ಸಂತೆಮರಹಳ್ಳಿ: ತ್ಯಾಗ ಬಲಿದಾನಗಳು ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್ ಹಬ್ಬಕ್ಕೆ ಇನ್ನೊಂದು ವಾರ ಬಾಕಿ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕುರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ.
ಬಕ್ರೀದ್‌ನಲ್ಲಿ ಬೇಡಿಕೆ ಹೆಚ್ಚು: ಬಕ್ರೀದ್ ಹಬ್ಬದಲ್ಲಿ ಕುರಿಗಳಿಗೆ ಬಹುಬೇಡಿಕೆ. ಬಂಡೂರು, ಕಿರುಗಾವಲು ಕುರಿಗಳ ಜೊತೆಯಲ್ಲಿ ಮೇಕೆಗಳಿಗೂ ಬೇಡಿಕೆ ಹೆಚ್ಚಿದೆ. ಚಿಕ್ಕ ತಾಲೂಕು ಹಾಗೂ ಪಟ್ಟಣವಾಗಿರುವ ಯಳಂದೂರಿನಲ್ಲೇ ನೂರಾರು ಕುರಿಗಳು ಪ್ರತಿನಿತ್ಯ ಮಾರಾಟವಾಗುತ್ತವೆ. ಇದಕ್ಕೆ ಮಾರುಕಟ್ಟೆಯಾಗಿ ಪಕ್ಕದ ಸಂತೆಮರಹಳ್ಳಿ ಸಂತೆ ಹಾಗೂ ಗ್ರಾಮೀಣ ಪ್ರದೇಶದ ರೈತರಿಂದಲೇ ಹೆಚ್ಚು ಕುರಿಗಳು ಮಾರಾಟವಾಗುತ್ತವೆ. ಒಂದು ಕುರಿ ತೂಕಕ್ಕೆ ತಕ್ಕಂತೆ 10 ರಿಂದ 25 ಸಾವಿರ ರೂ. ವರೆಗೂ ಮಾರಾಟವಾಗುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ ಮಾಂಸದ ದರ 450 ರಿಂದ 500 ರೂ. ವರೆಗೆ ಇದೆ. ಆದರೆ ಕುರಿ ಕೊಂಡುಕೊಳ್ಳುವವರು ಇಡೀ ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ.
ಕುರಿ ಸಾಕಾಣಿಕ ಸವಾಲಿನ ಕೆಲಸ: ಮಾರಾಟ ಮಾಡಲು ಹಲವು ತಿಂಗಳಿಂದಲೂ ಕುರಿಗಳನ್ನು ತಯಾರು ಮಾಡಲಾಗುತ್ತದೆ. ಕೊಬ್ಬಿದ, ಹೆಚ್ಚು ತೂಕವುಳ್ಳ, ಕೊಂಬಿರುವ ಕುರಿಗಳಿಗೆ ಬೇಡಿಕೆ ಹೆಚ್ಚಾಗುವ ಕಾರಣ ನಾವು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಹಬ್ಬ ಒಂದು ತಿಂಗಳು ಇದೇ ಎನ್ನುವಾಗಲೇ ಇದರ ಹಾರೈಕೆ ಕಡೆ ಹೆಚ್ಚಿನ ಗಮನ ನೀಡುತ್ತೇವೆ. ಇದಕ್ಕೆ ಹುರುಳಿ ಕಾಳಿನಂತಹ ಪೌಷ್ಟಿಕ ಆಹಾರ ನೀಡುವುದು. ಪ್ರತಿನಿತ್ಯ ತಾಜಾ ಹುಲ್ಲನ್ನು ನೀಡುವುದು. ಯಾವುದೇ ಕಾರಣಕ್ಕೂ ಮೇವಿನಲ್ಲಿ ಕೊರತೆ ಬಾರದ ಹಾಗೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಅಲ್ಲದೆ ಕುರಿಗಳು ಸಂಘ ಜೀವಿಗಳಾಗಿರುತ್ತದೆ. ಆದರೂ ಕೆಲವೊಮ್ಮೆ ಜಗಳ ನಡೆದಾಗ ಇದಕ್ಕೆ ಗಾಯಗಳಾಗುವ ಅಪಾಯವಿದೆ.
