣಗಳ ಬಡಿದಾಟದಿಂದ ಪಟ್ಟಿ ಬಿಡುಗಡೆಗೆ “ಗ್ರಹಣ” ಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಈ ಮಧ್ಯೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಸಮೀಕ್ಷೆಯಂತಹ ಕಾರ್ಯಗಳಲ್ಲಿ ಕಾಂಗ್ರೆಸ್ ತನ್ನ ನಾಯಕರನ್ನು ಮತ್ತಷ್ಟು ಒತ್ತಡಕ್ಕೆ ನೂಕಿದೆ.
ಶುಕ್ರವಾರವಷ್ಟೇ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ , ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಚುನಾವಣ ಸಮಿತಿ ಸದಸ್ಯರಿಗೆ ತಿಂಗಳಾಂತ್ಯದ ಒಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಳುಹಿಸಲು ಸೂಚಿಸಿದ್ದಾರೆ. ಜತೆಗೆ ಸಚಿವರಿಗೆ ವಾರದಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಿ, ವರದಿ ಸಲ್ಲಿಸಲೂ ನಿರ್ದೇಶನ ನೀಡಿದ್ದಾರೆ. ಅದರ ಬೆನ್ನಲ್ಲೇ ಒಂದೆರಡು ದಿನಗಳಲ್ಲಿ ಈ ವರದಿಯ ಸಿದ್ಧತೆ ಕಾರ್ಯ ಶುರುವಾಗಲಿದೆ. ಅದು ಪೂರ್ಣಗೊಳ್ಳುತ್ತಿದ್ದಂತೆ ಅತ್ತ ಎಐಸಿಸಿ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸ ನಡೆಸಿ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳ ನಡುವೆ ನೇಮಕಾತಿ ಪಟ್ಟಿ ನೇಪಥ್ಯಕ್ಕೆ ಸರಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.