ಮುಧೋಳ: ನಗರದ ಆರಾಧ್ಯ ದೈವ ದಾನಮ್ಮದೇವಿ ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಭಾರತೀಯ ಸಂಸ್ಕೃತಿ ಬಿಂಬಿಸುವ ಉಡುಗೆ ಹಾಗೂ ದೇವಸ್ಥಾನದಲ್ಲಿ ಮೊಬೈಲ್ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಪದಾಧಿಕಾರಿಗಳು ದೇವಸ್ಥಾನದ ಆಡಳಿತ ಮಂಡಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ದೇವಸ್ಥಾನದಲ್ಲಿ ಸ್ಕರ್ಟ್, ಮಿನಿಸ್ಕರ್ಟ್, ಜೀನ್ಸ್, ಸ್ಲೀವ್ಲೆಸ್ ತರಹದ ಪಾಶ್ಚಾತ್ಯ ಸಂಸ್ಕೃತಿ ಬಿಂಬಿಸುವ ಉಡುಪು ಧರಿಸಿ ದೇವಸ್ಥಾನಕ್ಕೆ ಆಗಮಿಸುವುದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಅದೇ ರೀತಿ ದೇವಸ್ಥಾನದಲ್ಲಿ ಮೊಬೈಲ್ ಬಳಕೆಯಿಂದಾಗಿ ಭಕ್ತರ ಧ್ಯಾನಕ್ಕೆ ಅಡಚಣೆಯುಂಟಾಗುತ್ತದೆ. ಆದ್ದರಿಂದ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅದೇ ರೀತಿ ದೇವಸ್ಥಾನದಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಬೇಕು ಎಂದು ಮನವಿ ಪತ್ರದ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:KKRDB ಅನುದಾನ ಬಳಕೆ: ಕಲ್ಯಾಣದ ಶಾಸಕರ ಕಾರ್ಯ ಮೌಲ್ಯಮಾಪನ: ಅಜಯ್ ಸಿಂಗ್
ಈಗಾಗಲೇ ಚಿಕ್ಮಮಗಳೂರಿನ ದೇವಿರಮ್ಮನ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಅದೇ ರೀತಿ ಹಾಸನದ ಹಾಸನಾಂಬ ದೇವಸ್ಥಾನದಲ್ಲಿ ವಸ್ತ್ರಸಂಹಿತೆಗೆ ಮನವಿ ಮಾಡಲಾಗಿದೆ. ಅದೇ ರೀತಿ ನಗರದ ಶಕ್ತಿ ದೇವತೆಯಾದ ದಾನಮ್ಮದೇವಿ ದೇವಸ್ಥಾನಕ್ಕೂ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವೆಂಕಟರಮಣ ನಾಯಕ, ಡಾ.ವೀರೇಂದ್ರ ಹೊಸಪೇಟೆ, ವಿಜಯ ಹಂಗರಗಿ, ಗೀತಾ ಆಲಗುಂಡಿ, ನಿಂಗಪ್ಪ ಹಿರೇಸೋಮಣ್ಣವರ, ಬಾಬು ಲಿಂಗನೂರು, ಶೇಖರ ಚೆನ್ನಪ್ಪಗೋಳ, ಪದ್ಮ ಪಾಟೀಲ, ಪಾರು ಛಬ್ಬಿ, ಆಶಾ ಶೆಟ್ಟಿ, ಸಂಗೀತ ಪೂಜಾರಿ, ಮಂಜುಳಾ ಪೂಜಾರಿ, ಸುರೇಖಾ ಜೈನ, ವೀಣಾ ಮಠದ, ದಾನಮ್ಮ ಚೆನ್ನಗೊಳ, ಮಧು ಹಿರೇಮಠ, ಸವಿತಾ ವಜ್ಜರಮಟ್ಟಿ, ಡಾ. ಸುಮೇದ ಮಾನೆ, ವಿಮಲಾ ಯಾದವ, ಶಕುಂತಲಾ ಉದಪುಡಿ ಇತರರು ಉಪಸ್ಥಿತರಿದ್ದರು.