Advertisement
ಚೆನ್ನೈ ಮೂಲದ ಅಕ್ಷಯಾ, ಪ್ಲಸ್ ಸೈಝ್ ಮಾಡೆಲ್. ಪ್ಲಸ್ ಸೈಝ್ ಅಂದರೆ ಗೊತ್ತಲ್ಲ, ದಪ್ಪ ದೇಹದ ಅಂತ ಅರ್ಥ. ಮಾಡೆಲ್‌ಗಳು ಬಳುಕುವ ಬಳ್ಳಿಯಂತೆ ಇರಬೇಕೆಂಬ ನಿಯಮ ಮುರಿದಿರುವ ಅಕ್ಷಯಾ, ಈಗ ಬೋಳು ತಲೆಯ ಹುಡುಗಿಯರೂ ಸುಂದರಿಯರೇ ಅಂತ ಸಾಧಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ತಮ್ಮ ಕೂದಲನ್ನು ದಾನ ಮಾಡಿರುವ ಈಕೆ, ಅದೇ ಗೆಟಪ್‌ನಲ್ಲಿ ಫೋಟೊಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ನಾನು ದಪ್ಪಗಿದ್ದೇನೆ, ಕ್ಯಾನ್ಸರ್‌ನಿಂದ ಕೂದಲು ಉದುರುತ್ತಿದೆ ಅಂತೆಲ್ಲಾ ದುಃಖಿಸಬೇಡಿ ಅಂತ ಕರೆ ನೀಡಿರುವ ಅಕ್ಷಯಾ, ತೂಕದ ಕಾರಣದಿಂದ ತಾನು ಅನುಭವಿಸಿದ ನೋವುಗಳನ್ನು ಹೀಗೆ ಹೇಳಿಕೊಂಡಿದ್ದಾರೆ- ಡುಮ್ಮಿ ಎನ್ನುವ ಕಾರಣಕ್ಕಾಗಿ ನಾನು ಜನರಿಂದ ಕೇಳಿಸಿಕೊಂಡ ಗೇಲಿಯ ಮಾತುಗಳು ಒಂದೆರಡಲ್ಲ. ಜೀವನದ ಪ್ರತಿ ಹೆಜ್ಜೆಯಲ್ಲೂ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೇನೆ. ಶಾಲೆಯಲ್ಲಿ ಟೀಚರ್ ನನ್ನನ್ನು ಡ್ಯಾನ್ಸ್‌ಗೆ ಸೇರಿಸುತ್ತಿರಲಿಲ್ಲ. ತೂಕದ ಕಾರಣದಿಂದಲೇ ಅನೇಕ ಅವಕಾಶಗಳು ಕೈ ತಪ್ಪಿ ಹೋದವು. ಇವೆಲ್ಲದರಿಂದ ಬೇಸತ್ತಿದ್ದ ನಾನು ಕೊನೆಗೊಮ್ಮೆ, ಜನರ ಮಾತುಗಳಿಗೆ ಬೆಲೆ ಕೊಡಬಾರದೆಂಬ ಗಟ್ಟಿ ನಿರ್ಧಾರ ಮಾಡಿದೆ. ಅದಾದ ನಂತರ ನಾನು ತಿರುಗಿ ನೋಡಲಿಲ್ಲ. ನಾನೀಗ ನಿರೂಪಕಿ, ರೂಪದರ್ಶಿ, ಪ್ರೇರಣಾದಾಯಕ ಮಾತುಗಾರ್ತಿ; ಅಷ್ಟೇ ಅಲ್ಲ ಲ್ಯಾಕ್ಮೆ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಿದ ಮೊದಲ ಪ್ಲಸ್ ಸೈಝ್ ಮಾಡೆಲ್ ನಾನು! ನನ್ನ ಪ್ರಕಾರ, ಆರೋಗ್ಯವಾಗಿರುವುದು ಮುಖ್ಯವೇ ಹೊರತು, ದೇಹ ದಂಡಿಸಿ, ನೋವು ತಿಂದು ತೂಕ ಇಳಿಸಿಕೊಳ್ಳುವುದಲ್ಲ! ಶರೀರದ ಕುರಿತಾದ ಕೀಳರಿಮೆ ತೊಡೆಯಿರಿ ಅಂತ ಜಾಗೃತಿ ಮೂಡಿಸುವುದು ನನ್ನ ಗುರಿ. ಆ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯೇ ಈ ಫೋಟೊಶೂಟ್… Advertisement
ಬಾಲ್ಡ್ ಅಂಡ್ ಬ್ಯೂಟಿಫುಲ್
08:59 AM Sep 26, 2019 | mahesh |