Advertisement

ಜಿಂದಾಲ್‌ ಕೋವಿಡ್‌ ಆಸ್ಪತ್ರೆ ಸೇವೆ ಸ್ಥಗಿತ

10:15 PM Jun 17, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಗಣಿನಾಡು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸದ್ಯ ನಿಯಂತ್ರಣಕ್ಕೆ ಬರುತ್ತಿದ್ದು ಸೋಂಕು ಪತ್ತೆಯಾಗುವವರ ಸಂಖ್ಯೆಯೂ ಕಡಿಮೆಯಾಗಿದೆ. ತೋರಣಗಲ್‌ನಲ್ಲಿ ನಿರ್ಮಿಸಲಾಗಿರುವ ಸಾವಿರ ಬೆಡ್‌ ಗಳ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯೂ ರೋಗಿಗಳಿಲ್ಲದೇ ಬೆಡ್‌ಗಳು ಖಾಲಿಯಾಗಿದ್ದು ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದೆ.

ಕೋವಿಡ್‌ ಸೋಂಕು ಎರಡನೇ ಅಲೆಯು ರಾಜ್ಯ ಸೇರಿ ಗಣಿನಾಡು ಬಳ್ಳಾರಿ/ ವಿಜಯನಗರ ಜಿಲ್ಲೆಗಳು ತತ್ತರಿಸುವಂತೆ ಮಾಡಿತು. ಕಳೆದ ಮೇ ತಿಂಗಳ ಆರಂಭದಲ್ಲಿ ಪ್ರತಿದಿನ ಸೋಂಕು ಪತ್ತೆಯಾಗುವವರ ಸಂಖ್ಯೆ ಶೇ.46.96 ರಷ್ಟಿದ್ದು, ರಾಜ್ಯದಲ್ಲೇ ಬಳ್ಳಾರಿ/ವಿಜಯನಗರ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿದ್ದವು. ಪರಿಣಾಮ ಉಭಯ ಜಿಲ್ಲೆಗಳಲ್ಲಿ ಎಲ್ಲೆಡೆ ಬೆಡ್‌ಗಳ ಕೊರತೆ ಎದುರಾಯಿತು.

ಜತೆಗೆ ಆಕ್ಸಿಜನ್‌, ಸಿಲಿಂಡರ್‌ಗಳ ಕೊರತೆಯೂ ಕಾಡಿದ್ದು, ಸಮಯಕ್ಕೆ ಸರಿಯಾಗಿ ದೊರೆಯದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವಂತಾಯಿತು. ಈ ವೇಳೆ ಬೆಡ್‌ಗಳ ಜತೆಗೆ ಆಕ್ಸಿಜನ್‌ ಸಮಸ್ಯೆಯನ್ನು ನೀಗಿಸಲು ಮುಂದಾಗಿದ್ದ ಜಿಲ್ಲಾಡಳಿತ, ಜಿಂದಾಲ್‌ ಸಂಸ್ಥೆ ಸಹಯೋಗದಲ್ಲಿ ತೋರಣಗಲ್‌ನಲ್ಲಿ ಸಾವಿರಬೆಡ್‌ಗಳ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯನ್ನು ನಿರ್ಮಿಸುವುದರ ಜತೆಗೆ ಆಕ್ಸಿಜನ್‌ ಸೌಲಭ್ಯವನ್ನೂ ಕಲ್ಪಿಸಿತು.

15 ದಿನಗಳಲ್ಲಿ ನಿರ್ಮಾಣ: ಸಾವಿರ ಬೆಡ್‌ ಗಳ ಕೋವಿಡ್‌ ಆಸ್ಪತ್ರೆಯನ್ನು ಕೇವಲ 15 ದಿನಗಳಲ್ಲಿ ನಿರ್ಮಿಲಾಯಿತು. ಬೆಡ್‌ ಗಳಿಗೆ ತಕ್ಕಂತೆ ಆಕ್ಸಿಜನ್‌ ಸಾಮರ್ಥ್ಯವನ್ನೂ ಒದಗಿಸಿಕೊಡಲಾಯಿತು. ನಂತರ ಮೊದಲ ಹಂತದಲ್ಲಿ 211 ಆಕ್ಸಿಜನ್‌ ಬೆಡ್‌ ಗಳ ಒಂದು ವಿಭಾಗವನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದು, ಮೇ 19ರಂದು ಆರಂಭಿಸಲಾಯಿತು. ಅಂದಿನಿಂದ ಸತತವಾಗಿ 26 ದಿನಗಳು ಸೇವೆ ಸಲ್ಲಿಸಿದೆ. ಈ ನಡುವೆ 350 ಆಕ್ಸಿಜನ್‌ ಬೆಡ್‌ಗಳ ಎರಡನೇ ವಿಭಾಗವನ್ನೂ ಸಿದ್ಧಪಡಿಸಲಾಗಿದೆ.

