Advertisement

ನಳಂದ ಶಾಲೆ ಬಂದ್‌; ವಿದ್ಯಾರ್ಥಿಗಳು ಅತಂತ್ರ

09:51 PM Jul 15, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ನಿರೀಕ್ಷಿತ ಆದಾಯ, ಕೋವಿಡ್‌ ಲಾಕ್‌ಡೌನ್‌ ಪರಿಣಾಮದಿಂದಾಗಿ ನಳಂದ ವಿದ್ಯಾನಿಕೇತನ ಶಾಲೆಯನ್ನು ಮುಚ್ಚಿರುವ ಶಾಲಾ ಆಡಳಿತ ಮಂಡಳಿಯವರು ಅದರಲ್ಲಿ ವ್ಯಾಸಂಗ ಮಾಡುತ್ತಿದ್ದ 120ಕ್ಕೂ ಹೆಚ್ಚು ಬಡ ಆರ್‌ಟಿಇ (ಕಡ್ಡಾಯ ಶಿಕ್ಷಣ ಕಾಯ್ದೆ) ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕತ್ತರಿ ಹಾಕಿದ್ದಾರೆ.

ನಗರದ ಸಂಗನಕಲ್ಲು ರಸ್ತೆಯಲ್ಲಿನ ನಳಂದ ವಿದ್ಯಾನಿಕೇತನ ಶಾಲೆ ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ವಿದ್ಯೆ ನೀಡಿದೆ. 1ರಿಂದ 10ನೇ ತರಗತಿವರೆಗೆ ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಈ ಶಾಲೆಯಲ್ಲಿ 120ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಆರ್‌ ಟಿಇ (ಕಡ್ಡಾಯ ಶಿಕ್ಷಣ ಕಾಯ್ದೆ)ಯಡಿ ವ್ಯಾಸಂಗ ಮಾಡುತ್ತಿದ್ದರು. 1ರಿಂದ 10ನೇ ತರಗತಿವರೆಗೆ ಇದ್ದ ಕಾರಣ ಸಮೀಪದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಆರ್‌ಟಿಇ ಅಡಿ ಸೇರಿಸಲು ಈ ಶಾಲೆಯನ್ನೇ ನೆಚ್ಚಿಕೊಂಡಿದ್ದರು.

ಆದರೆ, ಇದೀಗ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಕೋವಿಡ್‌ ಲಾಕ್‌ಡೌನ್‌ ಪರಿಣಾಮದ ನೆಪವೊಡ್ಡಿ ಪ್ರಸಕ್ತ ಸಾಲಿನಿಂದ ಶಾಲೆಯನ್ನು ಏಕಾಏಕಿ ಮುಚ್ಚಿರುವ ಶಾಲಾ ಆಡಳಿತ ಮಂಡಳಿ, ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನ್ಯಾಯವೆಸಗಿದೆ. ವಿದ್ಯಾರ್ಥಿ ಪೋಷಕರೊಬ್ಬರು ಹೇಳುವಂತೆ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಶಾಲೆಯನ್ನು ನಿರ್ವಹಿಸುವುದು ಆಡಳಿತ ಮಂಡಳಿಗೆ ಕಷ್ಟವಾಗುತ್ತಿದೆಯಂತೆ. ನಿರೀಕ್ಷಿತ ಪ್ರಮಾಣದಲ್ಲಿ ಆದಾಯವೂ ಬರುತ್ತಿಲ್ಲ. ಕಟ್ಟಡದ ಬಾಡಿಗೆಯನ್ನೂ ಹೆಚ್ಚಿಸಲಾಗಿದೆ.

