Advertisement
ಅನುದಾನದಲ್ಲಿ ಸಿಂಹಪಾಲು; ಅಭಿವೃದ್ಧಿ ಆಮೆ ವೇಗಕೆ.ಆರ್.ಪುರ ವಿಧಾನಸಭಾ ಕ್ಷೇತ್ರ: ಓಡೋಡಿ ಬಂದು ರಾಜೀನಾಮೆ ನೀಡಿದ ಶಾಸಕ ಬೈರತಿ ಬಸವರಾಜು, ಕ್ಷೇತ್ರದಲ್ಲಿ ಅಷ್ಟೇ ವೇಗವಾಗಿ ಕೆಲಸ ಮಾಡಿದ್ದಾರಾ? ಬೈರತಿ ಬಸವರಾಜು ಎರಡನೇ ಬಾರಿಗೆ ಕೆ.ಆರ್.ಪುರ (ಕೃಷ್ಣರಾಜಪುರ) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಪಾಲಿಕೆಯ ಸದಸ್ಯರಾಗಿದ್ದ ಅವರಿಗೆ ಜನ ಬಡ್ತಿ ನೀಡಿದರಾದರೂ, ಈ ಹಿಂದಿದ್ದ ಪ್ರಮುಖ ಸಮಸ್ಯೆಗಳು ಈಗಲೂ ಬಗೆಹರಿದಿಲ್ಲ. ಕ್ಷೇತ್ರದಲ್ಲಿ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿವೆ. ಬಹುತೇಕ ಕೆರೆಗಳು “ಜೀವ’ ಕಳೆದುಕೊಂಡಿವೆ. ಹೊಸದಾಗಿ ಪಾಲಿಕೆಗೆ ಸೇರಿರುವ 5 ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಬಹುತೇಕ ರಸ್ತೆಗಳಲ್ಲಿ ಗುಂಡಿಗಳೇ ತುಂಬಿವೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ, ಕೆರೆಗಳ ಪುನಶ್ಚೇತನ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗಳು ದಶಕಗಳಿಂದ ಬಗೆಹರಿದಿಲ್ಲ. ಕೆ.ಆರ್.ಪುರದಲ್ಲಿ ಬಸ್ ನಿಲ್ದಾಣವಿಲ್ಲ. ಸರ್ಕಾರಿ ಆಸ್ಪತ್ರೆ ಮುಂದಿನ ಜಾಗ ಬಸ್ ನಿಲ್ದಾಣವಾಗಿ ಬಳಕೆಯಾಗುತ್ತಿದೆ.
Related Articles
Advertisement
ಮೇಲ್ದರ್ಜೆಗೇರದ ಸರ್ಕಾರಿ ಆಸ್ಪತ್ರೆ: ಕೆ.ಆರ್.ಪುರದ ಆಸ್ಪತ್ರೆ ಕ್ಷೇತ್ರದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯಾಗಿಲ್ಲ ಎಂಬ ಆರೋಪವಿದೆ. 100 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದಿಲ್ಲ. ಹೊಸಕೋಟೆ ಹೊರತುಪಡಿಸಿದರೆ ಸುತ್ತ ಎಲ್ಲೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲ.
ಕೃಷ್ಣ ರಾಜೇಂದ್ರ ಮಾರುಕಟ್ಟೆ: ಕೃಷ್ಣೆರಾಜೇಂದ್ರ ಮಾರುಕಟ್ಟೆಗೆ ಸುತ್ತಮುತ್ತಲಿನ ಹಲವು ಹಳ್ಳಿಗಳೊಂದಿಗೆ ನಂಟಿದೆ. ಆದರೆ, ಈ ಮಾರುಕಟ್ಟೆಯ ಅಭಿವೃದ್ಧಿ ಕೆಲಸ ಇಂದಿಗೂ ಕನಸಾಗೇ ಉಳಿದಿದೆ. ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿತ್ತಾದರೂ, ಕ್ರಿಯಾರೂಪಕ್ಕೆ ಬಂದಿಲ್ಲ. ವ್ಯಾಪಾರಿಗಳು ರಸ್ತೆಯವರೆಗೆ ಆವರಿಸಿರುವುದು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ.