Advertisement

ಆದರೆ ಅಷ್ಟರೊಳಗೆ ಉಭಯ ಜಿಲ್ಲೆಗಳಲ್ಲೂ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಪ್ರತಿದಿನ ಸೋಂಕು ಪತ್ತೆಯಾಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಶೇ. 46.92ರಷ್ಟು ಇದ್ದ ಪಾಸಿಟಿವಿಟಿ ಸದ್ಯ ಶೇ. 4ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ಗೆ ಮೀಸಲಿಟ್ಟ ಎಲ್ಲ ಆಸ್ಪತ್ರೆಗಳಲ್ಲೂ ಬೆಡ್‌ಗಳ ಕೊರತೆಯಿಲ್ಲದೇ ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ತೋರಣಗಲ್‌ನ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲ ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಖಾಲಿಯಾಗಿದ್ದು, ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಿ ಆಸ್ಪತ್ರೆಯನ್ನು ಮೀಸಲಿಡಲಾಗಿದೆ ಎಂದು ಆಸ್ಪತ್ರೆ ಅಧಿ ಕಾರಿ ಸಿದ್ದರಾಮಪ್ಪ ಚಳಕಾಪುರೆ ತಿಳಿಸಿದ್ದಾರೆ.

210 ದಾಖಲು; 54 ಹೆಚ್ಚುವರಿ ಚಿಕಿತ್ಸೆಗೆ ವರ್ಗಾವಣೆ: ಜಿಂದಾಲ್‌ ಬಳಿಯ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯಲ್ಲಿ 211 ಆಕ್ಸಿಜನ್‌ ಬೆಡ್‌ಗಳ ಮೊದಲ ವಿಂಗ್‌ನಲ್ಲಿ ಒಟ್ಟು 210 ಕೋವಿಡ್‌ ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದರು. ಈ ಪೈಕಿ 54 ಸೋಂಕಿತರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಜಿಂದಾಲ್‌ ಸಂಜೀವಿನಿ ಮತ್ತು ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದವರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಆಸ್ಪತ್ರೆ ನೋಡಲ್‌ ಅ ಧಿಕಾರಿ ಡಾ| ಬಿ. ದೇವಾನಂದ್‌ ತಿಳಿಸಿದ್ದಾರೆ.

260 ಸಿಬ್ಬಂದಿ ನಿಯೋಜನೆ: ತೋರಣಗಲ್ಲು ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಗಾಗಿ 260 ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಪೈಕಿ ತಜ್ಞವೈದ್ಯರು 14, ಎಂಬಿಬಿಎಸ್‌ ವೈದ್ಯರು 26, ಗ್ರೂಪ್‌ ಡಿ ಸಿಬ್ಬಂದಿ 100, ಪ್ಯಾರಾ ಮೆಡಿಕಲ್‌ 45, ಇನ್ನುಳಿದ ನರ್ಸ್‌ಗಳು ಸೇರಿ ಒಟ್ಟು 260 ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.

ಅವರೆಲ್ಲರನ್ನೂ ಬೇರೆ ಬೇರೆ ಆಸ್ಪತ್ರೆಗಳಿಗೆ ನಿಯೋಜಿಸಲಾಗಿದೆ. ಇದರಲ್ಲಿ 41 ನರ್ಸ್‌ಗಳನ್ನು ಬಳ್ಳಾರಿ ವಿಮ್ಸ್‌ ಸೇರಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಿರುಗುಪ್ಪ, ಹಡಗಲಿ, ಹರಪನಹಳ್ಳಿ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಿಗೆ ನಿಯೋಜಿಸಲಾಗಿದೆ. ಸೈಕಾಲಜಿ ಕೌನ್ಸಿಲರ್‌, ಲ್ಯಾಬ್‌ ಟೆಕ್ನಿಷಿಯನ್‌, ಫಾರ್ಮಾಸಿಸ್ಟ್‌, ಸ್ಟೋರ್‌ ಕೀಪರ್‌ಗಳನ್ನು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ನಿಯೋಜಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ತೋರಣಗಲ್ಲು ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯನ್ನು ಮೂರು ತಿಂಗಳ ಅವ ಧಿಗೆ ಮಾತ್ರ ಜಿಂದಾಲ್‌ ಸಂಸ್ಥೆಯವರು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಮೂರನೇ ಅಲೆಗೆ ಈಗಲೇ ಮುಂಜಾಗ್ರತೆ ವಹಿಸಿರುವ ಜಿಲ್ಲಾಡಳಿತ ಆಸ್ಪತ್ರೆಯನ್ನು ಸದ್ಯ ಮೀಸಲಿಟ್ಟಿದೆ. ಮುಂದಿನ ಡಿಸೆಂಬರ್‌ ತಿಂಗಳವರೆಗೆ ಇರುವಂತೆ ಜಿಂದಾಲ್‌ ಸಂಸ್ಥೆಗೆ ಪತ್ರ ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next