Advertisement

ಚೇತರಿಕೆ ಹಾದಿಯತ್ತ ಬಮೂಲ್‌ ಹೆಜ್ಜೆ

02:05 PM Aug 14, 2021 | Team Udayavani |

ಬೆಂಗಳೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕುಸಿತ ಕಂಡಿದ್ದ ಬಮೂಲ್‌ನ ಹಾಲು ಮಾರಾಟ ಇದೀಗ ಆನ್‌ಲಾಕ್‌ ಬಳಿಕ ಚೇತರಿಕೆ ಹಾದಿಯತ್ತ
ಹೆಜ್ಜೆಯಿರಿಸಿದೆ.

Advertisement

ಕೋವಿಡ್‌ 2ನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರ ಜನತಾಕರ್ಫ್ಯೂ ಜಾರಿ ಮಾಡಿತ್ತು. ಇದು ಬಮೂಲ್‌ನ ಹಾಲು ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವಾಗಿತ್ತು. ಈ ಹಿಂದೆ ಪ್ರತಿ ದಿನ 9.5 ರಿಂದ 10 ಲಕ್ಷ ಲೀಟರ್‌ ವರೆಗೂ ಮಾರಾಟವಾಗುತ್ತಿದ್ದ ಬಮೂಲ್‌ ಹಾಲು ಕೋವಿಡ್‌ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ದಿಢೀರ್‌ ಆಗಿ 6.5 ಲಕ್ಷ ಲೀಟರ್‌ಗೆ ಇಳಿಕೆ ಆಗಿತ್ತು. ಮಾರಾಟವಾಗದೆ ಉಳಿದ ಹಾಲನ್ನು ಪೌಡರ್‌ ಮಾಡುವ ಕಾರ್ಯದಲ್ಲಿ ಬಮೂಲ್‌ ತೊಡಗಿಸಿಕೊಂಡಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಬಮೂಲ್‌ ಹಾಲು ಮಾರಾಟದಲ್ಲಿ ಏರಿಕೆ ಆಗಿದೆ. ಇದೀಗ ಪ್ರತಿ ದಿನ 10 ಲಕ್ಷ ಲೀಟರ್‌ ಹಾಲನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಮಾರಾಟದಲ್ಲಿ ಮತ್ತಷ್ಟು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಕೋವಿಡ್‌ 2ನೇ
ಅಲೆಯ ವೇಳೆ ಕೋವಿಡ್‌ ಸೋಂಕಿನ ಭಯದಿಂದ ಜನರು ಊರು ಸೇರಿದ್ದರು. ಅಲ್ಲದೆ ಹೋಟೆಲ್‌ಗ‌ಳು ಕೂಡ ಬಂದ್‌ಆಗಿದ್ದು ಮದುವೆ ಸಮಾರಂಭಗಳು ರದ್ದಾಗಿದ್ದವು. ಆ ಹಿನ್ನೆಲೆಯಲ್ಲಿ ಬಮೂಲ್‌ನ ಹಾಲು ಮಾರಾಟದಲ್ಲಿ ಇಳಿಕೆ ಕಂಡು ಬಂದಿತ್ತು ಎಂದು ಬಮೂಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಎಂ.ಟಿ.ಬಿ, ನಿರಾಣಿ ಸೇರಿ ಬಿಜೆಪಿಯ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಈಶ್ವರ್ ಖಂಡ್ರೆ

ಮಾರಾಟದಲ್ಲಿ ಏರಿಕೆ ಯಾಕೆ?: ಜನತಾ ಕರ್ಫ್ಯೂ ಸಡಿಲಗೊಂಡಲ ಬಳಿಕ ಹೋಟೆಲ್‌ಗ‌ಳು ತೆರೆದಿವೆ. ಊರಿಗೆ ತೆರಳಿದವರು ಮತ್ತೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಸಣ್ಣ ಸಣ್ಣ ಹೋಟೆಲ್‌ಗ‌ಳು, ಐಸ್‌ಕ್ರೀಂ ಅಂಗಡಿಗಳು ಕೂಡ ಬಾಗಿಲು ತೆರೆದಿವೆ. ಹೀಗಾಗಿ ಬಮೂಲ್‌ ಹಾಲು ಮಾರಾಟದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.

