Advertisement

ನಿಗಮ-ಮಂಡಳಿ ಪಟ್ಟಿಗೆ ಬಾಲವಿಕಾಸ ಅಕಾಡೆಮಿ? 

06:00 AM Nov 03, 2018 | |

ಧಾರವಾಡ: ನಾಟಕಕಾರರು ನಾಟಕ ಅಕಾಡೆಮಿಗೆ‌, ಸಾಹಿತಿಗಳು ಸಾಹಿತ್ಯ ಅಕಾಡೆಮಿಗೆ ಅಷ್ಟೇಯಲ್ಲ, ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರು ಆಯಾ ಅಕಾಡೆಮಿಗಳ ಅಧ್ಯಕ್ಷರಾಗುವುದು ಸರ್ಕಾರದ ನಿಯಮ. ಆದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ
ಶ್ರಮಿಸಿದ ಸಾಹಿತಿಗಳು, ಸಮಾಜ ಸೇವಕರನ್ನು ಅಧ್ಯಕ್ಷರನ್ನಾಗಿ ಪಡೆಯಬೇಕಿದ್ದ ಧಾರವಾಡದಲ್ಲಿನ ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಮಾತ್ರ ಇದೀಗ ಅಧಿಕೃತವಾಗಿ ನಿಗಮ-ಮಂಡಳಿಗಳ ಪಟ್ಟಿಗೆ ಸೇರುತ್ತಿದ್ದು, ರಾಜಕೀಯ ನಿರಾಶ್ರಿತರು, ಟಿಕೆಟ್‌ ವಂಚಿತರು
ಮತ್ತು ಪಕ್ಷದಲ್ಲಿ ಮುನಿಸಿಕೊಂಡವರಿಗೆ ಅವಕಾಶ ನೀಡುವ ವೇದಿಕೆಯಾಗಿ ಮಾರ್ಪಟ್ಟಿದೆ. ಇನ್ನು ಶಾಶ್ವತವಾಗಿ ಇದನ್ನು ನಿಗಮ-ಮಂಡಳಿ ಪಟ್ಟಿಯಲ್ಲಿಯೇ ಇರಿಸುವುದಕ್ಕೆ ತೆರೆಯಲ್ಲಿ ಸಿದ್ಧತೆಗಳು ನಡೆದಿವೆ.

Advertisement

ರಾಜ್ಯದಲ್ಲಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಆರಂಭಗೊಂಡಿದ್ದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ. 2009ರಲ್ಲಿ ಆರಂಭಗೊಂಡಾಗ ರಾಜ್ಯದಲ್ಲಿನ ಮಕ್ಕಳ ಸಾಹಿತಿಗಳು, ಮಕ್ಕಳ ಅಭಿವೃದ್ಧಿಗೆ ಕೆಲಸ ಮಾಡುವ ಅನೇಕ ಸಂಘ ಸಂಸ್ಥೆಗಳು ಸಂತಸ ವ್ಯಕ್ತಪಡಿಸಿದ್ದವು. ಆದರೆ, ಅಕಾಡೆಮಿಯ ಅಧ್ಯಕ್ಷ ಸ್ಥಾನ ನಿಧಾನಕ್ಕೆ ರಾಜಕಾರಣಿಗಳ ಪಾಲಾಗುತ್ತ ಹೋಗಿ, ಕೊನೆಗೆ ಇದೀಗ ಅಧಿಕೃತವಾಗಿ ಅಕಾಡೆಮಿಗಳ ಪಟ್ಟಿಯಿಂದ ಹೊರ ಬಂದು ನಿಗಮ ಮಂಡಳಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ಸಜ್ಜಾಗಿದೆ. 

ಉಳಿದ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬಂದರೆ ಬಾಲ ವಿಕಾಸ ಅಕಾಡೆಮಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ. ಇದನ್ನೆ ನೆಪವಾಗಿಸಿಕೊಂಡ ರಾಜಕೀಯ ಮುಖಂಡರು ಇದನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಸ್ಥಳಾಂತರಿಸಿ, ಕೊನೆಗೆ ನಿಗಮ ಮಂಡಳಿ ಪಟ್ಟಿ ಸೇರಿಸಲು ತೆರೆಯಲ್ಲಿ ಕಸರತ್ತು ನಡೆಸಿದ್ದಾರೆ. 

