Advertisement

ಇನ್ನು ಅಕ್ಟೋಬರ್‌ 15ರ ವರೆಗೆ ಮರಳುಗಾರಿಕೆ ನಿಷೇಧ

10:09 AM May 23, 2023 | Team Udayavani |

ಮಂಗಳೂರು: ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದೆ. ಚುನಾವಣೆ ಕಾರಣದಿಂದಾಗಿ ಮತ್ತೆ ಪರಿಸರ ಇಲಾಖೆಯ ಕ್ಲಿಯರೆನ್ಸ್‌ ಪಡೆಯುವ ಪ್ರಕ್ರಿಯೆಗಳು ತಡವಾಗಿರುವ ಕಾರಣ ಈ ಬಾರಿ ಸಿಆರ್‌ಝಡ್‌ ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ಬಳಿಕವೇ ನಡೆಯಬೇಕಷ್ಟೆ.

Advertisement

ಪರವಾನಿಗೆಯ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದೆ. ಆ ಬಳಿಕ ಇಸಿ (ಪರಿಸರ ಕ್ಲಿಯರೆನ್ಸ್‌) ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದೆ. ಆದರೆ ವರದಿ ಬರಲು ಬಾಕಿ ಇದೆ. ಅಲ್ಲದೆ ಈ ಮಧ್ಯೆ ಚುನಾವಣ ಪ್ರಕ್ರಿಯೆಯೂ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಯೂ ಸಭೆ ಸೇರಲು ಸಾಧ್ಯವಾಗಿಲ್ಲ.

ಇನ್ನು ಬೆಥಮೆಟ್ರಿ ವರದಿ ಬಂದ ಬಳಿಕ ಡಿಸಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆದು ಸರಕಾರದ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮತಿ ಪಡೆಯುವ ಪ್ರಕ್ರಿಯೆ ಬಾಕಿ ಇದೆ. ಇವೆಲ್ಲವೂ ಆಗುವ ಮೊದಲೇ ಜೂನ್‌ನಿಂದಲೇ ಮರಳುಗಾರಿಕೆ ಸಿಆರ್‌ಝಡ್‌, ನಾನ್‌ ಸಿಆರ್‌ಝಡ್‌ ಎರಡೂ ವ್ಯಾಪ್ತಿಯಲ್ಲಿ ನಿಷೇಧಿಸಲ್ಪಡಲಿದೆ. ಅಕ್ಟೋಬರ್‌ 15ರ ವರೆಗೆ ನಿಷೇಧ ಜಾರಿಯಲ್ಲಿರುತ್ತದೆ.

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಗೆ ಇಸಿ ನೀಡಲಾಗಿತ್ತು. ಆದರೆ ಇಸಿ ನೀಡಿದ ಪ್ರಾರಂಭಿಕ ಅವಧಿಯಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿ ಹಸುರು ನ್ಯಾಯಾಧಿಕರಣವು ಸಿಆರ್‌ಝಡ್‌ ಮರಳುಗಾರಿಕೆಗೆ ಸಂಬಂಧಿಸಿ ಆದೇಶ ನೀಡಿತ್ತು. ಅದನ್ನು ದ.ಕ. ಜಿಲ್ಲಾಧಿಕಾರಿಯವರೂ ಇಲ್ಲಿಗೆ ಅನ್ವಯಿಸಿದ್ದರಿಂದ ದ.ಕ.ದಲ್ಲೂ ಮರಳುಗಾರಿಕೆ ನಿಷೇಧ ಗೊಂಡಿತ್ತು. ಇದಾದ ಕೆಲವು ತಿಂಗಳ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ಕ್ರಿಯಾ ಸಮಿತಿ ಸಭೆ ನಡೆ 205 ಮಂದಿಗೆ ಪರವಾನಗಿಗೆ ಅನುಮತಿ ನೀಡಿದ್ದರು. ಡಿಸಿ ಅನುಮತಿ ನೀಡಿದ ಬಳಿಕ ಜಿಲ್ಲೆಯಲ್ಲಿ ಮರಳು ಗಾರಿಕೆ ಆರಂಭವಾಯಿತು. ಆದರೆ ಮರು ಆರಂಭಗೊಂಡ ಒಂದೂವರೆ ತಿಂಗಳಲ್ಲೇ ಮರಳುಗಾರಿಕೆ ಪರವಾನಿಗೆ ಅವಧಿ ಮುಗಿದಂತಾಗಿದೆ.