ಶಾಸಕರು ಕೈಗೆ ಸಿಗದಷ್ಟು ದೂರ: ಕೆ.ಆರ್.ಪುರ ಶಾಸಕರು ಚುನಾವಣೆ ಸಮಯದಲ್ಲಿ ಸಿಗುವಷ್ಟು ಬೇರೆಯ ಸಮಯದಲ್ಲಿ ಸಿಗುವುದಿಲ್ಲ. ಚುನಾವಣೆ ವೇಳೆ ಪುರದ ಮುಖ್ಯ ಬೀದಿಯಲ್ಲಿ ತೆರೆದುಕೊಳ್ಳುವ ಅವರ ಕಚೇರಿ, ಚುನಾವಣೆ ಮುಗಿದ ಮೇಲೆ ಅವರ ಮನೆಯ (ರಾಂಪುರ) ಸಮೀಪಕ್ಕೆ ಬದಲಾಗುತ್ತದೆ. ಮತದಾರರು ಶಾಸಕರನ್ನು ಭೇಟಿಯಾಗಬೇಕಾದರೆ ಕನಿಷ್ಠ 10 ಕಿ.ಮೀ ಕ್ರಮಿಸಬೇಕಾಗುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಅನುದಾನದಲ್ಲಿ ಸಿಂಹಪಾಲು: ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಶೇ.60ರಷ್ಟು ಮೊತ್ತ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳ ಪಾಲಾಗಿತ್ತು. ಇದರಲ್ಲಿ ಸಿದ್ದರಾಮಯ್ಯ ಅವರ ಆಪ್ತರ (ಬೈರತಿ ಬಸವರಾಜು, ಮುನಿರಾಜು ಮತ್ತು ಎಸ್.ಟಿ.ಸೋಮಶೇಖರ್) ಕ್ಷೇತ್ರಗಳಿಗೇ ಶೇ.20ರಷ್ಟು ಅನುದಾನ ನೀಡಲಾಗಿತ್ತು.
“ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶ ಮತ್ತು 110 ಹಳ್ಳಿಗಳು ನಮ್ಮ ಕ್ಷೇತ್ರದಲ್ಲಿವೆ. ಇಲ್ಲಿ ಮೂಲ ಸೌಕರ್ಯವೇ ಇಲ್ಲ. ಜನರಿಗೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಹೆಚ್ಚಿನ ಅನುದಾನಬಿಡುಗಡೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಸಿಂಹಪಾಲು ಪಡೆದ ಶಾಸಕರು ಪ್ರಶ್ನಿಸಿದ್ದರು.
ನಮ್ಮ ದುಡ್ಡಿನಲ್ಲಿ ಅವರು ಮಜಾ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಿಕೊಳ್ಳೋಣ?-ಸುಧಾ, ಗೃಹಿಣಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವುದ ಬಿಟ್ಟು, ಹೋಟೆಲ್‌ಗಳಲ್ಲಿ ಕುಳಿತುಕೊಳ್ಳುವುದೇಕೆ?
-ಷಣ್ಮುಗಪ್ಪ, ಕ್ಷೇತ್ರದ ನಿವಾಸಿ *** ನೀರು ಕೊಡುತ್ತೇನೆಂದ ಶಾಸಕ ನಾಪತ್ತೆ!
