ನಾಗಾರಾಧನೆ ಮಾಡಲು ಕುಕ್ಕೆ ಸುಬ್ರಹ್ಮಣ್ಯದಷ್ಟೇ ಪ್ರಭಾವಶಾಲಿಯಾದ ಇನ್ನೊಂದು ಸ್ಕಂಧ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಅದುವೆ ಬಳ್ಳಮಂಜ. ಮಂಗಳೂರಿಗೆ ಹೋಗುವ ದಾರಿಯಲ್ಲಿ ಎಂಟು ಕಿಲೋಮೀಟರ್ ಕ್ರಮಿಸಿದಾಗ ಮಡಂತ್ಯಾರ್ ಎಂಬ ಪೇಟೆ ಸಿಗುತ್ತದೆ. ಇಲ್ಲಿಂದ ಎಡಭಾಗಕ್ಕಿರುವ ದಾರಿಯಲ್ಲಿ ಮೂರು ಕಿ.ಮೀ ಸಾಗಿದಾಗ ಎಂಟು ಶತಮಾನಗಳ ಹಿಂದಿನ ಈ ಸ್ಥಳವನ್ನು ತಲಪಬಹುದು.
ಇಲ್ಲಿ ವಿರಾಜಮಾನನಾಗಿರುವ ಸುಬ್ರಹ್ಮಣ್ಯನಿಗೆ ಅನಂತೇಶ್ವರ ಎಂಬ ಹೆಸರಿದೆ. ಅದೊಂದು ಕಾಲದಲ್ಲಿ ಮಚ್ಚಿನ ಗ್ರಾಮಕ್ಕೆ ಸೇರಿದ ಈ ಊರಿನಲ್ಲಿ ದೇವಾಲಯ ಇರಲಿಲ್ಲ. ಮಂಗಳೂರಿನ ಸನಿಹದಲ್ಲಿ ಬ್ರಾಹ್ಮಣ ದಂಪತಿಗೆ ಮಕ್ಕಳಿರಲಿಲ್ಲ. ಸುಬ್ರಹ್ಮಣ್ಯನ ಆರಾಧನೆಯ ಫಲವಾಗಿ ಗೃಹಿಣಿಯು ಗರ್ಭವತಿಯಾದಳು. ನೀರು ತರಲು ಬಾವಿಗೆ ಹೋದಾಗ ಆಕೆ ಪ್ರಸವಿಸಿದ್ದು ಮೂರು ಹಾವಿನ ಮೊಟ್ಟೆಗಳನ್ನು ! ಈ ಮೊಟ್ಟೆಗಳನ್ನು ಒಂದು ಕುಡುಪಿ(ಬಿದಿರಿನ ಬುಟ್ಟಿ)ನೊಳಗಿರಿಸಿ ಮನೆಗೆ ತಂದಳು. ಸುಬ್ರಹ್ಮಣ್ಯನೇ ಈ ಮೂರು ರೂಪದಿಂದ ಅವತರಿಸಿರುವುದಾಗಿ ಅಶರೀರವಾಣಿ ನುಡಿಯಿತಂತೆ. ಮೂರು ರೂಪದ ದೇವರಿಗೆ ದೇವಾಲಯ ಕಟ್ಟಿಸಿ ಪೂಜೆಗೆ ವ್ಯವಸ್ಥೆಯಾಯಿತು. ಕುಡುಪಿ(ಬುಟ್ಟಿ)ನಲ್ಲಿ ದೇವರು ಅವತರಿಸಿದ ಊರಿಗೆ ಕುಡುಪು ಎಂಬ ಹೆಸರಾಯಿತು.