Advertisement

ಕೆಲವು ಹೋಟೆಲ್‌ಗ‌ಳಲ್ಲಿ ಸಣ್ಣ ಪುಟ್ಟ ಕಾರ್ಯ ಕ್ರಮ ನಡೆಯುತ್ತಿವೆ. ಇನ್ನೂ ಅಧಿಕ ‌ ಸಂಖ್ಯೆಯಲ್ಲಿ ಶುಭ ಕಾರ್ಯಕ್ರಮಗಳು ಆರಂಭವಾದರೆ
ಬಮೂಲ್‌ನ ಹಾಲು ಮಾರಾಟ 50 ಸಾವಿರ ಲೀಟರ್‌ ಗೂ ಅಧಿಕವಾಗಬಹುದು. ಅನ್‌ಲಾಕ್‌ ಬಳಿಕ ‌ ಈಗ ಶೇ.10 ರಷ್ಟು ಬಮೂಲ್‌ ಹಾಲು ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಈಗಾಗ ‌ಲೇ ತಜ್ಞರು ಸಂಭವನೀಯ ಮೂರನೆ ಅಲೆಯ ಬಗ್ಗೆ ಮಾತನಾಡುತ್ತಿದ್ದಾರೆ.ಕೋವಿಡ್‌ 3ನೇ ಅಲೆಯ ಬಗ್ಗೆ ಬಮೂಲ್‌ಗೆ ಇನ್ನೂ ಆತಂಕವಿದೆ ಎಂದು ತಿಳಿಸಿದ್ದಾರೆ.

ಹಾಲು ಉತ್ಪಾದನೆಯಲ್ಲಿ ಕೊಂಚ ಇಳಿಕೆ
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ರಾಜ್ಯದಲ್ಲೆ ಅಗ್ರಸ್ಥಾನದಲ್ಲಿದೆ. ಬಮೂಲ್‌ ವ್ಯಾಪ್ತಿಯಲ್ಲಿ ಸುಮಾರು 1.40
ಲಕ್ಷ ಹಾಲು ಪೂರೈಕೆ ಮಾಡುವ ರೈತರಿದ್ದಾರೆ.ಕಳೆದ ಕೆಲವು ತಿಂಗಳ ಹಿಂದೆ ಹಸುಗಳು ಕರುಗಳನ್ನು ಹಾಕಿದ ಹಿನ್ನೆಲೆಯಲ್ಲಿ ಅಧಿಕ ಹಾಲು ನೀಡುತ್ತಿದ್ದವು. ಹೀಗಾಗಿ ಸುಮಾರು 19 ಲಕ್ಷ ಲೀಟರ್‌ಹಾಲು ಉತ್ಪಾದನೆ ಆಗಿತ್ತು. ಆದರೆ ಈಗ 18 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ ಎಂದು ಬಮೂಲ್‌ ಅಧಿಕಾರಿಗಳು ಹೇಳಿದ್ದಾರೆ. ಬಮೂಲ್‌ಗೆ ಪೂರೈಕೆ ಆಗುತ್ತಿರುವ 18 ಲಕ್ಷ ಲೀಟರ್‌ ಹಾಲಿನಲ್ಲಿ ಇದೀಗ 10 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪೌಡರ್‌ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನ್‌ಲಾಕ್‌ ಬಳಿಕ ಬಮೂಲ್‌ ಚೇತರಿಸಿಕೊಳ್ಳುತ್ತಿದೆ ಹಾಲು ಮಾರಾಟ ದ್ವಿಗುಣಗೊಂಡಿದೆ. ಮುಂದಿನ ದಿನಗಳಲ್ಲಿ ಹಾಲು ಮಾರಾಟ
ಮತ್ತಷ್ಟು ಅಧಿಕವಾಗುವ ನಿರೀಕ್ಷೆಯಿದೆ.
-ನರಸಿಂಹಮೂರ್ತಿ,
ಬಮೂಲ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next