ವರ್ಷಕ್ಕೆ ಒಂದು ಬಾರಿ ಹಿಂದೂ ನಮ್ಮೆಲ್ಲರ ಬೆಳಕಿನ ಕಲರವವನ್ನು ಮೂಡಿಸುವ ಹಬ್ಬವೇ ದೀಪಾವಳಿ.ಈ ಹಬ್ಬದ ಸಡಗರವು ಪ್ರತಿಯೊಬ್ಬರ ಮನೆಯ ಮುಂದೆ ಉರಿಯುವ ಹಣತೆ, ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಮುಂತಾದವುಗಳ ಮೂಲಕ ಪ್ರತಿಫಲನಗೊಳ್ಳುತ್ತದೆ. ಈ ಹಬ್ಬವನ್ನು ಹಲವು ಪುರಾಣದ ಕಾಲದ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸ ಸಮ್ಮಿಲನದ ದ್ಯೋತಕವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಮೊದಲನೆಯ ದಿನ ಎಣ್ಣೆಸ್ನಾನ ಮಾಡುವ ಸಂಪ್ರದಾಯವಿದ್ದು, ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತ ಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ವಿಶೇಷದ ದಿನ ಸ್ನಾನದ ಮನೆಯ ಕಡಾಯಿಯೊಳಗೆ ತುಂಬುವ ಸ್ನಾನದ ನೀರಿನಲ್ಲಿ ಗಂಗಾ ಮಾತೆ ಮತ್ತು ಎಣ್ಣೆಯಲ್ಲಿ ಧನಲಕ್ಷ್ಮೀ ಇರುತ್ತಾಳೆಂಬ ನಂಬಿಕೆ.
ಬಲಿಪಾಡ್ಯಮಿ:
ತುಳು ನಾಡಿನಲ್ಲಿ ದೀಪಾವಳಿಯಂದು ಆಚರಿಸಲಾಗುವ ಮತ್ತೂಂದು ವಿಶೇಷ ಆಚರಣೆಯೆಂದರೆ ಬಲಿಪಾಡ್ಯಮಿ. ವಿಷ್ಣುವು ವಾಮನನ ಅವತಾರವನ್ನು ಎತ್ತಿದ ಕಥೆಯ ಹಿನ್ನೆಲೆಯಲ್ಲಿ ಬಲಿಪಾಡ್ಯಮಿಯ ಹಬ್ಬ ನಡೆಯುತ್ತದೆ. ಅಂದು ಬೆಳಗ್ಗೆ ಗೋಪೂಜೆಯನ್ನು ಮಾಡಿ, ಸಂಜೆ ಮನೆಯ ತುಳಸಿ ಕಟ್ಟೆಯ ಮುಂದೆ ಬಲೀಂದ್ರನನ್ನು ಮಾಡಿಟ್ಟು ಷೋಡಶ ಉಪಾಚಾರಗಳಿಂದ ಪೂಜೆಯನ್ನು ಮಾಡಲಾಗುತ್ತದೆ. ಆ ದಿನ ಬಲೀಂದ್ರನು ಭೂಲೋಕಕ್ಕೆ ಬಂದು ಮೂರು ಮೂಕ್ಕಾಲು ಘಳಿಗೆ ಇರುವನೆಂಬುದು ತುಳು ನಾಡಿನ ಜನರ ನಂಬಿಕೆ.
