Advertisement

ಎಚ್‌. ವಿಶ್ವನಾಥ್‌ ಪಕ್ಷ ಬಿಡಬಾರದು: ಈಶ್ವರಪ್ಪ

08:36 PM Jun 20, 2021 | Team Udayavani |

ಬಳ್ಳಾರಿ: ಎಚ್‌. ವಿಶ್ವನಾಥ್‌ ಅವರು ಬಿಜೆಪಿಯವರಲ್ವಾ, ಅವರು ಬಿಜೆಪಿಯಲ್ಲಿ ಇರುವುದಕ್ಕಾಗಿಯೇ ಎಂಎಲ್‌ಸಿ ಆಗಿದ್ದಾರೆ ಎನ್ನುವ ಮೂಲಕ ಎಂಎಲ್‌ಸಿ ಭಿಕ್ಷೆಯಲ್ಲ ಎಂದು ಹೇಳಿಕೆ ನೀಡಿರುವ ಎಚ್‌. ವಿಶ್ವನಾಥ್‌ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಲ್‌ಸಿ ಎಚ್‌.ವಿಶ್ವನಾಥ್‌ ಸೇರಿದಂತೆ 17 ಶಾಸಕರು ಬಿಜೆಪಿಗೆ ಬಂದಿದ್ದಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಯಿತು. ಅವರ ಅಸಮಾಧಾನ ಏನೇ ಇದ್ದರೂ ಅದನ್ನು ಪಕ್ಷದಲ್ಲಿ ಬಗೆಹರಿಸಿಕೊಳ್ಳಬಹುದು. ಬಿಜೆಪಿ ತೊರೆಯುವುದು ಬೇಡ. ವೈಯಕ್ತಿಕವಾಗಿ ವಿಶ್ವನಾಥ್‌ ಅವರನ್ನು ಭೇಟಿಯಾಗಿಲ್ಲ. ಪಕ್ಷ ಹೇಳಿದರೆ ಭೇಟಿಯಾಗುವೆ ಎಂದು ತಿಳಿಸಿದರು.

ರಾಜ್ಯಕ್ಕೆ ಭೇಟಿ ನೀಡಿದ್ದ ಅರುಣ್‌ ಸಿಂಗ್‌ ಅವರ ಮುಂದೆ ಅಸಮಾಧಾನ ಸೇರಿದಂತೆ ಹಲವು ವಿಷಯ ಚರ್ಚೆಯಾಗಿದೆ. ಎಲ್ಲ ಸಮಸ್ಯೆಗಳನ್ನು ಆಲಿಸಿದ ಅರುಣ್‌ಸಿಂಗ್‌ ಅವರು, ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆದರೂ ಮತ್ತೆ ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ಮಾತನಾಡುವುದು ಸರಿಯಲ್ಲ. ಹಾಗೆ ಮಾತನಾಡಿದರೆ ಹೈಕಮಾಂಡ್‌ ಶಿಸ್ತುಕ್ರಮ ತೆಗೆದುಕೊಳ್ಳಲಿದೆ. ಪಕ್ಷದಲ್ಲಿ ಇಷ್ಟು ದಿನ ಅಸಮಾಧಾನ ಹೊರ ಹಾಕಿರೋದು ಸಾಕು. ಯಾರು ಯಾರ ವಿರುದ್ಧ ದೂರು ಕೋಡೋದು ಬೇಡ. ವಿಶ್ವನಾಥ್‌, ರೇಣುಕಾಚಾರ್ಯ, ಅರವಿಂದ ಬೆಲ್ಲದ್‌ ಯಾರೂ ಕೂಡಾ ಬಿಜೆಪಿ ಬಿಡಲ್ಲ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ಕುರಿತು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬ್ರಹ್ಮ ಬಂದರೂ ಕಾಂಗ್ರೆಸ್‌ ಅ ಧಿಕಾರಕ್ಕೆ ಬರಲ್ಲ. ಅಲ್ಲಿ ಒಮ್ಮತವಿಲ್ಲ. ಅಷ್ಟಕ್ಕೂ ಕಾಂಗ್ರೆಸ್‌ನಲ್ಲಿ ಬಿ ಫಾರಂ ಕೊಡೋದು ಜಮೀರೋ ಅಥವಾ ಡಿಕೆಶಿನೋ, ಸಿದ್ದರಾಮಯ್ಯನವರೋ ತಿಳಿಯದಾಗಿದೆ ಎಂದು ಲೇವಡಿ ಮಾಡಿದರು.

Advertisement

ಪೋನ್‌ ಟ್ಯಾಪಿಂಗ್‌ ಬಗ್ಗೆ ಗೊಂದಲ ಬೇಡ. ತನಿಖೆ ಅದೇಶ ಮಾಡಲಾಗಿದೆ ಎಂದರು. ಇದಕ್ಕೂ ಮುನ್ನ ಈಶ್ವರಪ್ಪನವರು ಕುಟುಂಬ ಸಮೇತ ನಗರದ ಸಣ್ಣ ಮಾರುಕಟ್ಟೆ ಬಳಿಯ ಆರಾಧ್ಯ ದೇವತೆ ಚೌಡೇಶ್ವರಿ ದೇವಸ್ಥಾನದ ಶಿಲಾನ್ಯಾಸ ಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next