ಬಳ್ಳಾರಿ: ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 1,3,5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಸಂಘಟನೆಯಿಂದ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ವಿಎಸ್‌ಕೆ ವಿವಿಯು ಮುಂದಿನ ಜುಲೈ 19ರಿಂದ ಹಿಂದಿನ (1,3,5ನೇ) ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಾಗಿ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ, ಲಾಕ್‌ಡೌನ್ ಆಗಿದ್ದ ಸಮಯದಲ್ಲಿ, ಹಿಂದಿನ 1,3,5ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸದೆಯೇ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ (2, 4, 6) ಸೆಮಿಸ್ಟರ್‌ಗೆ ಕಳುಹಿಸಲಾಯಿತು. ಕಳೆದ 2 ತಿಂಗಳಿನಿಂದ ಪ್ರಸ್ತುತ ಸೆಮಿಸ್ಟರ್‌ಗಳ ಆನ್‌ಲೈನ್ ತರಗತಿಗಳು ಸಹ ನಡೆಯುತ್ತಿವೆ. ಸೆಮಿಸ್ಟರ್ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲವೆಂದು ಹಾಗೂ ಈಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆದ್ಯತೆ ಎಂದು ಹೇಳಿದ್ದಾಗಲೂ ವಿವಿಯು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಈಗ ಹಠಾತ್ತನೆ ಹಿಂದಿನ ಸೆಮಿಸ್ಟರಿನ ಪರೀಕ್ಷೆಯನ್ನು ಜುಲೈ ಕೊನೆ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಟೆಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನು ಮುಗಿಸುವುದು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಿದಂತಾಗುತ್ತದೆ. ಹಾಗಾಗಿ 1, 3, 5ನೇ ಸೆಮಿಸ್ಟರ್ ಪರಿಕ್ಷೆಗಳನ್ನು ನಡೆಸುವ ನಿರ್ಧಾರ ಕೈಬಿಟ್ಟು 2, 4, 6ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನಾದರು ಅಚ್ಚುಕಟ್ಟಾಗಿ ಮಾಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವ ಕುರಿತು ಎಐಡಿಎಸ್‌ಒ ರಾಜ್ಯ ಸಮಿತಿ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 45 ಸಾವಿರಕ್ಕೂ ಅಧಿ ಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೇ. 90.7 ರಷ್ಟು ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರಿನ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಒಕ್ಕೊರಲಿನಿಂದ ತಿಳಿಸಿದ್ದಾರೆ. ಮೇಲಾಗಿ ಎಐಡಿಎಸ್‌ಒ ಸಂಘಟನೆಯು ಅನೇಕ ಜನ ಶಿಕ್ಷಣ ತಜ್ಞರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೂ ಸಹ ವ್ಯಾಪಕ ಚರ್ಚೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ವಿವಿಯು ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ, ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನಗಳ ಬಗ್ಗೆ ಒಂದು ವೈಜ್ಞಾನಿಕ ನೀತಿ ರೂಪಿಸಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಎರಡು ಡೋಸ್ ಕೊರೊನಾ ಲಸಿಕೆ ನೀಡುವವರೆಗೂ ಆಫ್‌ಲೈನ್ ತರಗತಿ/ಪರೀಕ್ಷೆಗಳನ್ನು ನಡೆಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ವಿವಿ ಮೌಲ್ಯಮಾಪನಾ ಕುಲಸಚಿವರಿಗೆ ಮನವಿ ಸಲ್ಲಿಸಿದ್ದು, ಸ್ವೀಕರಿಸಿದ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದರು.
ನಂತರ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರಿಗೂ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ಜೆ.ಪಿ. ರವಿಕಿರಣ್, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯ ಕೆ.ಈರಣ್ಣ, ಶಾಂತಿ, ಕೆ.ಮಂಜುನಾಥ ಇದ್ದರು.