ಈ ದಿನವನ್ನೇ ತುಳುನಾಡಿನಲ್ಲಿ ಬಲಿಪಾಡ್ಯಮಿಯಾಗಿ ಆಚರಿಸುವುದು ಪ್ರತೀತಿ. ಈ ದಿನವನ್ನು ಅಯೋಧ್ಯೆಯ ರಾಜ ಶ್ರೀರಾಮ ಸೀತೆ, ಲಕ್ಷ್ಮಣರನ್ನು ಒಳಗೊಂಡು ವನವಾಸ ಮುಗಿಸಿ ಮರಳಿ ಅಯೋಧ್ಯೆಗೆ ಆಗಮಿಸಿದ ದಿನವೆಂದೂ ಉತ್ತರ ಭಾರತದಲ್ಲಿ ಆಚರಿಸುತ್ತಾರೆ. ಕೇರಳದಲ್ಲಿ ಓಣಂ ಹಬ್ಬದ ಹೆಸರಿನಲ್ಲಿ ಬಲಿಯನ್ನು ನೆನೆಯಲಾಗುತ್ತದೆ. ಬಲೀಂದ್ರನನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಎಲ್ಲರೂ ಆರಾಧಿಸುತ್ತಾರೆ. ತುಳುನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲೀಂದ್ರ ಮರವನ್ನು ಹಾಕುವುದು (ಹಾಳೆಯ ಮರ), ಬಾಳೆಯ ದಿಂಡಿನಿಂದ ಮಾಡಲಾದ ವಿಶಿಷ್ಟವಾದ ಬಲೀಂದ್ರನ ಆಕೃತಿಯನ್ನು ತಯಾರಿಸಿ ಅದರ ಮೇಲ್ಭಾಗದಲ್ಲಿ ಛತ್ರಿಯನ್ನು ಕಟ್ಟಿ, ನೆಲ್ಲಿಕಾಯಿ ಮರದ ಸೊಪ್ಪು ಮತ್ತು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಿ ತುಳಸಿಕಟ್ಟೆಯ ಬಳಿ ಇಟ್ಟು ರಾತ್ರಿಯ ವೇಳೆ ಪೂಜೆಯನ್ನು ಮಾಡಿ ಮನೆಯ ಯಜಮಾನ ಬಲೀಂದ್ರನನ್ನು ಜನಪದ ಹಾಡಿನ ಮೂಲಕ ಕರೆಯುವ ಸಂಪ್ರದಾಯ ತುಳುನಾಡಿನಲ್ಲಿ ಇದೆ.
ಪ್ರತೀ ಮನೆಯಲ್ಲಿ ಸಾಮಾನ್ಯ. ವ್ಯವಸಾಯ ಪರಿಕರಗಳಾದ ನೇಗಿಲು, ನೊಗ, ಹಾರೆ, ಪಿಕ್ಕಾಸು, ತೆಗೆಯುವ ಬುಟ್ಟಿ, ಮುಳ್ಳಿನ ಪಿಕ್ಕಾಸು, ಕತ್ತಿ, ಕಳಸೆ, ಸೇರು, ಪಾವು, ಸೆಗಣಿ ಮೆತ್ತಿದ ಬುಟ್ಟಿಗಳನ್ನು ಶುಚಿಗೊಳಿಸಿ ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಕಾಡಿನಲ್ಲಿ ದೊರೆಯುವ ಹಲವು ಬಗೆಯ ಹೂ ಬಳ್ಳಿಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟು ಮೂರು ದಿನ ದೀಪ ಉರಿಸಿ ಬಲೀಂದ್ರನನ್ನು ನೆನೆಯಲಾಗುತ್ತದೆ. ಭತ್ತದ ರಾಶಿ, ಗದ್ದೆ, ತೋಟ, ಹಟ್ಟಿ ಗೊಬ್ಬರದ ಗುಂಡಿಗಳಲ್ಲಿ ಅಗೇಲು (ಬಲಿಗೆ ನೈವೇಧ್ಯ) ಇಡುತ್ತಾರೆ. ಗೋವುಗಳನ್ನು ಸ್ನಾನ ಮಾಡಿಸಿ ಮೈಯೆಲ್ಲಾ ಎಳ್ಳೆಣ್ಣೆ ಹಚ್ಚುತ್ತಾರೆ. ಅನಂತರ ಹೂ ಮಾಲೆ ಹಾಕಿ, ಕಾಲಿಗೆ ನೀರು ಹಾಕಿ ಆರತಿ ಮಾಡಿ, ಅಗೆಲು ಕೊಟ್ಟು ಪೂಜಿಸುತ್ತಾರೆ. ಇತ್ತೀಚಿನ ದಿನಗಳ ಪಾಶ್ಚಿಮಾತ್ಯ ಜೀವನ ಶೈಲಿಯ ನಡುವೆಯೂ ಇಂತಹ ಆಚರಣೆಗಳು ನಿಂತಿಲ್ಲ ಎನ್ನುವುದು ತುಸು ನೆಮ್ಮದಿಯ ವಿಚಾರ.
–ಸಂತೋಷ್ ರಾವ್ ಪೆರ್ಮುಡ ಬೆಳ್ತಂಗಡಿ