ಸದ್ಯ ಇರುವ ವಿದ್ಯಾರ್ಥಿಗಳ ಶುಲ್ಕದಿಂದ ಬರುವ ಆದಾಯದಲ್ಲಿ ಈ ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುವುದು ಆಡಳಿತ ಮಂಡಳಿಗೆ ಕಷ್ಟವಾಗುತ್ತಿದೆಯಂತೆ. ಹಾಗಾಗಿ ಶಾಲೆಯನ್ನು ಮುಚ್ಚುತ್ತಿದ್ದು, ಪೋಷಕರು ಬೆಳಗ್ಗೆ 11 ಗಂಟೆಯೊಳಗೆ ಶಾಲೆಗೆ ಬಂದು ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗುವಂತೆ ಪೋಷಕರ ಮೊಬೈಲ್‌ಗೆ ಸಂದೇಶ ಕಳುಹಿಸಿದೆ. ಇದು ಆರ್‌ಟಿಇ ವಿದ್ಯಾರ್ಥಿಗಳ ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಈ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಶಾಲೆ ಮುಚ್ಚಲಾಗುತ್ತದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರ್ಥಿಕವಾಗಿ ಸದೃಢವುಳ್ಳ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆ ಶಾಲೆಗಳಲ್ಲಿ ಸೇರಿಸಿದ್ದಾರೆ. ಹಣವಿಲ್ಲದ ಕಾರಣ ನಮ್ಮ ಮಕ್ಕಳನ್ನು ಆರ್‌ಟಿಇ ಅಡಿ ಸೇರಿಸಿದ್ದೇವೆ. ಇದೀಗ ಶಾಲೆ ಮುಚ್ಚುವುದರಿಂದ ಅದೂ ಸಹ ಹೋಗಲಿದೆ. ಬೇರೆ ಪ್ರತಿಷ್ಠಿತ ಶಾಲೆಗಳಲ್ಲಿ ಕೇವಲ ಡೊನೇಷನ್‌ 20-30 ಸಾವಿರ ರೂ. ನೀಡಬೇಕು. ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದವರು ಬೇಸರ ವ್ಯಕ್ತಪಡಿಸುತ್ತಾರೆ. ಆರ್‌ಟಿಇ ಗೈಡ್‌ಲೈನ್‌ಗಳಲ್ಲಿ ಅವಕಾಶವಿಲ್ಲ: ಕಡ್ಡಾಯ ಶಿಕ್ಷಣ ಕಾಯ್ದೆಯಡಿ ದಾಖಲಾಗಿರುವ ಬಡ ವಿದ್ಯಾರ್ಥಿಗಳ ಶಾಲೆ ಬದಲಾವಣೆಗೆ ಅವಕಾಶವಿಲ್ಲ. 10ನೇ ತರಗತಿವರೆಗೂ ಮೂಲ ಶಾಲೆಯಲ್ಲೇ ವ್ಯಾಸಂಗ ಮುಂದುವರಿಸಬೇಕು.

ಒಂದು ವೇಳೆ ಬದಲಾವಣೆ ಮಾಡಿದಲ್ಲಿ ಮುಂದಿನ ಶಾಲೆಯಲ್ಲಿ ಆರ್‌ಟಿಇ ಮುಂದುವರೆಯಲು ಅವಕಾಶವಿಲ್ಲ. ಮೂಲ ಶಾಲೆಯಲ್ಲೇ ಮುಕ್ತಾಯವಾಗಲಿದೆ. ಒಂದುವೇಳೆ ಶಾಲೆಯನ್ನೂ ಮುಚ್ಚಿದರೂ ಸಹ ಆರ್‌ ಟಿಇ ವಿದ್ಯಾರ್ಥಿಗಳಿಗೆ ಪರ್ಯಾಯ ಶಾಲೆ ಸೇರಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಮಾರ್ಗಸೂಚಿಗಳು ಸಹ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಪ್ಪ ತಿಳಿಸಿದ್ದಾರೆ.

ನಿರೀಕ್ಷಿಸಿದಷ್ಟು ಆದಾಯ ಬರಲಿಲ್ಲ. ಕಟ್ಟಡದ ಬಾಡಿಗೆ ಹೆಚ್ಚಿದ ಹಿನ್ನೆಲೆಯಲ್ಲಿ ನಿರ್ವಹಣೆ ಮಾಡಲಾಗಿಲ್ಲ ಎಂದು ಶಾಲೆಯನ್ನೇ ಏಕಾಏಕಿ ಮುಚ್ಚಿದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಹೇಗೆ? ಅಂಥವರಿಗೆ ಸಂಬಂಧಪಟ್ಟ ಇಲಾಖೆಯವರು ಹೇಗೆ ಅನುಮತಿ ನೀಡಿದರು? ಎಂದು ಶಾಲೆಯ ಆರ್‌ಟಿಇ ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಆಗಲಿದೆಯೇ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next