ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಗಣನೀಯ ಪ್ರಮಾಣದಲ್ಲಿ ಒಳಹರಿವು ಏರಿಕೆಯಾಗಿದ್ದು, ಒಂದೇ ದಿನದಲ್ಲಿ 3 ಟಿಎಂಸಿ ಅಡಿಗೂ ಅಧಿ ಕ ನೀರು ಜಲಾಶಯಕ್ಕೆ ಹರಿದು ಬಂದಿದೆ. ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನಮಟ್ಟ 1633 ಅಡಿ ಇದ್ದು, ಜೂ.22ಕ್ಕೆ 1602.72 ಅಡಿಯಷ್ಟು ನೀರು ಭರ್ತಿಯಾಗಿದೆ.
ನೀರಿನ ಸಂಗ್ರಹ ಸಾಮರ್ಥ್ಯ, 100.855 ಟಿಎಂಸಿ ಅಡಿಯಷ್ಟಿದ್ದು, 23.226 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನ 6.923 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯದ ಒಳಹರಿವು 36,979 ಕ್ಯುಸೆಕ್‌ನಷ್ಟಿದ್ದು, ಕಳೆದ ಒಂದು ವಾರದಿಂದ ಜಲಾಶಯಕ್ಕೆ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ನೀರನ್ನೇ ನೆಚ್ಚಿರುವ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರಲ್ಲಿ ಆಶಾಭಾವ ಒಡಮೂಡಿದೆ. ಈ ಬಾರಿ ಎರಡು ಬೆಳೆಗಳಿಗೆ ನೀರು ದೊರೆಯುವ ಮುನ್ಸೂಚನೆಯೂ ದೊರೆತಿದೆ.
ರೈತರು ಈಗಾಗಲೇ ಭತ್ತಕ್ಕೆ ನಾಟಿ ಮಾಡಲು ಗದ್ದೆಗಳಲ್ಲಿ ಟ್ರಾಕ್ಟರ್‌ನಿಂದ ಉಳುಮೆ ಮಾಡಿಸುತ್ತಿದ್ದಾರೆ. ಗದ್ದೆ ಹದಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಮಣ್ಣಿನ ಫಲವತ್ತತೆಗಾಗಿ ಸಾವಯವ ಗೊಬ್ಬರ ಬಳಕೆ ಮಾಡುವ ಪರಿಪಾಠವನ್ನೂ ರೈತರು ಆರಂಭ ಮಾಡಿದ್ದಾರೆ. ನಿರಂತರ ಒಂದೇ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಸಿಯಲಿದೆ ಎಂದು ಕೃಷಿತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಕೊಟ್ಟಿಗೆ ಗೊಬ್ಬರವನ್ನೂ ರೈತರು ಗದ್ದೆಗೆ ಹಾಕುತ್ತಿದ್ದಾರೆ.
ಜೂನ್ ಹೊತ್ತಿಗೆ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಇದೇ ಮಾದರಿಯಲ್ಲಿ ಒಳ ಹರಿವು ಇದ್ದರೆ ಈ ಬಾರಿ ಡ್ಯಾಂ ಬಹುಬೇಗನೆ ಭರ್ತಿಯಾಗಲಿದೆ.