ಯಶವಂತಪುರ ವಿಧಾನಸಭಾ ಕ್ಷೇತ್ರ: ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ತೆರಳಿ ರಾಜಕೀಯ ಆಪರೇಷನ್ ಮಾಡುತ್ತಿದ್ದರೆ, ಇತ್ತ ಅವರ ಕ್ಷೇತ್ರದ ಬಹುತೇಕ ಭಾಗದಲ್ಲಿ ಮೂಲ ಸೌಕರ್ಯವಿಲ್ಲದೆ, ಜನ ಕುಡಿಯುವ ನೀರಿಗೂ ಪರದಾಟ ನಡೆಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಬಹುತೇಕ ಭಾಗಗಳು ನಗರದ ಹೊರಭಾಗವೆಂದು ಗುರುತಿಸಿಕೊಂಡಿದ್ದು, ನೀರಿನ ಸಮರ್ಪಕ ಪೂರೈಕೆ ಆಶ್ವಾಸನೆ ಕೊಟ್ಟು ಸೋಮಶೇಖರ್ ಆಯ್ಕೆಯಾಗಿದ್ದರು. ಅಧಿಕಾರ ಬಂದು ಒಂದೂವರೆ ವರ್ಷ ಕಳೆದರೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದೇ ಈಗ ವಾರದಿಂದ ದೂರದ ಮುಂಬೈನಲ್ಲಿ ಕುಳಿತಿರುವುದು ಮತದಾರರ ಕೆಂಗಣ್ಣಿಗೆ ಗುರಿಯಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಸದ್ಯ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ, ಇದ್ದ ಕೊಳವೆ ಬಾವಿಗಳು ಕೈಗೊಟ್ಟು ಜನ ಟ್ಯಾಂಕರ್ ನೀರಿನ ಮೊರೆಹೋಗಿದ್ದು, ತಮಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡದ ಬಿಬಿಎಂಪಿ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಮಸ್ಯೆಗಳಿಗೆ ಕಿವಿಗೊಡುವವರಿಲ್ಲ: ಒಟ್ಟು ಕ್ಷೇತ್ರದ ಜನಸಂಖ್ಯೆ 6.3 ಲಕ್ಷ ಆಗಿದ್ದು, 4.7 ಮತದಾರರಿದ್ದಾರೆ. 5 ವಾರ್ಡ್, 13 ಗ್ರಾಮ ಪಂಚಾಯಿತಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ ಹಿಂದೆ ಶಾಸಕರಿದ್ದಾಗ ವಾರಕ್ಕೆ ನಾಲ್ಕು ದಿನ ಹರೋಹಳ್ಳಿಯ ಭಾರತ್ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಜನರಿಂದ ಮನವಿ ಸ್ವೀಕರಿಸುತ್ತಿದ್ದರು. ದಿನಕ್ಕೆ 100ಕ್ಕೂ ಹೆಚ್ಚು ಸಾರ್ವಜನಿಕರು ದೂರು, ಮನವಿ ಪತ್ರ ನೀಡುವ ಜತೆಗೆ ಶಾಸಕರೊಟ್ಟಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಶಾಸಕರು ರಾಜೀನಾಮೆ ನೀಡಿ, ಮುಂಬೈ ಸೇರಿದ ಬೆನ್ನಲ್ಲೆ ಕಳೆದ ಒಂದು ವಾರದಿಂದ ಈ ಪ್ರಕ್ರಿಯೆ ನಡೆದಿಲ್ಲ. ಸದ್ಯ ಶಾಸಕರ ಪುತ್ರ ಹಾಗೂ ಸಹೋದರ ಕ್ಷೇತ್ರದ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕಚೇರಿಯಲ್ಲಿ ಆಪ್ತ ಸಹಾಯಕ ಸಾರ್ವಜನಿಕರ ದೂರು, ಮನವಿ ಪತ್ರ ಸ್ವೀಕರಿಸಿ ಶಾಸಕರ ಗಮನಕ್ಕೆ ತರುತ್ತೇವೆ ಎಂದು ಹೇಳಿ ಕಳಿಸುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ನಡೆಯುತ್ತಿದ್ದ ಕುಡಿಯುವ ನೀರು, ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ನಡುವೆ ಶಾಸಕರು ದೂರದ ಮುಂಬೈನಲ್ಲಿ ಕುಳಿತರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಬೇಕು ಎಂದು ಮತದಾರರು ಎಂದು ಪ್ರಶ್ನಿಸುತ್ತಿದ್ದಾರೆ. ಶಾಸಕರು ಕಚೇರಿಗೆ ಮಾತ್ರ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆ ಕೇಳುತ್ತಿರಲಿಲ್ಲ ಹಾಗೂ ತಮಗೆ ಹೆಚ್ಚು ಮತ ಬಂದ ವಾರ್ಡ್‌ಗಳಲ್ಲಿ ಮಾತ್ರ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಮತದಾರರು ಆರೋಪಿಸುತ್ತಾರೆ. ಮತದಾರರ ಸಮಸ್ಯೆಗಳು
-ಕ್ಷೇತ್ರದ ಬಹುತೇಕ ಭಾಗಗಳು ನಗರದ ಹೊರಭಾಗವೆಂದು ಗುರುತಿಸಿಕೊಂಡಿದ್ದು, ಸದ್ಯ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಹೇರೊಹಳ್ಳಿ, ವಿದ್ಯಾಮಾನ್‌ನಗರ, ಉಲ್ಲಾಳು, ದೊಡ್ಡಬಿದರುಕಲ್ಲು ವಾರ್ಡ್‌ಗಳನ್ನು ಸೇರಿದಂತೆ 13 ಗ್ರಾಮಪಂಚಾಯ್ತಿ ಪೈಕಿ 10ಕ್ಕೂ ಹೆಚ್ಚು ಕಡೆ ನೀರಿನ ಸಮಸ್ಯೆ ಇದೆ. ಇಂದಿಗೂ ಈ ಭಾಗದಲ್ಲಿ ಜನ ಟ್ಯಾಂಕರ್ ನೀರನ್ನು ಅವಲಂಭಿಸಿದ್ದಾರೆ. -110 ಹಳ್ಳಿಗಳಿಗೆ ಕುಡಿಯುವ ನೀರು ಹರಿಸುವ ಜಲಮಂಡಳಿಯ ಬಹುತೇಕ 20 ಕ್ಕೂ ಹೆಚ್ಚು ಹಳ್ಳಿಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. -ನೂತನವಾಗಿ ನಿರ್ಮಾಣವಾಗಿರುವ ಭಾರತ್ ಬಡಾವಣೆ 1 ಮತ್ತು 2, ತುಂಗಾ ಬಡಾವಣೆ, ವಿನಾಯಕ ಬಡಾವಣೆ, ವೆಂಕಟೇಶ್ವರ ಬಡಾವಣೆ, ಸಿಂಡಿಕೇಟ್ ಬಡಾವಣೆಯಂತಹ ಕುಡಿಯುವ ನೀರು ಹಾಗೂ ತ್ಯಾಜ್ಯ ಸಂಪರ್ಕ ಲಭ್ಯವಿಲ್ಲ ಇಂದಿಗೂ ಪರದಾಡುತ್ತಿದ್ದಾರೆ. ಇಲ್ಲಿ ಜಲಮಂಡಳಿ ಮಾರ್ಗವಿದ್ದರೂ, ಬಿಡಿಎ ಸಿದ್ಧಗೊಳಿಸಿದ ಬಡಾವಣೆಗಳು ಎಂದು ಈವೆಗೂ ಜಲಮಂಡಳಿ ಸಂಪರ್ಕ ನೀಡಿಲ್ಲ. -ನಗರದಲ್ಲಿ ನೀರಿನ ಬವಣೆ ಇರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಮಾಫಿಯಾ ನಡೆಯುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ 800 ರೂ. ಕೇಳುತ್ತಿದ್ದಾರೆ. ಭಾರತ್ ಬಡಾವಣೆಯಲ್ಲಿ ಶಾಸಕರ ಕಚೇರಿ ಇದೆ. ಆದರೆ, ಇಂದಿಗೂ ಬಡಾವಣೆ ಜನರಿಗೆ ಜಲಮಂಡಳಿ ನೀರು ನೀಡಿಲ್ಲ. ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದೇವೆ. ಈ ಕುರಿತು ಒಂದು ವರ್ಷದಿಂದ ಶಾಸಕ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
-ಸಿದ್ದಯ್ಯ, ಭಾರತ್ ಬಡಾವಣೆ ನಿವಾಸಿ ಚುನಾವಣೆ ವೇಳೆ ಕ್ಷೇತ್ರಕ್ಕೆ ಬಂದು, ಸಮಸ್ಯೆ ಕೇಳಿದ್ದ ಶಾಸಕರು, ಗೆದ್ದ ಮೇಲೆ ಇತ್ತ ತಲೆಹಾಕಿಲ್ಲ. ವರ್ಷದ ಬಳಿಕ ನೀರಿನ ಸಮಸ್ಯೆ ಹೇಳಲು ಭೇಟಿಯಾದರೆ, ನೀವು ಬಿಜೆಪಿ ಮತದಾರರು ಎಂದಿದ್ದರು. ಈಗ ಅವರೇ ಬಿಜೆಪಿ ಸೇರಲು ಮುಂದಾಗಿರುವುದು ಕೀಳು ಮಟ್ಟದ ರಾಜಕೀಯ ನಡೆಯಾಗಿದೆ.
