Advertisement

20 ಸಾವಿರ ಸೊಳ್ಳೆ ಪರದೆ ವಿತರಣೆ ಗುರಿ

10:05 PM Jun 30, 2021 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಲೇರಿಯಾ ಪ್ರಕರಣಗಳು ವರದಿಯಾಗಿರುವ 27 ಗ್ರಾಮಗಳನ್ನು ಗುರುತಿಸಲಾಗಿದ್ದು, ಆ ಗ್ರಾಮದ 20 ಸಾವಿರ ಜನರಿಗೆ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ| ಮೋಹನಕುಮಾರಿ ತಿಳಿಸಿದರು.

Advertisement

ನಗರದ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಲೇರಿಯಾ ವಿರೋ ಧಿ ಮಾಸಾಚರಣೆ ನಿಮಿತ್ತ ಮಾಧ್ಯಮದವರಿಗಾಗಿ ಮಂಗಳವಾರ ಏರ್ಪಡಿಸಿದ್ದ ಮಲೇರಿಯಾ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕು ವ್ಯಾಪ್ತಿಯ ಕೆರೆ, ಕುಂಟೆ, ಬಾವಿ, ತೋಟದ ಕಾರಂಜಿಗಳು, ಸೇರಿದಂತೆ 197 ನಿಂತ ನೀರಿನ ತಾಣಗಳನ್ನು ಗುರುತಿಸಿದ್ದು, ಇವುಗಳ ಮೂಲಕ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯುವ ನಿಟ್ಟಿನಲ್ಲಿ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಮರಿಗಳನ್ನು ಆಹಾರದ ರೂಪದಲ್ಲಿ ತಿನ್ನುವ ಲಾರ್ವಾಹಾರಿ ಮೀನುಗಳಾದ ಗ್ಯಾಂಬೋಸಿಯಾ ಮತ್ತು ಗಪ್ಪಿ ಎಂಬ ಮೀನುಗಳನ್ನು ಬಿಡಲಾಗಿದೆ. ಈ ತಾಣಗಳ ಸುತ್ತಮುತ್ತ ವಾಸಿಸುವ ಸಾರ್ವಜನಿಕರಲ್ಲಿ ಯಾವುದೇ ರೋಗಗಳು ಕಾಣಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಆಯ್ದ ಪ್ರದೇಶದಲ್ಲಿ ಸಮೀಕ್ಷೆ ಮೂಲಕ ಮಲೇರಿಯಾ, ಡೆಂಘೀ ಹಾಗೂ ಚಿಕನ್‌ಗೂನ್ಯ ಕುರಿತು ಸಮೀಕ್ಷೆ ಮಾಡಲಾಗುತ್ತದೆ. ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.

ಬಳ್ಳಾರಿ ತಾಲೂಕಿನಲ್ಲಿ 139 ಹಳ್ಳಿಗಳು ಬರುತ್ತಿದ್ದು, ಈ ಹಳ್ಳಿಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರವಾರು ರೋಗವಾಹಕ ಆಶ್ರಿತ ರೋಗಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ಗ್ರಾಪಂಗಳಲ್ಲಿ ರಚಿಸಲಾಗಿರುವ ಟಾಸ್ಕ್ಫೋರ್ಸ್‌ನಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Advertisement

ಮಲೇರಿಯಾ ಮತ್ತು ಡೆಂಘೀ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಪಡೆದರೆ 14 ದಿನದೊಳಗೆ ರೋಗ ವಾಸಿಯಾಗುತ್ತದೆ. ಈ ಎಲ್ಲ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಇದರಿಂದ ರಕ್ಷಣೆಗಾಗಿ ಎಲ್ಲರು ಸೊಳ್ಳೆ ಪರದೆಯನ್ನು ಬಳಸಿ ಎಂದು ಅವರು ಹೇಳಿದರು.

ಡೆಂಘೀ ಪ್ರಕರಣಗಳು ಏರಿಳಿತ: ಬಳ್ಳಾರಿ ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳಲ್ಲಿ ಏರಿಳಿತ ಕಂಡು ಬಂದಿದೆ. ರೋಗದ ಕುರಿತು ಅರಿವು ಮೂಡಿಸಿದ ವರ್ಷ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. 2016ರಲ್ಲಿ 95, 2017ರಲ್ಲಿ 214, 2018 ರಲ್ಲಿ 40, 2019ರಲ್ಲಿ 132, 2020 ರಲ್ಲಿ 145, 2021 ರಲ್ಲಿ ಇಲ್ಲಿಯವರೆಗೆ 41 ಡೆಂಘೀ ಪ್ರಕರಣಗಳು ದಾಖಲಾಗಿವೆ.

ಮಲೇರಿಯಾ ಪ್ರಕರಣಗಳ ಸಂಖ್ಯೆ ಇಳಿಮುಖ: ಬಳ್ಳಾರಿ ತಾಲೂಕಿನ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. 2016 ರಲ್ಲಿ 20, 2017 ರಲ್ಲಿ 09, 2018ರಲ್ಲಿ 07, 2019 ರಲ್ಲಿ 04, 2020ರಲ್ಲಿ 00, 2021 ರಲ್ಲಿ 01 ಪ್ರಕರಣಗಳು ದಾಖಲಾಗಿವೆ.

ಚಿಕೂನ್‌ಗುನ್ಯಾದ ಬಗ್ಗೆ ಅರಿವು: ಚಿಕೂನ್‌ಗುನ್ಯಾದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ. 2016ರಲ್ಲಿ 6, 2017ರಲ್ಲಿ 5, 2018ರಲ್ಲಿ 10, 2019ರಲ್ಲಿ 5, 2020ರಲ್ಲಿ 74, 2021ರಲ್ಲಿ ಇಲ್ಲಿಯವರೆಗೆ 1 ಪ್ರಕರಣ ದಾಖಲಾಗಿದೆ. ತಾಲೂಕಿನಾದ್ಯಂತ ಇದರ ಕುರಿತು ಕಾಲಕಾಲಕ್ಕೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಮಲೇರಿಯಾ ರೋಗದ ಕನ್ಸಲ್ಟಂಟ್‌ ಪ್ರತಾಪ್‌ ಅವರು ಮಲೇರಿಯಾ ರೋಗದ ಗುಣಲಕ್ಷಣಗಳು, ಆರೋಗ್ಯ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು, ಸಮುದಾಯದ ಸಹಭಾಗಿತ್ವ ಕುರಿತು ವಿವರಿಸಿದರು. ಈ ಸಮಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್‌, ಚೇಳ್ಳಗುರ್ಕಿ ವೈದ್ಯಾಧಿ ಕಾರಿ ಡಾ| ಶಶಿಕುಮಾರ್‌ ಸೇರಿದಂತೆ ಆರೋಗ್ಯ ಇಲಾಖೆ ಅಧಿ ಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next