ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಳ್ಳಿಗಳಲ್ಲಿ ಹತ್ತಿ ಬಿತ್ತನೆಯ ಕಾರ್ಯ ನಡೆದಿದ್ದು, ತಾಲೂಕಿನಲ್ಲಿ ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ, ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಒಟ್ಟು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ.
ಈಗಾಗಲೇ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ತಾಲೂಕಿನ ಬಿ.ಎಂ. ಸೂಗೂರು, ರಾವಿಹಾಳು, ವತ್ತು ಮುರುವಣಿ, ಹಚ್ಚೊಳ್ಳಿ, ಕೆ. ಬೆಳಗಲ್ಲು, ರಾರಾವಿ, ವೆಂಕಟಾಪುರ, ಇಟಿಗಿಹಾಳು, ನಾಗರಹಾಳು, ಬಂಡ್ರಾಳು, ಬೀರಹಳ್ಳಿ, ನಾಡಂಗ, ಅಗಸನೂರು, ಅಲಬನೂರು, ಕುಡುದರಹಾಳು, ನಾಗಲಾಪುರ, ಕುರುವಳ್ಳಿ, ತೊಂಡೆಹಾಳು, ಟಿ. ರಾಂಪುರ, ಬಂಡ್ರಾಳ್ ಕ್ಯಾಂಪ್, ಕೆ.ಸೂಗೂರು, ಮುದೇನೂರು, ಹೀರೆಹಾಳು ಮುಂತಾದ ಗ್ರಾಮಗಳ ರೈತರು ಹತ್ತಿ ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ಈ ಭಾಗದ ರೈತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೀಮಾಂಧ್ರ ಪ್ರದೇಶದ ಆದೋನಿ ಪಟ್ಟಣದಲ್ಲಿರುವ ವಿವಿಧ ಬೀಜ ಮಾರಾಟದ ಅಂಗಡಿಗಳಿಂದ ಬಿತ್ತನೆಗೆ ಬೇಕಾದ ಹತ್ತಿ ಬೀಜವನ್ನು ಖರೀದಿಸುತ್ತಿದ್ದಾರೆ. ಸಿರುಗುಪ್ಪ ನಗರದಲ್ಲಿ ಹತ್ತಿ ಬೀಜ ಮಾರಾಟ ಮಾಡುವ ಅಂಗಡಿಗಳಿದ್ದರೂ ಗಡಿಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆದೋನಿಯಲ್ಲಿಯೇ ಹತ್ತಿ ಬೀಜ ಖರೀದಿಸುವುದು ಕಂಡುಬರುತ್ತಿದೆ.
ಕಳೆದ ವರ್ಷ ಆದೋನಿಯಿಂದ ಹತ್ತಿ ಬೀಜ ಖರೀದಿಸಿ ತಂದ ಕೆಲ ರೈತರ ಹೊಲದಲ್ಲಿ ಬಿತ್ತನೆ ಮಾಡಿದಾಗ ಉತ್ತಮ ಇಳುವರಿ ಬಂದಿರಲಿಲ್ಲ, ಇದಕ್ಕೆ ಮುಖ್ಯ ಕಾರಣ ಕಳಪೆ ಬೀಜ ಎಂದು ಹೇಳಲಾಗಿತ್ತು. ಆದರೂ ರೈತರು ಆದೋನಿಯಿಂದ ಹತ್ತಿ ಬೀಜ ಖರೀದಿಸುವುದನ್ನು ಮುಂದುವರಿಸಿದ್ದಾರೆ.
ಕೃಷಿ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಹತ್ತಿ ಬೀಜಗಳ ಖರೀದಿ ಬಗ್ಗೆ ಜಾಗೃತಿ ಮೂಡಿಸಬೇಕು. ನಕಲಿ ಬಿತ್ತನೆ ಬೀಜ ಮಾರಾಟ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೆಲ ನಕಲಿ ಕಂಪನಿ ಬೀಜ ಮಾರಾಟಗಾರರು ಹಳ್ಳಿಗಳಿಗೆ ತೆರಳಿ ಬೀಜ ಮಾರಾಟ ಮಾಡುವ ಅಪಾಯವಿದೆ.
ಅಲ್ಲದೆ ಕೆಲ ವ್ಯಕ್ತಿಗಳು ಲೂಜ್ ಹತ್ತಿ ಬೀಜಗಳನ್ನು ತೆಗೆದುಕೊಂಡು ಬಂದು ರೈತರಿಗೆ ಮಾರಾಟ ಮಾಡುವ ಸಂಚು ಮಾಡುತ್ತಿದ್ದಾರೆ. ಪ್ಯಾಕೆಟ್ ಮೇಲೆ ವಿವಿಧ ಕಂಪನಿ ಹತ್ತಿಬೀಜ ಎಂದು ನಮೂದಿಸಿ ಹತ್ತಿ ಬೀಜ ಮಾರಾಟ ಮಾಡುವ ಭೀತಿ ಇದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ವಾ. ಹುಲುಗಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.