ಕಂಪ್ಲಿ: ಕಂಪ್ಲಿ ಪುರಸಭೆ ವ್ಯಾಪ್ತಿಯ ಕುರುಗೋಡು ರಸ್ತೆಯ ಗೋಪಾಲಪುರಂ (ಕೊಟ್ಟಾಲ್) ಗ್ರಾಮದ ಹೊರವಲಯದಲ್ಲಿ ರಾಜ್ಯ ಹೆದ್ದಾರಿ 132ರ ಪಕ್ಕದಲ್ಲಿ ನೂತನ ಶ್ರೀ ಅಭಯಾಂಜಿನೇಯ ದೇವಸ್ಥಾನವನ್ನು ಸುಮಾರು 75 ಲಕ್ಷರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಭಾನುವಾರ ಶ್ರೀ ಅಭಯಾಂಜಿನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಲೋಕಾರ್ಪಣೆಗೊಳಿಸಲಾಯಿತು.
ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಿ. ರಾಮಾರಾವ್ ಅವರು ದೇವಸ್ಥಾನಕ್ಕೆ ಜಮೀನನ್ನು ದಾನವಾಗಿ ನೀಡಿದ್ದು, ಜಮೀನಿನಲ್ಲಿ ಕಲ್ಲಿನಿಂದ ಆಕರ್ಷಕವಾದ ನೂತನ ದೇವಲಾಯವನ್ನು ನಿರ್ಮಾಣ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ನೂತನ ದೇವಾಲಯವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಇದಕ್ಕೂ ಮುನ್ನ ಸುಮಾರು 4 ಅಡಿ ಎತ್ತರದ ಶ್ರೀ ಅಭಯಾಂಜಿನೇಯಸ್ವಾಮಿ ಮೂರ್ತಿಯನ್ನು ಗೋಪಾಲಪುರಂ ಗ್ರಾಮದಲ್ಲಿ ಸಕಲ ಮಂಗಳ ವಾದ್ಯಗಳು, ಮುತ್ತೆ$çದೆಯರ ಕಳಸ ಕನ್ನಡಿಗಳ ಮೂಲಕ ಮೆರವಣಿಗೆ ಮಾಡಿ ನಂತರ ದೇವಸ್ಥಾನದ ಆವರಣದಲ್ಲಿ ಧಾನ್ಯ ವಾಸ, ಜಲಾ ವಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಹೋಮ ಹವನಗಳನ್ನು ನಡೆಸಲಾಯಿತು.
ಭಾನುವಾರ ಬೆಳಗ್ಗೆ ಬ್ರಾಹ್ಮಿà ಮೂಹೂರ್ತದಲ್ಲಿ ಶ್ರೀ ಅಭಯಾಂಜಿನೇಯಸ್ವಾಮಿಯ ಪ್ರಾಣ ಪ್ರತಿಷ್ಠೆಯನ್ನು ಸಕಲ ಧಾರ್ಮಿಕ ವಿಧಾನಗಳ ಮೂಲಕ ನಡೆಸಲಾಯಿತು. ನಂತರ ದೇವಸ್ಥಾನ ಮುಂಭಾಗದಲ್ಲಿ ಬೃಹತ್ ಗರುಢ ಕಂಬವನ್ನು ಸ್ಥಾಪನೆ ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ನಂತರ ಕಂಪ್ಲಿ, ಗೋಪಾಲಪುರಂ, ನೆಲ್ಲುಡಿ ಸೇರಿದಂತೆ ವಿವಿಧ ಗ್ರಾಮಗಳ ಸಕಲ ಭಕ್ತರು ನೂತನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಕಲ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಪುರೋಹಿತರಾದ ಪಂಡಿತ್ ಸುಧಾಕರ್ ಶರ್ಮ ನೇತೃತ್ವದಲ್ಲಿ ಅನೇಕ ಪುರೋಹಿತರು ಮೂರು ದಿನಗಳಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಜಿ. ರಾಮಾರಾವ್, ಕೋನಂಕಿ ಪ್ರಭಾಕರ್, ಪಿ.ರವಿ, ನರಸಿಂಹಲು, ಕೆ. ಸುಧಾಕರ್, ಬಿ.ರವೀ,ಎಸ್.ವೆಂಕಟನಾರಾಯಣ, ಕೆ.ಮಂಜು, ಎಂ. ಮಲ್ಲಿಕಾರ್ಜುನ, ರಾಮುಡು, ಎನ್.ರಾಮಾಂಜಿನೇಯಲು ಇದ್ದರು.