-ರವೀಂದ್ರ, ಏರೋಹಳ್ಳಿ ನಿವಾಸಿ ನಮಗೆ ಕುಡಿಯುವ ನೀರಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ. ಜಲಮಂಡಳಿ ಜತೆ ಮಾತುಕತೆ ಮಾಡಿ ಸೂಕ್ತ ಯೋಜನೆ ರೂಪಿಸಬೇಕಾದ ಶಾಸಕರೇ ಮುಂಬೈನಲ್ಲಿ ಕುಳಿತಿದ್ದರೆ. ಇನ್ನು ಅವರು ರಾಜೀನಾಮೆ ನೀಡಿ ಮತ್ತೆ ಚುನಾವಣೆ ನಡೆದರೆ ನಮ್ಮ ತೆರಿಗೆ ಹಣವೇ ಪೋಲಾಗುತ್ತದೆ.
-ಆನಂದ, ವೆಂಕಟೇಶ್ವರ ಬಡಾವಣೆ ನಿವಾಸಿ *** ಅಭಿವೃದ್ಧಿಗೆ ಹಿನ್ನಡೆ ತಂದ “ಮುನಿ’ಸು
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ: ನಗರದ ಪ್ರತಿಷ್ಠಿತ ಬಡಾವಣೆಗಳನ್ನು ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಅತೃಪ್ತ ಸಾಲಿಗೆ ಸೇರಿದ್ದು, ಅವರ ಈ ನಡೆಯಿಂದ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕ ಮುನಿರತ್ನ ಅವರ ಹೆಸರು ಮುಂಚೂಣಿಯಲ್ಲಿದೆ. ಹಿಂದಿನಿಂದಲೂ ಕ್ಷೇತ್ರದ ಜನರೊಂದಿಗೆ ಸಾಕಷ್ಟು ಒಡನಾಟವನ್ನು ಹೊಂದಿದ್ದು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯ ಕ್ಷೇತ್ರದ ಮತದಾರರಿಂದ ವ್ಯಕ್ತವಾಗುತ್ತಿತ್ತು. ಆದರೆ, ಸದ್ಯ ರಾಜಕೀಯ ಕಾರಣಕ್ಕೆ ತಮ್ಮ ಕ್ಷೇತ್ರದಿಂದ ದೂರಾಗಿದ್ದು, ಕ್ಷೇತ್ರದ ಮತದಾರರ ಅಹವಾಲು ಕೇಳುವವರಿಲ್ಲದಂತಾಗಿದೆ. ಶಾಸಕರಿದ್ದ ಸಂದರ್ಭದಲ್ಲಿ ವೈಯಾಲಿಕಾವಲ್ ಬಳಿ ಇರುವ ಶಾಸಕರ ಕಚೇರಿಗೆ ನಿತ್ಯ 200ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಸಮಸ್ಯೆಗಳನ್ನು ಶಾಸಕ ಮುಂದಿಡುತ್ತಿದ್ದರು. ಸಂಬಂಧಪಟ್ಟ ಕಾರ್ಪೊರೇಟರ್, ಅಧಿಕಾರಿಗಳು, ಗುತ್ತಿದಾರರಗಳಿಗೆ ಕೂಡಲೇ ಸಂಪರ್ಕಿಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಸದ್ಯ ರಾಜಕೀಯ ನಡೆಯಿಂದ ಕ್ಷೇತ್ರದಿಂದ ಮುನಿರತ್ನ ದೂರ ಉಳಿದಿದ್ದು, ಅವರ ಸಂಬಂಧಿಯೊಬ್ಬರು ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಗೆ ಹಿನ್ನೆಡೆ: ಒಂದು ವಾರದ ರಾಜಕೀಯ ಅತಂತ್ರದಿಂದ ರಾಜರಾಜೇಶ್ವರಿ ನಗರದ ವಿವಿಧ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಜೆ.ಪಿ.