ಕಾಮಗಾರಿ ಹೆಚ್ಚಿರುವ ಅವಧಿ
ಎಪ್ರಿಲ್‌ ಹಾಗೂ ಮೇ ತಿಂಗಳು ಹೆಚ್ಚಿನ ಕಾಮಗಾರಿಗಳಿಗೆ ವೇಗ ಜಾಸ್ತಿ ಸಿಗುವ ಅವಧಿಯಲ್ಲೇ ಸಿಆರ್‌ಝಡ್‌ ಮರಳು ನಿಂತು ಹೋಗಿದೆ. ಅಣೆಕಟ್ಟುಗಳಿಂದ ಹೂಳೆತ್ತುವುದೂ ನಿಂತಿದೆ. ಬಹುತೇಕ ಮನೆ ಕೆಲಸ, ರಸ್ತೆಗಳ ಕಾಮಗಾರಿ ಮತ್ತೆ ಚುರುಕಾಗುತ್ತಿದೆ. ಸದ್ಯಕ್ಕೆ 25 ನಾನ್‌ ಸಿಆರ್‌ಝಡ್‌ ಮರಳು ಬ್ಲಾಕ್‌ಗಳಿಂದ ಮರಳು ಪೂರೈಕೆಯಾಗುತ್ತಿದೆ. ಇನ್ನು ಅಕ್ರಮ ಮರಳುಗಾರಿಕೆಯವರು ಟಿಪ್ಪರ್‌ ಲೋಡ್‌ವೊಂದಕ್ಕೆ 14-15 ಸಾವಿರ ರೂ.ನಷ್ಟು ದುಬಾರಿ ಬೆಲೆಗೆ ಮರಳು ಪೂರೈಸುತ್ತಾರೆ.

Advertisement

ನಾನ್‌ ಸಿಆರ್‌ಝಡ್‌ ಮರಳಿಗೆ ಲೋಡಿಂಗ್‌ ಜಾಗದಲ್ಲಿ ಅಥವಾ ಸ್ಟಾಕ್‌ಯಾರ್ಡ್‌ನಲ್ಲಿ ಪ್ರತೀ ಟನ್‌ಗೆ ಕನಿಷ್ಠ 900 ರೂ.ನಿಂದ ಗರಿಷ್ಠ 1,200 ರೂ. ವರೆಗೆ ವಿಧಿಸಲಾಗುತ್ತದೆ. ಇದು ಕಾಮಗಾರಿಯ ಜಾಗಕ್ಕೆ ಬರುವಾಗ ಸಾಗಾಟ ವೆಚ್ಚವೂ ಸೇರಿ ಯುನಿಟ್‌ವೊಂದಕ್ಕೆ ಸರಾಸರಿ 10ರಿಂದ 12 ಸಾವಿರ ರೂ. ವರೆಗೆ ಗ್ರಾಹಕರು ಕೊಡಬೇಕಾಗುತ್ತದೆ.

ಸಿಆರ್‌ಝಡ್‌ನ‌ಲ್ಲಿ ಹೊಸ ಇಸಿಗಾಗಿ ಎನ್‌ಐಟಿಕೆ ತಂಡದವರು ಬೆಥಮೆಟ್ರಿ ಸಮೀಕ್ಷೆ ನಡೆಸಿದ್ದಾರೆ. ಅದರ ವರದಿ ಬರಬೇಕಿದೆ. ಬಳಿಕ ಜಿಲ್ಲೆಯಿಂದ ಪ್ರಸ್ತಾವನೆ ಕೆಸಿಝಡ್‌ಎಂಗೆ ಹೋಗಿ ಅನುಮೋದನೆ ಸಿಕ್ಕಿದ ಬಳಿಕವಷ್ಟೇ ಮತ್ತೆ ಮರಳುಗಾರಿಕೆ ನಡೆಸಬಹುದು.
– ಲಿಂಗರಾಜು, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next