ಸಂಡೂರು: ರಾಷ್ಟ್ರೀಯ ಖನಿಜ ನಿಗಮ ದೋಣಿಮಲೈ ಸಂಡೂರು ಗಣಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಏಕಾಏಕಿ ತೆಗೆದುಹಾಕಿರುವುದು ಕಾರ್ಮಿಕ ನೀತಿಗೆ ವಿರುದ್ಧವಾದುದು. ತಕ್ಷಣ ಆ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಬಿ. ಗಂಗಪ್ಪ ಒತ್ತಾಯಿಸಿದರು.
ಅವರು ತಾಲೂಕಿನ ರಾಷ್ಟ್ರೀಯ ಖನಿಜ ನಿಗಮ ದೋಣಿಮಲೈ (ಎನ್‌ಎಂಡಿಸಿ) ಕಚೇರಿ ಮುಂಭಾಗದಲ್ಲಿ ಗಣಿ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಎನ್‌ಎಂಡಿಸಿ ಗಣಿಯಲ್ಲಿ ಗುತ್ತಿಗೆದಾರರ ಅಡಿಯಲ್ಲಿ 12 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಭದ್ರತಾ ವಿಭಾಗದ 74 ಸಿಬ್ಬಂದಿಯನ್ನು ತೆಗೆದು ಹಾಕಿದ್ದ ಪರಿಣಾಮ ಇಡೀ ಕುಟುಂಬ ಬೀದಿಪಾಲಾಗಿದೆ. ಅವರಿಗೆ ಅನ್ ಸ್ಕಿಲ್ಡ್ ಲೇಬರ್ ಎಂಬ ಹಣೆಪಟ್ಟಿ ಕಟ್ಟಿ ಕೆಲಸಕ್ಕೆ ನೇಮಿಸುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ತಕ್ಷಣ ಆ ಕುಟುಂಬಗಳ ರಕ್ಷಣೆ ಮಾಡಬೇಕು.
ಇವರ ಬದಲಿಗೆ ನಿವೃತ್ತಿ ಹೊಂದಿದ ಮಾಜಿ ಸೈನಿಕರುಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮ ನಿಜವಾಗಿಯೂ ಆಹಾರ ಬೇಕಾದ ಕಾರ್ಮಿಕರಿಗೆ ಆಹಾರವಿಲ್ಲದಂತೆ ಮಾಡಿ, ಹೊಟ್ಟೆ ತುಂಬಿದವರಿಗೆ ತುರುಕುವಂಥ ಕೆಲಸ ಮಾಡುತ್ತಿರುವ ಎನ್‌ಎಂಡಿಸಿ ಗಣಿ ಕಂಪನಿಗೆ ನಮ್ಮ ಧಿಕ್ಕಾರವಿದೆ ಎಂದರು. ಗಣಿಕಾರ್ಮಿಕ ಸಂಘದ ಗೌರವಾಧ್ಯಕ್ಷ ಎಂ. ಸತೀಶ್ ಮಾತನಾಡಿ, ಧೂಳು ಕುಡಿಯುವವರು ಸ್ಥಳೀಯರು. ಆದರೆ ಉದ್ಯೋಗ ಮಾತ್ರ ಬೇರೆ ರಾಜ್ಯದವರಿಗೆ, ಇದು ಯಾವ ನ್ಯಾಯ. ಸ್ಥಳೀಯರಾಗಿ 12 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಇವರನ್ನು ಯಾವುದೋ ನಿಯಮ ಹೇಳಿ ತೆಗೆದು ಹಾಕಿದ್ದಾರೆ.
ಇದರಿಂದ ಸ್ಥಳೀಯವಾಗಿ ಇರುವ ಗಣಿ ಕಂಪನಿ ಸ್ಥಳೀಯರಿಗೆ ಬಳಕೆ ಇಲ್ಲದಂಥ ದುಸ್ಥಿತಿ ಉಂಟಾಗಿದೆ. ಆದ್ದರಿಂದ ತಕ್ಷಣ ಸ್ಥಳೀಯರಿಗೆ ಅದ್ಯತೆ ನೀಡುವ ಮೂಲಕ ಮರು ನೇಮಕ ಮಾಡಬೇಕು. ಬೇರೆ ರಾಜ್ಯದ ಮಾಜಿ ಸೈನಿಕರ ಬಗ್ಗೆ ಗೌರವವಿದೆ. ಆದರೆ ಅವರಿಗೆ ಹತ್ತಾರು ಅವಕಾಶಗಳಿವೆ. ಈ 74 ನೌಕರರಿಗೆ ದಾರಿಕಾಣದಾಗಿದೆ.
ಆದ್ದರಿಂದ ಇವರಿಗೆ ಮರು ನೇಮಕ ಮಾಡಿಕೊಳ್ಳುವವರೆಗೂ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಟಿಯುಸಿಐ ಸಂಘಟನೆಯ ರಾಜ್ಯಾಧ್ಯಕ್ಷ ಕಾಂ.ಆರ್.ಮಾನಸಯ್ಯ, ಅಮೀರ್ ಅಲಿ, ಜಿ. ಅಮರೇಶ್, ಡಿ.ಕೆ.ಲಿಂಗಸ್‌ಗೂರು, ಚನ್ನಪ್ಪ ಕೊಟ್ರೆಶ್, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಬಿ. ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಅರ್. ವಿಜಯಕುಮಾರ್, ಖಜಾಂಚಿ ಪರ್ವತಗೌಡ, ಕಾರ್ಯದರ್ಶಿ ಜಂಬಪ್ಪ, ಎಸ್.ಎಂ.ರಾಜ, ಜಿ. ಶಿವಪ್ಪ, ಬಿ. ನಾಗರಾಜ, ಶ್ರೀನಿವಾಸ್, ಭರ¾ಪ್ಪ, ಟಿ.ಎಂ. ಕೊಟೇಪ್ಪ, ಬಸವರಾಜ ಇದ್ದರು.