ಪಾರ್ಕ್, ಲಗ್ಗೆರೆ, ನಾಗರಬಾವಿಯಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಗಳು ಇನ್ನು ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಕ್ಷೇತ್ರದ ಬಹುದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ಮುಕ್ತಿಗೆ ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರದ ಗೇಟ್ ಸೇರಿದಂತೆ ವಿವಿಧೆಡೆ ಕೆಳಸೇತುವೆ, ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಿರುವ ಯೋಜನೆಗಗಳು ಬಾಕಿ ಉಳಿದಿವೆ. ಶಾಸಕರು ಕ್ಷೇತ್ರಕ್ಕೆ ಆಗಮಿಸದ ಹಿನ್ನೆಲೆ ಕೆಲ ಕಾಮಗಾರಿಗಳು ಕಾರ್ಯಾದೇಶವಿಲ್ಲದಿದ್ದರೂ ನಡೆಯುತ್ತಿವೆ. ಈ ಕುರಿತು ಪ್ರಶ್ನಿಸಿದರೆ ಶಾಸಕ ಹೆಸರು ಹೇಳುತ್ತಾರೆ ಎಂದು ಸ್ಥಳಿಯ ಕಾರ್ಪೋರೇಟರ್‌ಗಳು ಆರೋಪಿಸುತ್ತಿದ್ದಾರೆ. ಮುನಿರತ್ನ ಅವರೇ ಖುದ್ದು ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಕೆಲಸ ಮಾಡಬೇಕು. ಅವರು ರಾಜೀನಾಮೆ ನೀಡಿದ್ದರೂ ಅವರ ಹೆಸರಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಹೊಸ ಯೋಜನೆಯ ಕಾಮಗಾರಿಗಳು ಕಾರ್ಯಾದೇಶ ಇಲ್ಲದೇ ನಡೆಯುತ್ತಿವೆ. ಇದರಿಂದ ಕ್ಷೇತ್ರದಲ್ಲಿ ಗೊಂದಲ ನಿರ್ಮಾಣವಾಗಿದೆ.
-ಹೆಸರುಬೇಡ, ಯಶವಂತಪುರ ನಿವಾಸಿ *** ಮಳೆ ಬಂದರೆ ಭಯ ಬೀಳುವ ಜನ
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ : ರಾಜಧಾನಿ ಜನ ಭಯ ಬೀಳುವುದು ಮಳೆಯಿಂದ ಸೃಷ್ಟಿಯಾಗುವ ಅನಾಹುತಗಳ ನೆನೆದು. ನಗರದಲ್ಲಿ ಸಣ್ಣ ಮಳೆಯಾದರೂ ತಗ್ಗುಪ್ರದೇಶಗಳಿಗೆ ನೀರು ನುಗ್ಗುತ್ತದೆ. ಆದರೆ, ಈ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿರುವುದು ಅಷ್ಟಕಷ್ಟೇ. ಶಾಸಕ ಕೆ.ಗೋಪಾಲಯ್ಯ ಪ್ರತಿನಿಧಿಸುವ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕ್ಷೇತ್ರದ ಬಹುತೇಕ ಬಡಾವಣೆಗಳು ತಗ್ಗು ಪ್ರದೇಶದಲ್ಲಿದ್ದು, ಮಳೆ ಬಂದರೆ ರಾಜ ಕಾಲುವೆ ಮತ್ತು ಒಳಚರಂಡಿ ನೀರು ಮನೆ ಸೇರಿಕೊಳ್ಳುತ್ತದೆ. ಈ ನೀರು ತೆಗೆಯುವಷ್ಟರಲ್ಲಿ ಜನ ಹೈರಾಣಾಗುತ್ತಾರೆ. ರಾಜಕಾಲುವೆಗಳ ತಡೆಗೋಡೆ ಎತ್ತರಿಸದ ಕಾರಣ, ಜನ ಜೀವ ಕೈಯಲ್ಲಿ ಹಿಡಿದೇ ದಿನ ದೂಡುತ್ತಾರೆ. ವಿದ್ಯುತ್ ತಂತಿ ಸಮಸ್ಯೆ: ಬಹುತೇಕ ರಸ್ತೆಗಳಲ್ಲಿ ವಿದ್ಯುತ್ ತಂತಿ ಕೈಗೆಟುವಂತಿದೆ. ಇದನ್ನು ಎತ್ತರಿಸುವ ಕೆಲಸ ಆಗಬೇಕಿದೆ. ವಿದ್ಯುತ್ ತಂತಿ ಸ್ಪರ್ಶದಿಂದ ಸರಣಿ ದುರಂತಗಳು ಸಂಭವಿಸಿದ ನಂತರವೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಂದಿನಿ ಲೇಔಟ್ ಸೆಂಟ್ರಲ್ (ಕಮಲಮ್ಮನ ಗುಂಡಿ) ಪಾರ್ಕ್‌ನ ಅಭಿವೃದ್ಧಿ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಇದೊಂದೇ ಆಟದ ಮೈದಾನವಿರುವುದರಿಂದ ಬಹುತೇಕ ಯುವಕರು ಆಟೋಟಕ್ಕೆ ಇದೇ ಮೈದಾನ ಅವಲಂಬಿಸಿದ್ದಾರೆ. ಮೈದಾನದ ಕಾಮಗಾರಿ ಒಂದು ವರ್ಷದಿಂದ ನಡೆಯುತ್ತಲೇ ಇದೆ! ಒಂದೆರಡು ದಿನ ವಿಶ್ರಾಂತಿ ಪಡೆಯಲಿ ಬಿಡಿ!: ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಶಾಸಕರು ರಾಜೀನಾಮೆ ನೀಡುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಶಾಸಕರು ಕೆಲಸ ಮಾಡಿದ್ದಾರೆ ಬಿಡಿ, ಉಳಿದವರಂತಲ್ಲ. ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳಲಿ ಹಾಗೂ ಅವರು ಪಕ್ಷದ ಬೆಂಬಲದಿಂದ ಗೆದ್ದಿಲ್ಲ ಸ್ವಂತ ಬೆಂಬಲದಿಂದ ಗೆದ್ದಿದ್ದಾರೆ ಎನ್ನುವ ಅಭಿಪ್ರಾಯಗಳನ್ನು ಇಲ್ಲಿನ ಜನ ವ್ಯಕ್ತಪಡಿಸಿದರು. ಇನ್ನೂ ಕೆಲವರು ಕೆಲಸ ಮಾಡಿದ್ದಾರೆ ಎಂದ ಮಾತ್ರಕ್ಕೆ ರೆಸ್ಟೋರೆಂಟ್‌ನಲ್ಲಿ ಮಜಾ ಮಾಡುವುದಕ್ಕೆ ನಮ್ಮ ಹಣ ಬೇಕಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಸಮಸ್ಯೆಗಳು ಕಡಿಮೆ. ಆದರೆ, ಅದನ್ನು ಶಾಸಕರು ಕಡೆಗಣಿಸುವಂತಿಲ್ಲ. ರಾಜಕಾಲುವೆ ಸಮಸ್ಯೆ ಮತ್ತು ರಸ್ತೆ ಗುಂಡಿಗಳ ಸಮಸ್ಯೆ ಇದೆ. ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಜಲ ಮರುಪೂರಣ ಆಗಬೇಕಿದೆ.
-ಆನಂದ್, ಸ್ಥಳೀಯ ನಿವಾಸಿ ರಸ್ತೆಗುಂಡಿ, ಚರಂಡಿ ಮತ್ತು ರಾಜಕಾಲುವೆ ಸಮಸ್ಯೆಗಳು ಇನ್ನೂ ಕಡಿಮೆಯಾಗಿಲ್ಲ. ಕ್ಷೇತ್ರದಲ್ಲಿ ಶೇ.40ರಷ್ಟು ಕೆಲಸಗಳಾಗಿವೆ. ಇಂತಹ ಸಮಯದಲ್ಲಿ ಶಾಸಕರು ಹೋಟೆಲ್‌ಗಳಲ್ಲಿ ಆಶ್ರಯ ಪಡೆದಿರುವುದು ಸರಿಯಲ್ಲ.
-ರಮೇಶ್, ಟೈಲರ್ * ಜಯಪ್ರಕಾಶ್ ಬಿರಾದಾರ್/ ಹಿತೇಶ್ ವೈ