ಈ ಮೂವರಲ್ಲಿ ಒಬ್ಬನು ಅನಂತೇಶ್ವರ. ಪ್ರತಿ ವರ್ಷ ಜಾತ್ರೆಯ ದಿನ ರಾತ್ರಿ ದೇವಾಲಯದ ಒಳಾಂಗಣದಲ್ಲಿ ನಡೆಯುವ ಭೂತ ಬಲಿಯನ್ನು ಅರ್ಚಕ ವರ್ಗದವರ ಹೊರತು ಅನ್ಯರು ನೋಡುವಂತಿಲ್ಲ ಎಂಬ ನಿಬಂಧನೆ ಅದೊಮ್ಮೆ ಇತ್ತಂತೆ. ಆದರೂ ಒಬ್ಬ ಬ್ರಾಹ್ಮಣ ವಟು ಕುತೂಹಲದಿಂದ ಮರವೇರಿ ಕುಳಿತು ನೋಡಿದ. ಪರಿಣಾಮ ಅವನು ಅನಂತೇಶ್ವರನ ಉರಿಗಣ್ಣಿಗೆ ಸಿಲುಕಿ ಭಸ್ಮವಾದ. ಆನಂತರದಲ್ಲಿ, ಬ್ರಹ್ಮಹತ್ಯೆಯ ತಪ್ಪಿಗಾಗಿ ಅನಂತೇಶ್ವರನಿಗೇ ಗರ್ಭಗುಡಿಯೊಳಗೆ ಪ್ರವೇಶ ಸಿಗಲಿಲ್ಲ. ಅವನು ಸ್ವಂತ ನೆಲೆ ಹುಡುಕುತ್ತ ದೇವಾಲಯವಿಲ್ಲದ ಮಚ್ಚಿನ ಗ್ರಾಮಕ್ಕೆ ಬಂದ. ಬಿಲ್ಲವ ಮಳೆ ಸೇಂದಿ ಮಾರುತ್ತಿದ್ದ ಗಡಂಗಿನಲ್ಲಿ ಭತ್ತ ಅಳೆಯುತ್ತಿದ್ದ ಬಳ್ಳ ಎಂಬ ಅಳತೆಯ ಸಾಮಗ್ರಿಯ ಒಳಗೆ, ಹಳದಿ ಹೆಡೆ ತೂಗುತ್ತ ಕಾಣಿಸಿಕೊಂಡ. ಹೆಂಗಸು ಭಯಾಶ್ಚರ್ಯಗಳಿಂದ, “ಬಳ್ಳೊಡು ಮಂಜಲ್!’ ಎಂದು ತುಳುವಿನಲ್ಲಿ ಕೂಗಿಕೊಂಡಳು. ಬಳ್ಳದಲ್ಲಿ ಹಳದಿ ಎಂದು ಇದರರ್ಥ. ಹೀಗಾಗಿ ದೇವರ ಕ್ಷೇತ್ರಕ್ಕೆ ಬಳ್ಳಮಂಜ ಎಂಬ ಹೆಸರೇ ಬಂದಿತು ಎನ್ನುತ್ತದೆ ಇತಿಹಾಸ.
ದೈವ ಪ್ರೇರಣೆಯಂತೆ ಇಲ್ಲಿ ಅನಂತೇಶ್ವರ ದೇವಾಲಯ ನಿರ್ಮಾಣವಾಯಿತು. ಆಗ ಒಂದು ಪುರಾತನ ಶಿವ ಸನ್ನಿಧಿಯೂ ಗೋಚರಿಸಿ ಅನಂತೇಶ್ವರನ ಪಕ್ಕದಲ್ಲಿ ಶಿವನಿಗೂ ದೇಗುಲ ನಿರ್ಮಿಸಲಾಗಿದೆ. ಸ್ಕಂಧ ಷಷ್ಠಿಯಂದು ವೈಭವದ ಜಾತ್ರೆ ನೆರವೇರುತ್ತದೆ. ಆಗ ಗರುಡ ಪಕ್ಷಿ ಬಂದು ರಥವನ್ನು ಸುತ್ತುವರೆಯುವ ಅಪೂರ್ವ ದೃಶ್ಯವನ್ನು ಪ್ರತಿ ವರ್ಷವೂ ನೋಡಬಹುದು. ನಯನ ಮನೋಹರವಾದ ಬಲಿ ಉತ್ಸವವೂ ಇದೆ. ನಾಗರ ಪಂಚಮಿಯ ದಿನ ರಾಜ್ಯದಾದ್ಯಂತದಿಂದ ಬರುವ ಭಕ್ತರ ಸಂದಣಿ ಸೇರುತ್ತದೆ. ನಾಗದೋಷಕ್ಕೆ ಸಂಬಂಧಿಸಿದ ಆಶ್ಲೇಷಾ ಬಲಿ, ನಾಗಪ್ರತಿಷ್ಠೆಯಂತಹ ಎಲ್ಲ ವಿಧಿಗಳನ್ನೂ ಇಲ್ಲಿ ನೆರವೇರಿಸಬಹುದು. ದೇವರು ಉದ್ಭವಿಸಿದ ಸೇಂದಿ ಮಾರುವ ಜಾಗ ಮೂಲಸ್ಥಾನವೆನಿಸಿಕೊಂಡಿದ್ದು ಇಲ್ಲಿ ಆಳೆತ್ತರದ ಹುತ್ತವಿದೆ. ಇದಕ್ಕೆ ಗುಡಿ ಕಟ್ಟಿಸಿ ನಿತ್ಯವೂ ಪೂಜೆ ಮಾಡಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ ಈ ಹುತ್ತದ ಬಳಿ ವರ್ಷದ ನಿಗದಿತ ದಿನಗಳಲ್ಲಿ ಎಲೆ ಹಾಕದೆ ನೆಲದ ಮೇಲೆ ಅನ್ನ ಪ್ರಸಾದ ಸ್ವೀಕರಿಸುವ ವಿಶೇಷ ಹರಕೆ ಇದೆ.
ಏಪ್ರಿಲ್ ತಿಂಗಳ ಕೊನೆಗೆ ಇಲ್ಲಿಗೆ ಎರಡನೆಯ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನ ರಥವೆಳೆಯಲು ಮೂರು ಬೆತ್ತಗಳು ಬೇಕಾಗುತ್ತವೆ. ಸಮೀಪದ ಹಾಂತ್ರೆಲು ಎಂಬಲ್ಲಿ ಒಂದು ಹುತ್ತದಲ್ಲಿ ಮೂರೇ ಮೂರು ಬೆತ್ತಗಳು ಬೆಳೆಯುತ್ತವೆ. ಅದನ್ನು ಕಡಿದು ತಂದರೆ ಮುಂದಿನ ವರ್ಷಕ್ಕೆ ಮೂರು ಬೆತ್ತಗಳು ಮಾತ್ರ ಬೆಳೆದು ನಿಲ್ಲುತ್ತವೆ. ಸ್ವಾಮಿಯ ಬ್ರಹ್ಮಹತ್ಯಾ ದೋಷ ನಿವಾರಣೆಗೆ ವರ್ಷವೂ ಸಿಂಹಮಾಸದ ಎಲ್ಲ ದಿನಗಳಲ್ಲಿಯೂ ಇಲ್ಲಿ ಸಂತರ್ಪಣೆ ನಡೆದುಬಂದಿದೆ. ಪ್ರತಿ ವರ್ಷವೂ ದೇವಾಲಯದ ಮುಂದಿನ ಗದ್ದೆಯಲ್ಲಿ ನಡೆಯುವ ಕೋಣಗಳ ಓಟದ ಕಂಬಳವನ್ನು ದೇವರು ನೋಡುತ್ತ ಕುಳಿತುಕೊಳ್ಳುವನೆಂಬ ನಂಬುಗೆಯೂ ಇದೆ. ಯಾತ್ರಿಕರಿಗೆ ಬೇಕಾದ ವಸತಿಯ ಹೊರತು ಇನ್ನಿತರ ಎಲ್ಲ ವ್ಯವಸ್ಥೆಗಳೂ ಇರುವ ದೇವಾಲಯ ನಿತ್ಯ ಸಹಸ್ರಾರು ಭಕ್ತರನ್ನು ಬಳಿ ಕರೆಯುತ್ತಿದೆ.