ಹೊಸಪೇಟೆ: ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲೊಂದಾದ ತುಂಗಭದ್ರಾ ಜಲಾಶಯಕ್ಕೆ ರಾಜ್ಯ ಸರಕಾರ ಹೆಚ್ಚಿನ ಭದ್ರತೆ ಒದಗಿಸಿದ್ದು, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 23 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತುಂಗಭದ್ರಾ ಮಂಡಳಿ ಕೆಎಸ್ ಐಎಸ್‌ಎಫ್ ಭದ್ರತೆ ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮೊದಲ ಹಂತವಾಗಿ ಪೊಲೀಸ್ ಇಲಾಖೆ 23 ಭದ್ರತಾ ಪೊಲೀಸರನ್ನು ನಿಯೋಜಿಸಿದೆ.
ಮೊದಲ ಹಂತವಾಗಿ 33 ಸಿಬ್ಬಂದಿ ನಿಯೋಜಿಸುವಂತೆ ಟಿಬಿ ಬೋರ್ಡ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರ ಮೊದಲ ಹಂತವಾಗಿ 23 ಭದ್ರತಾ ಸಿಬ್ಬಂದಿ ನಿಯೋಜಿಸಿ ಆದೇಶಿಸಿದೆ. ಎರಡನೇ ಹಂತದಲ್ಲಿ ಇನ್ನೂ 20 ಸಿಬ್ಬಂದಿ ಸೇವೆಗೆ ಹಾಜರಾಗಲಿದ್ದಾರೆ. ಜಲಾಶಯದ ಮುಖ್ಯದ್ವಾರ, ಮೇಲ್ಭಾಗದಲ್ಲಿರುವ ಅಣೆಕಟ್ಟೆ ಗೇಟ್, ಪವರ್‌ಹೌಸ್ ಬಳಿ ಮುಂತಾದ ಸ್ಥಳಗಳಲ್ಲಿ ಕೆಎಸ್ ಐಎಸ್‌ಎಫ್ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಮೊದಲು ಅಣೆಕಟ್ಟೆ ಎಡದಂಡೆ, ಬಲದಂಡೆ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು.
128 ಸಿಬ್ಬಂದಿ ಅವಶ್ಯ: ಅಣೆಕಟ್ಟೆಯ ಪ್ರವೇಶದ್ವಾರ ಸೇರಿ ಸುತ್ತಮುತ್ತ ಭದ್ರತೆಗೆ ಒಟ್ಟು 128 ಸಿಬ್ಬಂದಿ ಅವಶ್ಯಕತೆ ಇದೆ. ಇದರಲ್ಲಿ ಇಬ್ಬರು ಪಿಎಸ್ ಐಗಳಿರಲಿದ್ದಾರೆ. ಎಡದಂಡೆ ಕಾಲುವೆ, ಪವರ್ ಹೌಸ್ ಹತ್ತಿರ ಕೊಪ್ಪಳ ಡಿಆರ್, ಸಿವಿಲ್ ಪೊಲೀಸ್ ಹಾಗೂ ಖಾಸಗಿ ಭದ್ರತಾ ಸಂಸ್ಥೆಗಳ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬದಲಿಗೆ ಕೆಎಸ್‌ಐಎಸ್‌ಎಫ್ ಪೊಲೀಸ್ ಸಿಬ್ಬಂದಿ ನಿಯೋಜಿಸುವುದಾದರೆ ಒಟ್ಟು 128ಕ್ಕೂ ಹೆಚ್ಚು ಸಿಬ್ಬಂದಿ ಅವಶ್ಯಕತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಂದೂಕುಧಾರಿ ಸಿಬ್ಬಂದಿ : ಬಲದಂಡೆ ಕಾಲುವೆ ಕೊನೆ ಹಂತದವರೆಗೆ ಸಿಬ್ಬಂದಿ ವಾಹನದ ಮೂಲಕ ಸಂಚರಿಸಲಿದ್ದಾರೆ. ಈ ಮೊದಲಿದ್ದ ಸಿವಿಲ್ ಪೊಲೀಸರು ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಬಂದೂಕು ಹಿಡಿದು ಕರ್ತವ್ಯ ನಿರ್ವಹಿಸಲಿದ್ದಾರೆ. ಹೆಚ್ಚು ತರಬೇತಿ: ಈ ಸಿಬ್ಬಂದಿಗೆ ಸಿವಿಲ್, ಡಿಆರ್ ಪೊಲೀಸರಿಗೆ ನೀಡುವ ರೀತಿಯಲ್ಲಿಯೇ ಪ್ರಾಥಮಿಕ ತರಬೇತಿ ನೀಡಲಾಗಿರುತ್ತದೆ. ಆದರೆ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗಿರುತ್ತದೆ. ಹೀಗಾಗಿ ಬೃಹತ್ ಕೈಗಾರಿಕೆ, ಜಲಾಶಯ ಇಲ್ಲಿ ಬಿಗಿ ಭದ್ರತೆಗೆ ಈ ಸಿಬ್ಬಂದಿಗಳನ್ನು ಬಳಸಲಾಗುತ್ತದೆ.
ಅನುಮತಿ ಕಡ್ಡಾಯ : ಈ ಮೊದಲು ಪ್ರವೇಶ ದ್ವಾರದಿಂದ ಅಣೆಕಟ್ಟೆ ಬಳಿ ತೆರಳಲು ಟಿಬಿ ಬೋರ್ಡ್ ಅನುಮತಿ ಪಡೆದ ವಾಹನಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಭಧ್ರತಾ ಕಾರ್ಯವೈಖರಿ ಬದಲಾಗಿದೆ. ಅಣೆಕಟ್ಟೆ ಬಳಿ ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಕೆಎಸ್‌ಐಎಸ್ ಎಫ್ ಪಡೆಯ ಮುಖ್ಯಸ್ಥರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಹಲವು ಅಣೆಕಟ್ಟೆಗಳಲ್ಲಿದೆ ಪಡೆ : ಬೆಂಗಳೂರು, ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಕೆಎಸ್‌ಐಎಸ್‌ಎಫ್ ತುಕಡಿಗಳಿವೆ. ಈಗಾಗಲೇ ಮೈಸೂರಿನ ಕೆಆರ್‌ಎಸ್, ಕಬಿನಿ, ವಿಜಯಪುರದ ಆಲಮಟ್ಟಿ ಸೇರಿದಂತೆ ಹಾರಂಗಿ ಜಲಾಶಯಕ್ಕೆ ಕೆಎಸ್‌ಐಎಸ್‌ಎಫ್ ಭದ್ರತೆ ನೀಡಲಾಗಿದೆ.