ಗಾಯವಾದ ಕುರಿ ಬಲಿ ನೀಡಲ್ಲ: ಗಾಯವಾಗಿ ಕುರಿಯ ಯಾವುದಾದರೂ ಅಂಗ ಊನವಾದರೆ ಇದನ್ನು ಬಕ್ರೀದ್ ಹಬ್ಬದ ಬಲಿಗೆ ಕೊಂಡುಕೊಳ್ಳುವುದಿಲ್ಲ. ಇದಕ್ಕೆ ಇಸ್ಲಾಂನಲ್ಲಿ ಆದ್ಯತೆ ಇಲ್ಲ. ಅಲ್ಲದೆ ರೋಗಗ್ರಸ್ತವಾಗಿರುವ ಕುರಿಯನ್ನು ಬಲಿ ನೀಡುವುದಿಲ್ಲ. ಹಾಗಾಗಿ ಈ ಸಮಯ ಗಾಳಿ, ಮಳೆಗಾಲವಾಗಿದ್ದು ಇದನ್ನು ಶೀತದಿಂದ ರಕ್ಷಿಸುವುದು. ಅಂಗಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ ಎನ್ನುತ್ತಾರೆ ಕುರಿ ಸಾಕಾಣಿದಾರ ಬಸವೇಗೌಡ.
ಕುರಿ ಸಾಗಾಣಿಕೆದಾರರಿಗೆ ಹೆಚ್ಚು ಲಾಭ: ಬಕ್ರೀದ್ ಹಬ್ಬ ಬಂತೆಂದರೆ ಕುರಿ ಸಾಗಾಣಿಕೆದಾರರಿಗೆ ಹೆಚ್ಚು ಲಾಭವಾಗುತ್ತದೆ. ನಾನು ಹಲವು ವರ್ಷಗಳಿಂದ ಕುರಿ ಸಾಕುತ್ತಿದ್ದೇನೆ. ಸಂತೆಮರಹಳ್ಳಿ, ತಿ.ನರಸೀಪುರ, ಮೈಸೂರಿನ ಮಾರುಕಟ್ಟೆಗಳಿಗೂ ಕುರಿಯನ್ನು ಕೊಂಡೊಯ್ಯುತ್ತೇನೆ. ಮೈಸೂರು ಇದಕ್ಕೆ ಈ ಸಮಯದಲ್ಲಿ ಕುರಿಗಳಿಗೆ ದೊಡ್ಡ ಮಾರುಕಟ್ಟೆಯಾಗುತ್ತದೆ. ಕೊಬ್ಬಿದ ದಷ್ಟಪುಷ್ಟವಾದ ಹಾಗೂ ಆರೋಗ್ಯಯುತವಾದ ಯಾವುದೇ ಗಾಯಗಳಲ್ಲಿದ ಕುರಿಗಳಿಗೆ ಬೇಡಿಕೆ ಹೆಚ್ಚು.
ನಮ್ಮ ಕುರಿ ಮಂದೆಯಲ್ಲಿ ಇಂತಹ ಕುರಿಗಳನ್ನು ಆಯ್ದುಕೊಂಡು ಆಟೋ, ಇತರೆ ಗೂಡ್ಸ್ ವಾಹನಗಳಲ್ಲಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಬಕ್ರೀದ್ ಹಬ್ಬದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇರೆ ದಿನಗಳ ಹೊರತಾಗಿ ಈ ದಿನಗಳ ಮಾರಾಟದಲ್ಲಿ ಕುರಿಯೊಂದಕ್ಕೆ ಕನಿ ಷ್ಠ 1000 ರೂ. ದಿಂದ 5000 ರೂ. ಹೆಚ್ಚಾಗಿ ಲಾಭ ಸಿಗುತ್ತದೆ ಎಂದು ಕುರಿ ಸಾಕಾಣಿಕೆದಾರ ಗುಂಬಳ್ಳಿಯ ಮಹಾದೇವೇಗೌಡ ಉದಯವಾಣಿಗೆ ಮಾಹಿತಿ ನೀಡಿದರು.
* ಫೈರೋಜ್ ಖಾನ್