ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದ ಬಳಿಯಿರುವ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ರಾಜಸ್ಥಾನ ಮೂಲದ ಕುನ್ವಾರ್ ಸಿಂಗ್ ಅಲಿಯಾಸ್ ಕುಮಾರ್ ಸಿಂಗ್ (40) ಎಂಬ ಕಾರ್ಮಿಕ ಮೃತಪಟ್ಟಿದ್ದು, ಮೋಹನ್ ಪ್ರಸಾದ್ ಕುಸ್ಮಾ, ಸುಮನ್, ಜಿತೇಂದ್ರ, ದಿನೇಶ್ ಎಂಬುವವರು ಗಾಯಗೊಂಡಿದ್ದಾರೆ.
ತಾಲೂಕಿನ ಹಲಕುಂದಿ ಬಳಿಯ ವಿಆರ್‌ಕೆಪಿ ಸ್ಯಾಂಜ್ ಆ್ಯಂಡ್ ಪವರ್ ಪ್ಲಾಂಟ್ ಎಲ್ಎಲ್‌ಪಿ ಕಾರ್ಖಾನೆಯಲ್ಲಿ ಮೆಕಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಕುನ್ವಾರ್ ಸಿಂಗ್, ಕಳೆದ ಜು.12 ರಂದು ಕಬ್ಬಿಣದ ಹಾಳೆಗಳನ್ನು ವೆಲ್ಡಿಂಗ್ ಯಂತ್ರದಿಂದ ಕತ್ತರಿಸುವ ವೇಳೆ ಅಲ್ಲೇ ಇದ್ದ ಸಿಲಿಂಡರ್‌ಗೆ ಕಿಡಿ ತಾಗಿದೆ. ಆಗ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಕುನ್ವಾರ್ ಸಿಂಗ್ ಸೇರಿ ಐವರು ಗಾಯಗೊಂಡಿದ್ದಾರೆ.
ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ತಲೆಗೆ ತೀವ್ರವಾಗಿ ಗಾಯವಾಗಿದ್ದ ಕುನ್ವಾರ್ ಸಿಂಗ್‌ನನ್ನು ವಿಮ್ಸ್‌ಗೆ ದಾಖಲಿಸಿತ್ತಾದರೂ, ಜುಲೈ 17ರಂದು ಅಸುನೀಗಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಕುನ್ವಾರ್ ಸಿಂಗ್ ಪತ್ನಿ ಸರೋಜ್ ಸಿಂಗ್, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಪತಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಕಾರ್ಖಾನೆಯ ಸೂಪರ್‌ವೈಸರ್, ಜಾರ್ಖಂಡ್ ಮೂಲದ ಸುರಜಿತ್ ಮಹತೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.