ಕಳೆದ ನಾಲ್ಕು ವರ್ಷದಲ್ಲಿ 10 ಕೋಟಿ ರೂ. ಗಳಿಗೂ ಅಧಿಕ ಅನುದಾನ ಅಕಾಡೆಮಿಗೆ ಬಂದಿದೆ. ಗ್ರಾಮದಿಂದ ಹಿಡಿದು
ರಾಜ್ಯಮಟ್ಟದವರೆಗೂ ಮಕ್ಕಳ ಒಂದು ದೊಡ್ಡ ಜಾಲವನ್ನು ನಿರ್ಮಿಸಿ, ಸ್ಥಳೀಯ ಮಟ್ಟದಲ್ಲಿನ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಆರಂಭದಲ್ಲಿ ಅಕಾಡೆಮಿ ಶ್ರಮಿಸಿತು. ಆದರೆ, ನಂತರ ಬಂದ ಅಧ್ಯಕ್ಷರುಗಳು ಇದಕ್ಕೆ ಯಾರೂ ಮಣೆ ಹಾಕಲಿಲ್ಲ. ಮಕ್ಕಳ ಮಿತ್ರಪಡೆ ಹೆಸರಿನಲ್ಲಿ ಇದು ನಡೆಯುತ್ತಿತ್ತು. ಆದರೆ, ಕಳೆದ ಐದು ವರ್ಷಗಳಿಂದ ಮಕ್ಕಳ ಮಿತ್ರಪಡೆಗೂ ಗ್ರಹಣ ಹಿಡಿದಿದೆ. ಈಗೇನಿದ್ದರೂ ಬಾಲವಿಕಾಸ ಅಕಾಡೆಮಿ ಬರೀ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದು, ಮಕ್ಕಳ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಧಾರವಾಡದಲ್ಲಿಯೇ ಅಕಾಡೆಮಿ ಸ್ಥಾಪನೆಯಾಗಬೇಕು ಎಂದು ಹಿರಿಯ ಸಾಹಿತಿಗಳಾದ ನಾಡೋಜ ಡಾ|ಪಾಟೀಲ ಪುಟ್ಟಪ್ಪ, ನಾಡೋಜ ಚೆನ್ನವೀರ ಕಣವಿ ಪರಿಶ್ರಮ ಪಟ್ಟಿದ್ದರು. ಆದರೆ, ಕಳೆದ ನಾಲ್ಕೆದು ವರ್ಷಗಳಲ್ಲಿ ಅಕಾಡೆಮಿಯಲ್ಲಿನ ಬೆಳವಣಿಗೆ ನೋಡಿ ಅವರು ಕೂಡ ತೀವ್ರ ಬೇಸರ ವ್ಯಕ್ತಪಡಿಸಿ, ಈ ಭಾಗದ ರಾಜಕೀಯ ಮುಖಂಡರ ಗಮನ ಸೆಳೆದಿದ್ದಾರೆ.

Advertisement

ಬೈಲಾದಲ್ಲೇನಿದೆ?
ರಾಜ್ಯದಲ್ಲಿನ 2 ಕೋಟಿಗೂ ಅಧಿಕ ಮಕ್ಕಳು ಅಕಾಡೆಮಿ ವ್ಯಾಪ್ತಿಗೆ ಬರುತ್ತಿದ್ದು, ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು. ಇದರ ಅಧ್ಯಕ್ಷರು ಕೂಡ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರೇ ಇರಬೇಕು ಎನ್ನುವ ನಿಯಮ ಅಕಾಡೆಮಿಯ ಬೈಲಾ (ನಿಯಮಾವಳಿ)ಯಲ್ಲಿಯೇ ಇದೆ. ಆದರೆ, ಹೆಚ್ಚಿನ ಅನುದಾನ ಲಭ್ಯವಿರುವ ಕಾರಣದಿಂದ ಇದನ್ನು ರಾಜಕಾರಣಿಗಳು ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಬೈಲಾದಲ್ಲಿನ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಧಾರವಾಡ ಮೂಲದ ಸಾಹಿತಿಗಳ ತಂಡವೊಂದು ಧಾರವಾಡ ಹೈಕೋರ್ಟ್‌ ಮೆಟ್ಟಿಲು ಹತ್ತಲು ಸಿದ್ಧತೆ ಮಾಡಿಕೊಂಡಿದೆ. ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಇತರ ಅಕಾಡೆಮಿಗಳಂತೆಯೇ ಮಕ್ಕಳ ಅಭಿವೃದಿಟಛಿ ಕ್ಷೇತ್ರದಲ್ಲಿ ನಿಪುಣರಾದವರನ್ನೇ ನೇಮಿಸಬೇಕು ಎನ್ನುವ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಜ್ಜಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿಯೇ ಇದ್ದು, ಉತ್ತಮ ಅನುದಾನಕ್ಕಾಗಿ ಈ ಇಲಾಖೆ ವ್ಯಾಪ್ತಿಯಲ್ಲಿ ಇದನ್ನು ತರಲಾಗಿದೆ. ಇದನ್ನು ಸಣ್ಣ ಉದ್ದಿಮೆಗಳ ಇಲಾಖೆ ವ್ಯಾಪ್ತಿಗೆ ತಂದು ಅನುದಾನ ಪೂರೈಕೆ ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
● ಹೆಸರು ಹೇಳಲು ಇಚ್ಛಿಸದ ಅಧಿಕಾರಿ

ಅಕಾಡೆಮಿ ತನ್ನ ಬೈಲಾದಲ್ಲಿನ ರೂಪುರೇಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರಿದು ರಾಜಕೀಯ ನಿರಾಶ್ರಿತರ ಕೇಂದ್ರವಾಗುತ್ತಿದ್ದು, ಇದನ್ನು ಸರ್ಕಾರ ತಡೆಯಬೇಕು. 
● ಶಂಕರ ಹಲಗತ್ತಿ, ಮಕ್ಕಳ ಸಾಹಿತಿ, ಅಕಾಡೆಮಿ ಪ್ರಥಮ ಅಧ್ಯಕ್ಷ

● ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next